More

    ಅಡಕೆ ತೋಟ ನಾಶ ವಿರುದ್ಧ ಸಿಜೆಗೆ ಪತ್ರ; ಮಾನವಹಕ್ಕು ಆಯೋಗಕ್ಕೂ ದೂರು: ತೀ.ನ.ಶ್ರೀನಿವಾಸ್

    ಸಾಗರ: ಸೊರಬ ತಾಲೂಕಿನ ತಾಳಗುಪ್ಪ ಗ್ರಾಮದ ಆರು ರೈತರ ತೋಟ ನಾಶ ಮಾಡಿದ್ದು ಮತ್ತು ಸಿಡ್ಡಿಹಳ್ಳಿ ನಿವಾಸಿಗಳಿಗೆ ಒಕ್ಕಲೆಬ್ಬಿಸಲು ನೋಟಿಸ್ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಹೇಳಿದರು.
    ತಾಳಗುಪ್ಪ ಗ್ರಾಮದ 6 ರೈತರ ತೋಟ ನಾಶ ಮಾಡಿ ದೌರ್ಜನ್ಯ ನಡೆಸಿರುವ ಅರಣ್ಯಾಧಿಕಾರಿಗಳ ಮೇಲೆ ಮಾನವಹಕ್ಕು ಆಯೋಗಕ್ಕೂ ದೂರು ಸಲ್ಲಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿ ತಿಳಿಸಿದರು.
    ತಾಳಗುಪ್ಪ ಗ್ರಾಮದ ಆರು ರೈತರ 20 ಎಕರೆ ತೋಟವನ್ನು ನಾಶ ಮಾಡಿ ಬಾಳೆ ಮತ್ತು ತೆಂಗಿನ ಮರಗಳನ್ನು ಕಡಿದು ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ. ಹಾಲಿ ಶಾಸಕ ಕುಮಾರ ಬಂಗಾರಪ್ಪ ಮತ್ತು ಚುನಾವಣೆಗೆ ಸ್ಪರ್ಧೆ ಮಾಡಲು ಸಜ್ಜಾಗಿರುವ ಮಾಜಿ ಶಾಸಕ ಮಧು ಬಂಗಾರಪ್ಪ ರೈತರ ಕಷ್ಟವನ್ನು ಕೇಳಿಲ್ಲ. ದೌರ್ಜನ್ಯಕ್ಕೆ ಒಳಗಾದ ರೈತರು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಬಾಕಿ ಇರುವಾಗಲೇ ಅರಣ್ಯಾಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದರ ಜತೆಗೆ ಅರಣ್ಯಹಕ್ಕು ಕಾಯ್ದೆಯಡಿ ರೈತರು ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಸಮಿತಿಯಲ್ಲಿ ಅರ್ಜಿ ಇರುವಾಗ ಒಕ್ಕಲೆಬ್ಬಿಸಬಾರದು ಎನ್ನುವ ನಿಯಮವಿದೆ. ಇದರ ಜತೆಗೆ 27-04-1978ಕ್ಕಿಂತ ಹಿಂದೆ ಸಾಗುವಳಿ ಮಾಡಿಕೊಂಡು ಬಂದಿದ್ದರೆ ಅಂತಹರನ್ನು ಒಕ್ಕಲೆಬ್ಬಿಸಬಾರದು ಎನ್ನುವ ನಿಯಮವಿದೆ. ಅರಣ್ಯ ಇಲಾಖೆ ಈ ಎಲ್ಲ ನಿಯಮ ಗಾಳಿಗೆ ತೂರಿದೆ ಎಂದು ದೂರಿದರು.
    ಜಿಲ್ಲೆಯಲ್ಲಿ 80ಸಾವಿರಕ್ಕೂ ಹೆಚ್ಚು ಅರಣ್ಯಭೂಮಿ ಸಾಗುವಳಿದಾರರಿದ್ದಾರೆ. ಸೊರಬದ ಕಾನೂನು ಪಂಡಿತನೊಬ್ಬ ಬಡ ರೈತರಿಗೆ ಬೇರೆಬೇರೆ ರೀತಿಯ ಕಾನೂನು ತೊಡಕು ಉಂಟು ಮಾಡುವ ಮೂಲಕ ವಿಘ್ನಸಂತೋಷವನ್ನು ಅನುಭವಿಸುತ್ತಿದ್ದಾನೆ. ಸರ್ಕಾರ ಇಂತಹ ಸಂದರ್ಭದಲ್ಲಿ ವಸ್ತುನಿಷ್ಠವಾಗಿ ಪರಿಶೀಲನೆ ನಡೆಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಆರು ಜನ ರೈತರನ್ನು ಒಕ್ಕಲೆಬ್ಬಿಸಿರುವ ಕುರಿತು ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ಸಲ್ಲಿಸಿ, ಮಾನವಹಕ್ಕು ಆಯೋಗಕ್ಕೂ ಮನವಿ ಸಲ್ಲಿಸಲಾಗುತ್ತದೆ.
    ಸಿಡ್ಡಿಹಳ್ಳಿಯಲ್ಲಿ 140ಕ್ಕೂ ಹೆಚ್ಚು ಕುಟುಂಬಗಳು ಅರಣ್ಯಭೂಮಿಯಲ್ಲಿ ವಾಸ ಮಾಡುತ್ತಿದ್ದು ರೈತರು ಅರಣ್ಯಹಕ್ಕು ಕಾಯ್ದೆಯಡಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇತ್ಯರ್ಥದ ಹಂತದಲ್ಲಿದೆ. ಸಾಗರ ಡಿಎಫ್‌ಒ ಮತ್ತು ಸೊರಬ ಎಸಿಎಫ್ ರೈತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಿಡ್ಡಿಹಳ್ಳಿ ರೈತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒಕ್ಕಲೆಬಿಸಬಾರದು ಎಂದು ಕೋರಿದ್ದಾರೆ. ಆದರೂ ಅರಣ್ಯ ಇಲಾಖೆ ನೋಟಿಸ್ ನೀಡಿರುವ ಕ್ರಮ ಖಂಡನೀಯ. ರಾಜ್ಯ ಸರ್ಕಾರ ರೈತರನ್ನು ದಮನ ಮಾಡಲು ಮುಂದಾಗುತ್ತಿರುವ ಕ್ರಮವನ್ನು ಸಮಿತಿ ಖಂಡಿಸುತ್ತದೆ.
    ಎಲ್ಲ ಪಕ್ಷಗಳು ರೈತರ ಬಗ್ಗೆ ಬರೇ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ಹೊರತು ಸಂಕಷ್ಟಕ್ಕೆ, ಸಮಸ್ಯೆಗೆ ಸ್ಪಂದಿಸದೆ ಇರುವುದು ದುರ್ದೈವ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts