More

    ಅಕ್ಷರ ದಾಸೋಹಿ ಸಪ್ತರ್ಷಿಗಳು ಅಜರಾಮರ

    ಬೆಳಗಾವಿ: ಅವಕಾಶ ವಂಚಿತ ವಿದ್ಯಾರ್ಥಿಗಳಿಗಾಗಿಯೇ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಅಶಕ್ತವಾಗಿದ್ದ ಕನ್ನಡವನ್ನು ಸಶಕ್ತಗೊಳಿಸಿ, ಕನ್ನಡದ ದೀಪ ಹಚ್ಚಿದ ಕೆಎಲ್‌ಇ ಸಂಸ್ಥಾಪಕರು ಅಜರಾಮರರಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎಂ.ಜಯಶ್ರೀ ಹೇಳಿದರು.

    ನಗರದಲ್ಲಿನ ಲಿಂಗರಾಜ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕೆಎಲ್‌ಇ 107ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂಸ್ಥೆಗೆ ಅಡಿಪಾಯ ಹಾಕಿದ ಸಪ್ತರ್ಷಿಗಳ ಸಂಕಲ್ಪ ಹಾಗೂ ಸದಾಶಯ ಬಹುದೊಡ್ಡ ಶಕ್ತಿಯಾಗಿತ್ತು. ಆ ಮಹನೀಯರ ತ್ಯಾಗ, ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ನಾಡಿನ ಹೆಮ್ಮೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆಯ ಕೊಡುಗೆ ಚಿರಸ್ಮರಣೀಯ ಎಂದರು. ಶೈಕ್ಷಣಿಕ ಸುಧಾರಣೆಯ ಕನಸು ಆದರ್ಶಗಳನ್ನು ಕಟ್ಟಿಕೊಂಡ ಏಳು ಜನ ಯುವ ಶಿಕ್ಷಕರು ಅಂದು ಕಟ್ಟಿದ ಕೆಎಲ್‌ಇ ಸಂಸ್ಥೆಗೆ ಇಂದು ಜಾಗತಿಕ ಮುನ್ನಣೆ. ಶಿಕ್ಷಣರಂಗದ ಜೀವನಾಡಿ ಎಂಬ ಶ್ರೇಯಸ್ಸು ಬಂದಿದೆ.

    ಶಿಕ್ಷಣದ ಬಗೆಗಿನ ಮಹತ್ವ ಅರಿಯದ ಅಶಿಕ್ಷಿತ ಸಮಾಜವೊಂದರ ಹೀನಾಯ ಸ್ಥಿತಿಗೆ ಮರುಗಿದ ಸಂಸ್ಥಾಪಕರು, ಸಮಾಜ ಸುಶಿಕ್ಷಿತಗೊಂಡರೆ ಮಾತ್ರ ಬದಲಾವಣೆ ಹಾಗೂ ಪ್ರಗತಿ ಸಾಧ್ಯ ಎಂಬುದನ್ನು ಅರಿತಿದ್ದರು. ಹೀಗಾಗಿ ಉತ್ತರ ಕರ್ನಾಟಕದ ಇತಿಹಾಸವನ್ನು ಬದಲಿಸಲು ಶ್ರಮಿಸಿದರು, ನಾಡು-ನುಡಿ ಉಳಿಸಿ, ಬೆಳೆಸಿದರು ಎಂದು ತಿಳಿಸಿದರು. ಮುಂಬೈ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದ ಸರ್ ಸಿದ್ದಪ್ಪ ಕಂಬಳಿ ಚಾಣಾಕ್ಷತನ ಹಾಗೂ ದೂರದೃಷ್ಟಿ ಫಲವಾಗಿ 1932ರ ಅಂತ್ಯಕ್ಕೆ ಲಿಂಗರಾಜ ಕಾಲೇಜು ಪ್ರಾರಂಭಿಸಲು ಮುಂಬೈ ವಿಶ್ವವಿದ್ಯಾಲಯ ಹಾಗೂ ಸರ್ಕಾರ ಅನುಮತಿ ನೀಡಿದವು. 1933ರಲ್ಲಿ ಕಾಲೇಜು ಪ್ರಾರಂಭವಾಯಿತು. ಅದೆಲ್ಲಕ್ಕೂ ಕಳಸವಿಟ್ಟಂತೆ 1984ರಲ್ಲಿ ಕೆಎಲ್‌ಇ ಸಂಸ್ಥೆಯ ಚುಕ್ಕಾಣಿ ಹಿಡಿದ ಡಾ.ಪ್ರಭಾಕರ ಕೋರೆ ಸಂಸ್ಥೆಯನ್ನು ಅಗಾಧವಾಗಿ ಬೆಳೆಸಿದ್ದಾರೆ. ಇಲ್ಲಿ ಅಧ್ಯಯನ ಮಾಡುವುದೇ ಒಂದು ಸೌಭಾಗ್ಯವೆಂದು ತಿಳಿಯಬೇಕು ಎಂದರು.

    ಕೆಎಲ್‌ಇ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಆಜೀವ ಸದಸ್ಯರಾದ ಡಾ.ಎಂ.ಪಿ.ಸತೀಶ, ಪ್ರೊ. ಶೀತಲ ನಂಜಪ್ಪನವರ, ಬಿ.ವಿ.ಬೆಲ್ಲದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಯಸಿಂಹ, ಬಿ.ಇಡಿ.ಕಾಲೇಜಿನ ಪ್ರಾಚಾರ್ಯ ಪ್ರೊ.ವಸಂತ ಕುರಿ ಹಾಗೂ ವಿವಿಧ ಶಾಲಾ-ಕಾಲೇಜುಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಇದ್ದರು. ಲಿಂಗರಾಜ ಕಾಲೇಜು ಪ್ರಾಚಾರ್ಯ
    ಡಾ.ಎಚ್.ಎಸ್.ಮೇಲಿನಮನಿ ಸ್ವಾಗತಿಸಿದರು. ವೈಷ್ಣವಿ ಯಲಿಗಾರ ಪ್ರಾರ್ಥಿಸಿದರು. ಆರ್.ಎಲ್.ಎಸ್.ಕಾಲೇಜಿನ ಪ್ರಾಚಾರ್ಯ ಡಾ.ಜ್ಯೋತಿ ಕವಳೆಕರ ವಂದಿಸಿದರು. ಪ್ರೊ.ಸಿದ್ದನಗೌಡ ಪಾಟೀಲ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts