More

    ಅಕ್ಷರ ಕಲಿಕೆಗೆ ಸೀ ಶಕ್ತಿ ಸಾರಥ್ಯ ತಾಪಂ ಇಒ ಶ್ರೀನಾಥ್‌ಗೌಡ ಮಾಹಿತಿ, ಹೊಸಕೋಟೆ ತಾಪಂ ಎದುರು ಪ್ರತಿಜ್ಞಾ ವಿಧಿ ಬೋಧನೆ

    ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನಲ್ಲಿ ಶೇ.83 ಸಾಕ್ಷರಸ್ಥರಿದ್ದು, ಶೇ.17 ಅನಕ್ಷರಸ್ಥರಿಗೆ ತಾಲೂಕಿನ ಸೀಶಕ್ತಿ ಸಂಘಟನೆಗಳ ಸಹಯೋಗದಲ್ಲಿ ನವಸಾಕ್ಷರನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಾಲೂಕು ಸಾಕ್ಷರತಾ ಸಮಿತಿ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಶ್ರೀನಾಥ್‌ಗೌಡ ಹೇಳಿದರು.

    ಹೊಸಕೋಟೆ ತಾಲೂಕು ಪಂಚಾಯಿತಿ ಕಟ್ಟಡದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 55ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಶಿಕ್ಷಣ ಕ್ರಾಂತಿಯಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಸಾಕ್ಷರತಾ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

    ಬಡತನ, ಮಾಹಿತಿ ಕೊರತೆ ಹಾಗೂ ಇನ್ನಿತರ ವಯಕ್ತಿಕ ಕಾರಣಗಳಿಂದ ಎಷ್ಟೋ ಮಂದಿ ಶಿಕ್ಷಣ ಪಡೆಯುವ ಆಸಕ್ತಿಯಿದ್ದರೂ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಇಂಥವರಿಗೆ ಈಗಲೂ ಕಾಲ ಮಿಂಚಿಲ್ಲ. ಓದುವ ಆಸಕ್ತಿ ಇದ್ದವರಿಗೆ ಸಂಜೆ ತರಗತಿಗಳ ಮೂಲಕ ಅಕ್ಷರಸ್ಥರನ್ನಾಗಿ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

    ತಾಲೂಕು ಸಾಕ್ಷರತಾ ಸಂಯೋಜಕ ಎಂ.ಮಂಜುನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ನವಸಾಕ್ಷರತಾ ಯೋಜನೆ ಜಾರಿಗೊಂಡಿದ್ದು, ತಾಲೂಕಿನಲ್ಲಿಯೂ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆ ಸದುಪಯೋಗ ಮಾಡಿಕೊಂಡು ಅನಕ್ಷರಸ್ಥರು ಶಿಕ್ಷಣದೆಡೆಗೆ ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಿದರು. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಾಕ್ಷರತೆ ಕುರಿತ ಸಭೆ ನಡೆದಿದ್ದು, ತಾಲೂಕುವಾರು ಯೋಜನೆ ರೂಪಿಸಲಾಗಿದೆ, ತಾಲೂಕಿನಲ್ಲಿ ಶೇ.17 ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಿ ಇಡೀ ತಾಲೂಕಿನಲ್ಲಿ ಅಕ್ಷರಕ್ರಾಂತಿ ಮಾಡುವ ಯೋಜನೆ ಇದಾಗಿದೆ ಎಂದು ತಿಳಿಸಿದರು.

    ಪ್ರಮಾಣ ಪತ್ರ ಸಿಗಲಿದೆ: ಶಾಲೆ, ಅಂಗನವಾಡಿ, ಅನಕ್ಷರಸ್ಥರ ಮನೆ, ಬೋಧಕರ ಮನೆ ಹಾಗೂ ಸಮುದಾಯ ಭವನಗಳಂಥ ಶಿಕ್ಷಣಕ್ಕೆ ಎಲ್ಲ ರೀತಿಯಲ್ಲೂ ಅನುಕೂಲಕರವಾಗಿರುವ ಸ್ಥಳಗಳಲ್ಲಿ ಬೋಧನೆಗೆ ವ್ಯವಸ್ಥೆ ಮಾಡಲಾಗುವುದು ಹಾಗೂ ಬಾಳಿಗೆ ಬೆಳಕು ಪುಸ್ತಕದ ಮೂಲಕ ಓದು, ಬರಹ ಹಾಗೂ ಸರಳ ಲೆಕ್ಕಾಚಾರ ಎಂಬ ಮೂರು ವಿಭಾಗಗಳಲ್ಲಿ ಸುಮಾರು 24 ಪಾಠಗಳನ್ನು ಕಲಿಸಿ, ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಶ್ರೇಣಿ ಸಹಿತ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಹೇಮಲತಾ ತಿಳಿಸಿದರು.

    ವಯಸ್ಕರ ಶಿಕ್ಷಣದ ಮೂಲಕ ಅನಕ್ಷರಸ್ಥರಿಗೆ ಶಿಕ್ಷಣ ನೀಡಿ ಸಾಕ್ಷರರನ್ನಾಗಿಸುವುದು ಹಾಗೂ ಶೇ. 100 ಸಾಕ್ಷರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts