More

    ಅಗ್ಗದ ಬೆಲೆಗೆ ದುಬಾರಿ ಮಾವು ಮಾರಾಟ, ಲಾಕ್‌ಡೌನ್‌ನಿಂದ ವ್ಯಾಪಾರಿಗಳಿಗೆ ಹುಳಿ ಹಿಂಡಿದ ಹಣ್ಣುಗಳ ರಾಜ

    ಧನಂಜಯ ಗುರುಪುರ
    ಕರೊನಾ ಲಾಕ್‌ಡೌನ್‌ನಿಂದಾಗಿ ಎರಡು ಸೀಸನ್‌ಗಳಲ್ಲಿ ಸುಲಭದಲ್ಲಿ ಖರೀದಿಗೆ ಸಿಗದ ಮಾವಿನ ಹಣ್ಣು, ಈಗ ಕೊಳ್ಳುವವರಿಲ್ಲದೆ ರಸ್ತೆ ಬದಿ ವ್ಯಾಪಾರಕ್ಕೆ ಸೀಮಿತವಾಗಿದೆ.

    ಅಕಾಲಿಕ ಮಳೆಯಿಂದಾಗಿ ಒಮ್ಮೆ ಮಾವಿನ ಹೂವು ಕರಟಿ ಹೋಗಿದ್ದರೆ, ಮತ್ತೊಂದು ಅವಧಿಗೆ ಮಳೆ-ಬಿಸಿಲಿಗೆ ಮಾವಿನ ಮಿಡಿಯ ಬೆಳವಣಿಗೆ ಕುಂಠಿತವಾಗಿದೆ. ಪರಿಣಾಮವಾಗಿ ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಮಾವಿಗೆ ಬರ ಬಂದಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಮತ್ತು ಆಂಧ್ರದಿಂದ ಜಿಲ್ಲೆಗೆ ಮಲ್ಲಿಕಾ, ಆಪೂಸ್, ರಸಪೂರಿ, ಮಂಗನ್ಪಳ್ಳಿ, ನೀಲಂ, ಬಾದಾಮಿ, ಸೇಂದೂರು, ಲಾಲ್‌ಬಾಗ್‌ನಂತಹ ವಿವಿಧ ತಳಿಯ ಲೋಡ್‌ಗಟ್ಟಲೆ ಮಾವು ಬಂದು ಬಿದ್ದಾಗ ಇಲ್ಲಿ ಲಾಕ್‌ಡೌನ್. ಇದರಿಂದ ಮಾವಿಗೆ ಮಾರುಕಟ್ಟೆ ಇಲ್ಲದಂತಾಯಿತು. ಎಲ್ಲ ಮಾವು ಸಿಕ್ಕ ಬೆಲೆಗೆ ಎಪಿಎಂಸಿ ಉಗ್ರಾಣ ಸೇರಲಾರಂಭಿಸಿತು. ಹಾಗಾಗಿ ಈ ಬಾರಿ ಸಗಟು ವ್ಯಾಪಾರಿಗಳಿಗೆ ಮಾವು ಸಿಹಿ ಬದಲಿಗೆ ಹುಳಿಯಾಗಿ ಪರಿಣಮಿಸಿದೆ. ಅಂದ ಮಾತ್ರಕ್ಕೆ ಮಾವಿಗೆ ಬೇಡಿಕೆ ಇಲ್ಲವೆಂದಲ್ಲ. ಮಾವು ಮಾರಾಟದಿಂದ ಲಾಭ ಬರುವ ಹೊತ್ತಿಗೆ ಸಾಗಾಟ ಸ್ಥಗಿತಗೊಂಡು ಸಮಸ್ಯೆ ಬಿಗಡಾಯಿಸಿದೆ.

    ಇನ್ನೂ ಒಂದೂವರೆ ತಿಂಗಳು ಮಾವಿನ ಸೀಸನ್ ಇದ್ದು, ಹೆಚ್ಚು ಮಳೆಯಾಗದೆ ಉತ್ತಮ ಹವಾಮಾನ ಮುಂದುವರಿದಲ್ಲಿ ವ್ಯಾಪಾರಕ್ಕೆ ಹಾಕಿದ ಹಣವಾದರೂ ಬರಬಹುದು. ಒಟ್ಟಾರೆಯಾಗಿ ಕರೊನಾದಿಂದ ಹಣ್ಣಿನ ವ್ಯಾಪಾರದಲ್ಲಿ ಕೈಸುಟ್ಟುಕೊಂಡೆವು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಗುರುಪುರ, ಪೆರ್ಮಂಕಿ, ವಾಮಂಜೂರು, ಕೈಕಂಬ ಮೊದಲಾದೆಡೆಯ ಸಗಟು ಮಾವು ವ್ಯಾಪಾರಿಗಳೆಲ್ಲರ ಅಭಿಪ್ರಾಯವೂ ಇದೇ ಆಗಿದೆ.

    ವಾಡಿಕೆಯಂತೆ ಹೂಬಿಟ್ಟಾಗಲೇ ಆಂಧ್ರ ಮತ್ತು ಕರ್ನಾಟಕದ ಕೆಲವು ಮಾವಿನ ತೋಪುಗಳನ್ನು ಮುಂಗಡವಾಗಿ ಪಡೆಯಲಾಗುತ್ತದೆ. ಈ ಬಾರಿ ಮಾವು ವ್ಯಾಪಾರಕ್ಕಾಗಿ ಸುಮಾರು 17 ಲಕ್ಷ ರೂ. ಹಾಕಿದ್ದೇನೆ. ಲಾಕ್‌ಡೌನ್‌ನಿಂದಾಗಿ ಲೋಡ್‌ಗಟ್ಟಲೆ ಮಾವು ಕೊಳೆತು, ವ್ಯಾಪಾರ ಸಂಪೂರ್ಣ ನಷ್ಟವಾಗಿದೆ. ಕೆಲಸದವರಿಗೆ ಸಂಬಳ ನೀಡುವುದು ಕಷ್ಟವಾಗಿದೆ. ಮಾರುಕಟ್ಟೆಗಳಲ್ಲಿ ಕೆ.ಜಿಗೆ 150-180 ರೂ.ಗೆ ಮಾರಾಟವಾಗುತ್ತಿದ್ದ ಮಾವು ಈಗ ಹಳ್ಳಿಗಳಲ್ಲಿ ಮತ್ತು ರಸ್ತೆ ಬದಿ 30-40 ರೂ.ಗೆ ಮಾರಾಟವಾಗುತ್ತಿದೆ. ಇಷ್ಟಿದ್ದರೂ ಕೊಳ್ಳುವವರಿಲ್ಲದಂತಾಗಿದೆ.
    ಮುಹಮ್ಮದ್ ಅಶ್ರಫ್ ಉಳಾಯಿಬೆಟ್ಟು, ಗುರುಪುರದ ಮಾವಿನ ಸಗಟು ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts