More

    ಅಕ್ಷರ ಲೋಕಕ್ಕೆ ಮಕ್ಕಳ ಆಗಮನ

    ಬೆಳಗಾವಿ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲಾ-ಕಾಲೇಜ್‌ಗಳು ಪುನರಾರಂಭಗೊಂಡ ಮೊದಲ ದಿನವಾದ ಶುಕ್ರವಾರ, ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ನಗರ ಪ್ರದೇಶಗಳಲ್ಲಿ ಕೆಲವು ಕಡೆ ಮಾತ್ರ ಪಿಯು ವಿಭಾಗದ ವಿದ್ಯಾರ್ಥಿಗಳು ಕಾಲೇಜ್‌ಗೆ ಬರಲು ಹಿಂಜರಿದಿದ್ದಾರೆ.

    ಕರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಲ್ಲಿ ಶಾಲಾ- ಕಾಲೇಜ್‌ಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಸುಮಾರು 10 ತಿಂಗಳ ಬಳಿಕ 2021ರ ಜನವರಿ 1ರಂದು ಪ್ರೌಢಶಾಲೆ ಮತ್ತು ದ್ವಿತೀಯ ಪಿಯುಸಿ ಕಾಲೇಜ್ ಪುನರಾರಂಭಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದಲೇ ಶಾಲಾ-ಕಾಲೇಜ್ ಸಿಬ್ಬಂದಿ, ಕೊಠಡಿ ಸ್ವಚ್ಛಗೊಳಿಸಿ, ಸ್ಯಾನಿಟೈಸರ್ ಸಿಂಪಡಿಸಿದ್ದರು.

    ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸ್ಥಳೀಯ ಸಂಸ್ಥೆ, ಅನುದಾನಿತ, ಅನುದಾನ ರಹಿತ, ಕೇಂದ್ರೀಯ ವಿದ್ಯಾಲಯ ಸೇರಿ ಒಟ್ಟು 4,423 ಪ್ರಾಥಮಿಕ, 1,124 ಪ್ರೌಢಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ 8,93,656 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ 80 ಸಾವಿರಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ಮಕ್ಕಳಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    60 ಸಾವಿರ ಮಕ್ಕಳು ಹಾಜರ್: ಚಿಕ್ಕೋಡಿ ಮತು ಬೆಳಗಾವಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 1,124 ಪ್ರೌಢಶಾಲೆಗಳು ಶುಕ್ರವಾರದಿಂದ ಮತ್ತೆ ತೆರೆದಿದ್ದು, ಮೊದಲ ದಿನವೇ 60 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಗ್ರಾಮೀಣ ಭಾಗದ ಪ್ರದೇಶಗಳಲ್ಲಿಯೇ ಹೆಚ್ಚಿನ ಮಕ್ಕಳು ಶಾಲೆಗೆ ಬಂದಿದ್ದರು. ಮುಂದಿನ ಎರಡು ದಿನದಲ್ಲಿ ಎಲ್ಲ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಲಿದ್ದಾರೆ ಎಂದು ಡಿಡಿಪಿಐಗಳಾದ ಗಜಾನನ ಮೆನ್ನಿಕೇರಿ ಹಾಗೂ ಡಾ. ಎ.ಪುಂಡಲೀಕ ತಿಳಿಸಿದ್ದಾರೆ.

    ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ

    ಎಲ್ಲ ಶಾಲಾ-ಕಾಲೇಜ್‌ಗಳಲ್ಲೂ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ತರಗತಿಗಳಿಗೆ ಪ್ರವೇಶಿಸುವ ಮೊದಲು ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಎಲ್ಲ ವಿದ್ಯಾರ್ಥಿಗಳೂ ಶಾಲೆಗೆ ಬರುವಾಗ ಮಾಸ್ಕ್ ಧರಿಸಿಯೇ ಬಂದಿದ್ದರು. ದೈಹಿಕ ಅಂತರ ವ್ಯವಸ್ಥೆಯಲ್ಲಿ ಕೊಠಡಿಯೊಳಗೆ ಪಾಠಕ್ರಮ, ಬೋಧನೆ ನೀಡಲಾಯಿತು.

    324 ಪಿಯು ಕಾಲೇಜ್ ಶೇ.70 ಹಾಜರಾತಿ

    ಚಿಕ್ಕೋಡಿ, ಬೆಳಗಾವಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ 324 ಪಿಯು ಕಾಲೇಜ್‌ಗಳು ಪುನರಾರಂಭಗೊಂಡಿದ್ದು, ಮೊದಲ ದಿನ 19 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜ್‌ಗೆ ಆಗಮಿಸಿದ್ದಾರೆ. ಬೆಳಗಾವಿ ನಗರ ಹೊರತುಪಡಿಸಿದರೆ ಬೈಲಹೊಂಗಲ, ಗೋಕಾಕ, ಸವದತ್ತಿ, ಯರಗಟ್ಟಿ, ರಾಮದುರ್ಗ, ಅಥಣಿ, ಮೂಡಲಗಿ, ಹುಕ್ಕೇರಿ ತಾಲೂಕು ವ್ಯಾಪ್ತಿಯ ಕಾಲೇಜ್‌ಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಶೇ.70ರಷ್ಟು ಇತ್ತು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕಾಲೇಜ್ ಆರಂಭವಾದ ಮೊದಲ ದಿನ ಗ್ರಾಮೀಣ ಭಾಗದ ಪಿಯುಸಿ ವಿದ್ಯಾರ್ಥಿಗಳೇ ಅಧಿಕ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಆದರೆ, ನಗರ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ.
    | ರಾಜಶೇಖರ ಪಟ್ಟಣಶೆಟ್ಟಿ ಜಿಲ್ಲಾ ಉಪ ನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts