More

    ಅಗತ್ಯ ವಸ್ತುಗಳ ಕೊರತೆಯಾಗದಿರಲಿ

    ಯಾದಗಿರಿ: ಕರೊನಾ ವೈರಸ್ ಪರಿಣಾಮಕಾರಿಯಾಗಿ ತಡೆಯಲು ದೇಶಾದ್ಯಂತ ಮೇ 3ರವರೆಗೆ ಲಾಕ್ಡೌನ್ ವಿಧಿಸಲಾಗಿದ್ದು, ಜಿಲ್ಲೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೊನಾ ವೈರಸ್ ತಡೆಗಾಗಿ ರಚಿಸಿರುವ ಸಮಿತಿ ಅಧಿಕಾರಿಗಳೊಂದಿಗೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಪ್ರತಿ ವಾರ ವಾಣಿಜ್ಯ ತೆರಿಗೆ ಇಲಾಖೆಯಿಂದ ಅಗತ್ಯ ವಸ್ತುಗಳ ಬೆಲೆಗಳನ್ನು ಪಡೆದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ದರ ಪರಿಶೀಲಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ ಎಂದು ತಿಳಿಸಿದರು.

    ವಿವಿಧ ಸಮಿತಿಗಳನ್ನು ರಚಿಸಿ, ನೇಮಕ ಮಾಡಲಾದ ಅಧಿಕಾರಿಗಳು ತಮ್ಮ ಜವಾಬ್ದಾರಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿದಿನ ವರದಿ ಸಲ್ಲಿಸಬೇಕು. ಇದರ ಜತೆಗೆ ಅಗತ್ಯ ಸೇವೆಗಳ ಇಲಾಖೆ ಅಧಿಕಾರಿಗಳು ಮೇ ತಿಂಗಳ ಕೊನೆಯವರೆಗೆ ತಮ್ಮ ಇಲಾಖೆ ಕಾರ್ಯಗಳಿಗೂ ಚ್ಯುತಿ ಬರದಂತೆ ಕಾರ್ಯಪಟ್ಟಿಯನ್ನು ಸಿದ್ಧಪಡಿಸಿಕೊಂಡು ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು.
    ಜಿಲ್ಲೆಯಲ್ಲಿ ಉಂಟಾದ ಬೆಳೆ ನಷ್ಟ ಪರಿಹಾರ ತಂತ್ರಾಂಶದಲ್ಲಿ ನಮೂದಿಸಬೇಕು. ಪಪ್ಪಾಯಿ ಮತ್ತು ಬಾಳೆ ಬೆಳೆಗಾರರಿಗೆ ಮಾರಾಟಗಾರರೊಂದಿಗೆ ಸಂಪರ್ಕ ಕಲ್ಪಿಸಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು ಅವರಿಗೆ ಸೂಚಿಸಿದರು.
    ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ ಮಾತನಾಡಿ, ಜಿಲ್ಲೆಯಲ್ಲಿ 1200 ಹಮಾಲರಿಗೆ ಪಾಸ್ ವಿತರಿಸಲಾಗಿದೆ. ರೈತರ ಹೊಲಗಳಿಗೆ ಹೋಗಿ ಭತ್ತ ಖರೀದಿ ನಡೆಯುತ್ತಿದೆ. ಇದರಿಂದ ರೈತರ ಪ್ರತಿ ಕ್ವಿಂಟಲ್ಗೆ 50 ರೂ. ವ್ಯತ್ಯಾಸ ಬರುತ್ತಿದೆ ಎಂದು ತಿಳಿಸಿದರು.

    ಪಡಿತರ ಚೀಟಿ ಇಲ್ಲದವರು ಮತ್ತು ಅಲೆಮಾರಿ ಜನಾಂಗದವರಿಗೆ ಆಹಾರ ಧಾನ್ಯ ವಿತರಿಸಿದ ಬಗ್ಗೆ ವರದಿ ಸಲ್ಲಿಸುವಂತೆ ಹಾಗೂ ಪಡಿತರ ವಿತರಣೆ ಮಾಡುವಾಗ ಸಾಮಾಜಿಕ ಅಂತರ ಕಾಪಾಡಲು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ್ ಅವರಿಗೆ ಡಿಸಿ ಸೂಚಿಸಿದರು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಮಹಿಳಾ ಜನ ಧನ ಖಾತೆಗಳಿಗೆ ಹಣ ಜಮಾ ಆಗಿರುವುದರಿಂದ ಬ್ಯಾಂಕ್ಗಳ ಎದುರು ಜನಸಂದಣಿ ಕಂಡುಬರುತ್ತಿದೆ. ಇದನ್ನು ತಪ್ಪಿಸಲು ಬ್ಯುಸಿನೆಸ್ ಕರೆಸ್ಪಾಂಡೆಂಟ್ಗಳ ಮೂಲಕ ಹಳ್ಳಿಹಳ್ಳಿಗಳಲ್ಲಿ ಖಾತೆದಾರರಿಗೆ ಅವರ ಹಣ ನೀಡುವ ವ್ಯವಸ್ಥೆ ಮಾಡಬೇಕು. ಇನ್ನು ಬ್ಯಾಂಕ್ಗಳ ಎದುರು ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಪಾಡಬೇಕು. ಟೆಂಟ್ ವ್ಯವಸ್ಥೆ ಮಾಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೃಷ್ಣಾ ಅವರಿಗೆ ಸೂಚಿಸಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ವ್ಯಕ್ತಿ ಪಾಸ್ ಇದ್ದಾಗ ವಾಹನ ಪಾಸ್ ಅಗತ್ಯವಿಲ್ಲ. ಕೆಲಸದ ಸ್ಥಳಕ್ಕೆಕಾರ್ಮಿಕರನ್ನು ಕರೆದುಕೊಂಡು ಹೋಗುವಾಗ ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್ ಧರಿಸುವುದು ಸೇರಿ ಇನ್ನಿತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts