More

    ಅಡಕೆ ಮಾರುಕಟ್ಟೆ ಮೇಲೂ ಕರೊನಾ ಕರಿಛಾಯೆ; ದರ ಇಳಿಕೆ

    ವಿಜಯವಾಣಿ ಸುದ್ದಿಜಾಲ ಶಿರಸಿ: ಇತ್ತೀಚಿನ ವರ್ಷಗಳ ಅಡಕೆ ಇತಿಹಾಸದಲ್ಲಿ ಕೆಂಪಡಕೆ (ರಾಶಿ)ಗೆ ಉತ್ತಮ ಧಾರಣೆ ಬಂದಿತ್ತು. ಆದರೆ, ಈಗ ಅದರ ಬೆನ್ನಿಗೇ ಕರೊನಾ ಕಂಟಕದಿಂದ ಬೆಲೆಯಲ್ಲಿ ದಿಢೀರ್ 3 ಸಾವಿರ ರೂಪಾಯಿ ಇಳಿಕೆಯಾಗಿ ಬೆಳೆಗಾರರು ಕಂಗಾಲಾಗುವಂತಾಗಿದೆ.

    ಮಲೆನಾಡಿನ ಯಲ್ಲಾಪುರದಲ್ಲಿ ಕೆಂಪಡಕೆ ವಾರದ ಹಿಂದೆ ಕ್ವಿಂಟಾಲ್ ಒಂದಕ್ಕೆ ಗರಿಷ್ಠ 45 ಸಾವಿರ ರೂಪಾಯಿ ಗಡಿ ದಾಟಿತ್ತು. ಶಿರಸಿ ಮಾರುಕಟ್ಟೆಯಲ್ಲಿ 43 ಸಾವಿರ, ಸಿದ್ದಾಪುರ ಮಾರುಕಟ್ಟೆಯಲ್ಲಿ 40 ಸಾವಿರ ರೂಪಾಯಿ ಗಡಿ ದಾಟಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ, ಏಕಾಏಕಿ ಎದುರಾದ ಕರೊನಾ ಭೀತಿಯಿಂದ ಅಡಕೆ ಮಾರುಕಟ್ಟೆಯಲ್ಲಿ ಕೆಂಪಡಕೆ ದರ ಹಿಮ್ಮುಖವಾಗಿದೆ.

    2014-15ರಲ್ಲಿ ಕೆಂಪಡಕೆ ಕ್ವಿಂಟಾಲ್ ಒಂದಕ್ಕೆ 81 ಸಾವಿರ ರೂ. ಗಡಿ ದಾಟಿದ್ದು, 2017ರಲ್ಲಿ 49 ಸಾವಿರ ರೂ.ಗೆ ಕುಸಿದಿತ್ತು. 2018 ಹಾಗೂ 2019ರಲ್ಲಿ ಸರಾಸರಿ 32 ಸಾವಿರ ರೂ. ಕ್ವಿಂಟಾಲ್ ಒಂದಕ್ಕೆ ಗರಿಷ್ಠ ದರ ಲಭಿಸಿತ್ತು. ಇದೀಗ ಮತ್ತೆ ದರ ಏರಿಕೆಯಾಗಿದ್ದು, ಬೆಳೆಗಾರರು ಇನ್ನಷ್ಟು ದರ ಏರುವ ನಿರೀಕ್ಷೆಯಲ್ಲಿದ್ದಾಗಲೇ ಕರೊನಾ ಇಡೀ ಮಾರುಕಟ್ಟೆಗೆ ಧಕ್ಕೆ ನೀಡುತ್ತಿದೆ. ಮಾ. 11ರಂದು ಕ್ವಿಂಟಾಲ್ ಕೆಂಪಡಕೆಗೆ ಕನಿಷ್ಠ 38599- ಗರಿಷ್ಠ 41199 ಇರುವುದು ಇಳಿಮುಖವಾಗುತ್ತ ಕ್ರಮೇಣ ಮಾ. 13ರಂದು ಕನಿಷ್ಠ 36558- ಗರಿಷ್ಠ 39599, ಮಾ. 14ರಂದು ಕನಿಷ್ಠ 35518- ಗರಿಷ್ಠ 39408, ಮಾ. 16ರಂದು ಕನಿಷ್ಠ 36089-ಗರಿಷ್ಠ 38658 ರೂ. ದರ ಲಾಖಲಾಗಿತ್ತು. ಪಾನ್, ಗುಟ್ಖಾ ಹಾಕಿ ಎಲ್ಲೆಂದರಲ್ಲಿ ಉಗುಳುವವರಿಗೆ ಕರೊನಾ ಆತಂಕ ಕಾಡಿದ ಬೆನ್ನಿಗೆ ಖರೀದಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಶೇ. 5ರಷ್ಟು ಹೊಡೆತ ಬಿದ್ದಿದೆ. ಜತೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಹಿಂಜರಿತದ ಕಾರಣ ಅಡಕೆ ವಹಿವಾಟಿನ ಮೇಲೂ ಋಣಾತ್ಮಕ ದೃಷ್ಟಿ ಬಿದ್ದಿದೆ. ಹೀಗಾಗಿ, ದರ ಕಡಿಮೆಯಾಗುತ್ತಿದೆ ಎಂಬುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರವಾಗಿದೆ.

    ಮೂರ್ನಾಲ್ಕು ತಿಂಗಳಿಂದ ನಿಧಾನವಾಗಿ ಏರುತ್ತಿದ್ದ ಕೆಂಪಡಕೆ ದರವು ಫೆ. 20ರಂದು ಶಿರಸಿಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ 40169 ರೂ. ಗರಿಷ್ಠ ದರ ದಾಖಲಿಸಿ 2 ವರ್ಷಗಳಲ್ಲೇ ಉತ್ತಮ ದರವಾಗಿ ಗುರುತಿಸಿಕೊಂಡಿತ್ತು. ಅದೇ ದಿನ ಯಲ್ಲಾಪುರ ಮಾರುಕಟ್ಟೆಯಲ್ಲಿ 43 ಸಾವಿರ ರೂ.ಗಿಂತ ಹೆಚ್ಚು ದರ ದಾಖಲಾಗಿತ್ತು. ಹಂಗಾಮಿಗೆ ಸರಿಯಾಗಿ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಅಡಕೆ ಬೆಳೆಗಾರರು ಇದರಿಂದ ಖುಷಿಯಾಗಿದ್ದರು. ಆದರೆ, ಈಗ ಕರೊನಾ ಭೀತಿಯಿಂದ ಮತ್ತೆ ದರ ಇಳಿತ ಕಾಣುತ್ತಿರುವುದು ಆತಂಕಕ್ಕೆ ನೂಕಿದೆ. | ಯಶವಂತ ಪಾಟೀಲ ಅಡಕೆ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts