More

    ಅಡಕೆ ಬೆಳೆಗಾರರಿಗೆ ಕೈಗೆಟುಕದ ಬೆಳೆ ವಿಮೆ ಹಣ

    ರಾಜೇಂದ್ರ ಶಿಂಗನಮನೆ ಶಿರಸಿ: ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ (ಹವಾಮಾನ ಇಲಾಖೆ) ನೀಡಿದ ಗೊಂದಲದ ವರದಿಯಿಂದಾಗಿ ಈ ವರ್ಷ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಿದ್ದ ಜಿಲ್ಲೆಯ ವಾನಳ್ಳಿ ಪಂಚಾಯಿತಿ ಒಳಗೊಂಡು ಒಟ್ಟು 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಕೆ ಕೃಷಿಕರು ಹವಾಮಾನ ಆಧಾರಿತ ಬೆಳೆ ವಿಮೆ ಹಣದಿಂದ ವಂಚಿತರಾಗಿದ್ದಾರೆ.

    ಹವಾಮಾನ ಇಲಾಖೆಯು ತೋಟಗಾರಿಕೆ ಇಲಾಖೆ ಹಾಗೂ ಬೆಳೆ ವಿಮೆ ಕಂಪನಿಗೆ ನೀಡಿದ ವರದಿಗಳಲ್ಲಿ ಸಾಮ್ಯತೆಯಿಲ್ಲದ ಕಾರಣ 6 ಗ್ರಾಮ ಪಂಚಾಯಿತಿಗಳ 18ರಿಂದ 20 ಸಾವಿರ ಅಡಕೆ ಬೆಳೆಗಾರರಿಗೆ ಬೆಳೆ ವಿಮೆ ಜಮಾ ಆಗಿಲ್ಲ. ಶಿರಸಿ 2, ಯಲ್ಲಾಪುರ 1, ಸಿದ್ದಾಪುರ 2 ಹಾಗೂ ಹೊನ್ನಾವರ 1 ಗ್ರಾಮ ಪಂಚಾಯಿತಿ ಕೃಷಿಕರಿಗೆ ಹಣ ಬರಬೇಕಾಗಿದೆ.

    ಶಿರಸಿ ತಾಲೂಕಿನ ವಾನಳ್ಳಿ, ಸೋಂದಾ, ಯಲ್ಲಾಪುರದ ಮಾವಿನಮನೆ, ಸಿದ್ದಾಪುರದ ತ್ಯಾಗಲಿ, ಕಾನಸೂರು ಹಾಗೂ ಹೊನ್ನಾವರದ ಮಣ್ಕಿ ಚಿತ್ತಾರ ಗ್ರಾಮ ಪಂಚಾಯಿತಿ ಅಡಕೆ ಬೆಳೆಗಾರರಿಗೆ ಬೆಳೆ ವಿಮೆ ಬರುವುದು ಬಾಕಿಯಿದೆ.

    ಸೇರ್ಪಡೆಯೇ ಆಗಿಲ್ಲ: 2019ರ ಆಗಸ್ಟ್ 6ರಂದು 24 ಗಂಟೆಯಲ್ಲಿ 398.5 ಮಿ.ಮೀ. ಮಳೆ ಸುರಿಯುವ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶ ಪಟ್ಟಿಯ ಅಗ್ರ ಸ್ಥಾನದಲ್ಲಿ ವಾನಳ್ಳಿ ಪಂಚಾಯಿತಿ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ದಾಖಲಿಸಿತ್ತು. ಆದರೆ, ತೋಟಗಾರಿಕೆ ಇಲಾಖೆ ಮತ್ತು ವಿಮಾ ಕಂಪನಿಗೆ ಹವಾಮಾನ ಇಲಾಖೆ ನೀಡಿದ ವರದಿಯಲ್ಲಿ ವಾನಳ್ಳಿ ಪಂಚಾಯಿತಿ ಸೇರ್ಪಡೆಯೇ ಆಗಿಲ್ಲ!. ಹೀಗಾಗಿ, ಈ ವ್ಯಾಪ್ತಿಯ 4 ಸಾವಿರಕ್ಕೂ ಹೆಚ್ಚಿನ ಅಡಕೆ ಬೆಳೆಗಾರರು ಬೆಳೆ ವಿಮೆಯಿಂದ ವಂಚಿತವಾಗಿದ್ದಾರೆ.

    ಪ್ರತಿ ವರ್ಷ ಬೆಳೆ ಸಾಲ ಪಡೆಯುವ ಸಂದರ್ಭದಲ್ಲಿ ಪ್ರಾಥಮಿಕ ಸಹಕಾರಿ ಸಂಘವು ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಕಡ್ಡಾಯವಾಗಿ ತುಂಬಿಸಿಕೊಳ್ಳುತ್ತದೆ. ಇದರಿಂದ ಜಿಲ್ಲೆಯ ಬಹುತೇಕ ರೈತರಿಗೆ ಬೆಳೆ ವಿಮೆ ಸಂದಾಯವಾಗಿ ಅನುಕೂಲವೂ ಆಗಿತ್ತು. ಜಿಲ್ಲೆಯಲ್ಲಿ 60 ಕೋಟಿ ರೂ.ಗಳಿಗೂ ಅಧಿಕ ಬೆಳೆ ವಿಮೆ ಜಮಾ ಆದರೂ ಈ 6 ಗ್ರಾಮ ಪಂಚಾಯಿತಿಯ ರೈತರು ಮಾತ್ರ ಹವಾಮಾನ ಇಲಾಖೆ ಯಡವಟ್ಟಿನಿಂದ ವಿಮಾ ಮೊತ್ತಕ್ಕಾಗಿ ಕಾಯುವಂತಾಗಿದೆ.

    ಮಿಲಾಪಿ ಸಾಧ್ಯತೆ: ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿದ್ದ ಮಳೆಯನ್ನು ಮಳೆ ಮಾಪನ ಕೇಂದ್ರದ ಮೂಲಕ ಆಯಾ ದಿನದಂದು ದಾಖಲಿಸಬೇಕು. ಅಂತಿಮವಾಗಿ ಸರ್ಕಾರದ ನಿರ್ದೇಶನದಂತೆ ವಿಮಾ ಕಂಪನಿಗೆ ಹಾಗೂ ತೋಟಗಾರಿಕಾ ಇಲಾಖೆಗಳಿಗೆ ಸಲ್ಲಿಸಬೇಕು. ಆದರೆ, ಆಯಾ ದಿನದ ಮಳೆ ಪ್ರಮಾಣ ದಾಖಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ವರದಿಯಲ್ಲಿವೆ. ಹೀಗಾಗಿ, ವಿಮಾ ಕಂಪನಿ ವಿಮಾ ಮೊತ್ತ ನೀಡಲು ನಿರಾಕರಿಸುತ್ತಿದೆ. ವಿಮಾ ಮೊತ್ತ ಕಡಿತ ಮಾಡಲು ಮಳೆ ಪ್ರಮಾಣ ದಾಖಲಿಸುವ ಅಧಿಕಾರಿ ಹಾಗೂ ವಿಮಾ ಕಂಪನಿಯ ನಡುವೆ ಹೊಂದಾಣಿಕೆಯಾಗಿರುವ ಸಾಧ್ಯತೆ ಇದೆ. | ಹೆಸರು ಹೇಳಲಿಚ್ಛಿಸದ ಹವಾಮಾನ ಇಲಾಖೆಯ ಅಧಿಕಾರಿ

    ಬೆಳೆ ವಿಮಾ ಪರಿಹಾರವು ಜಿಲ್ಲೆಯ ಎಲ್ಲ ರೈತರಿಗೆ ಏಕಕಾಲದಲ್ಲಿ ಸಿಗುತ್ತಿಲ್ಲ. ಈ ಕುರಿತು ಯಾವುದೇ ಅಧಿಕಾರಿ, ಇಲಾಖೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ. ಹೀಗಾಗಿ, ರೈತರು ತಮಗೆ ಬರಬೇಕಾದ ಪರಿಹಾರ ಮೊತ್ತಕ್ಕಾಗಿ ಅಲೆದಾಡುವ ಸ್ಥಿತಿ ಎದುರಾಗಿದೆ. ಹಾಗಾಗಿ ಪಂಚಾಯಿತಿವಾರು ವಿಮಾ ಪರಿಹಾರ ಮಾಹಿತಿಯನ್ನು ಪರಿಹಾರ ಬಿಡುಗಡೆಗೂ ಮುನ್ನವೇ ಹಾಕುವಂತಾಗಬೇಕು. | ಜಿ.ಆರ್. ಹೆಗಡೆ ಬೆಳ್ಳೆಕೇರಿ ಯಡಳ್ಳಿ ಸಹಕಾರಿ ಸಂಘದ ಅಧ್ಯಕ್ಷ

    ಜಿಲ್ಲಾದ್ಯಂತ ಆಗಸ್ಟ್​ನಲ್ಲಿ ಬಿದ್ದ ಮಳೆಯೊಂದೇ ಬೆಳೆ ವಿಮೆಗೆ ಅರ್ಹತೆ ಪಡೆಯಲು ಸಾಕು. ಆದರೆ, ಹವಾಮಾನ ಇಲಾಖೆ ಅಧಿಕಾರಿಗಳು ವಿಮಾ ಕಂಪನಿಗೆ ನೀಡಿದ ವರದಿ ಹಾಗೂ ತೋಟಗಾರಿಕೆ ಇಲಾಖೆಗೆ ನೀಡಿದ ವರದಿಯಲ್ಲಿ ವ್ಯತ್ಯಾಸ ಮಾಡಿದ್ದಾರೆ. ಯಾವ ಕಾರಣಕ್ಕೆ ಗೊಂದಲದ ವರದಿ ನೀಡಿದ್ದಾರೆಂಬುದು ಸ್ಪಷ್ಟವಾಗಬೇಕು. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ವಿಮಾ ಕಂಪನಿಯವರು ರೈತರಿಗೆ ನೇರವಾಗಿ ಹಣ ಜಮಾ ಮಾಡಿದರೂ ಅದರ ಕುರಿತು ಕೆಡಿಸಿಸಿ ಬ್ಯಾಂಕ್​ಗೆ ಮಾಹಿತಿ ಸಿಗುವಂತೆ ಆಗಬೇಕು ಮತ್ತು ಉಳಿದ ರೈತರಿಗೂ ಶೀಘ್ರದಲ್ಲೇ ವಿಮೆ ದೊರಕುವಂತೆ ಆಗಬೇಕು. | ಎಸ್.ಎನ್.ಭಟ್ಟ ರೈತ ಹೋರಾಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts