More

    ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ ಮಾಡಿ

    ಅಧಿಕಾರಿಗಳಿಗೆ ಶಾಸಕ ಆರ್.ನರೇಂದ್ರ ಸೂಚನೆ

    ಹನೂರು: ಅಕ್ರಮ-ಸಕ್ರಮ ಯೋಜನೆಯಡಿ ಬಾಕಿ ಉಳಿದಿರುವ ಅರ್ಜಿಗಳ ಬಗ್ಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಅಗತ್ಯ ಕ್ರಮವಹಿಸಿ 15 ದಿನಗಳೊಳಗೆ ವಿಲೇವಾರಿ ಮಾಡುವಂತೆ ಶಾಸಕ ಆರ್.ನರೇಂದ್ರ ಸೂಚಿಸಿದರು.

    ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.

    ಅಕ್ರಮ-ಸಕ್ರಮ ಯೋಜನೆಯಡಿ ನಮೂನೆ 50ರಲ್ಲಿ ಸಲ್ಲಿಸಿರುವ ಅರ್ಜಿಗಳಲ್ಲಿ 41 ಹಾಗೂ ನಮೂನೆ 53ರಲ್ಲಿ 19 ಅರ್ಜಿಗಳು ಬಾಕಿ ಉಳಿದಿದೆ. ಜತೆಗೆ ನಮೂನೆ 57ರಲ್ಲಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಸಿ 15 ದಿನಗಳೊಳಗೆ ವಿಲೇವಾರಿಗೊಳಿಸಬೇಕು. ಅಲ್ಲದೆ ಇದೂವರೆಗೆ 3,998 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ 311 ಅರ್ಜಿಗಳು ತಿರಸ್ಕೃತವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಸರ್ವೇ ಇಲಾಖೆ ಹಾಗೂ ಕಂದಾಯ ಇಲಾಖೆ ಜತೆಗೂಡಿ ಸರ್ವೇ ನಡೆಸಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಬೆಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು. ಪ್ರಕೃತಿ ವಿಕೋಪದಡಿ ಹಾನಿಯಾಗಿರುವ ಮನೆ, ಬೆಳೆಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮವಹಿಸಬೇಕು. ಇತ್ತೀಚೆಗೆ ಹನೂರು ಭಾಗದಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಕೂಡಲೇ ಈ ಬಗ್ಗೆ ಪಶುಪಾಲನಾ ಇಲಾಖೆಯ ಜತೆಗೂಡಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ ಎಂದು ತಿಳಿಸಿದರು.

    ಆರ್‌ಟಿಸಿ ತಿದ್ದುಪಡಿ ಕಾರ್ಯ ಪೂರ್ಣಗೊಳಿಸಿ: ಅಜ್ಜೀಪುರ ಗ್ರಾಮ ಪಂಚಾಯಿತಿಯ ನಾಗಣ್ಣನಗರದಲ್ಲಿ ರೈತರಿಗೆ ನೀಡಲಾಗಿದ್ದ ದರ್ಖಾಸ್ ಜಮೀನುಗಳಲ್ಲಿ ಸಮಸ್ಯೆ ಇದ್ದು, ಆರ್‌ಟಿಸಿ ತಿದ್ದುಪಡಿ ಅಗತ್ಯವಾಗಿದೆ. ಇನ್ನು ಹೂಗ್ಯಂ ಗ್ರಾಮದಲ್ಲಿ 2 ಸಾವಿರ ಎಕರೆ ಜಮೀನಿನ ಪಹಣಿಯಲ್ಲಿ ವ್ಯತ್ಯಾಸವಾಗಿದೆ. ಇದರಿಂದ ರೈತರಿಗೆ ತುಂಬ ತೊಂದರೆಯಾಗಿದೆ. ಅದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಒಂದು ತಿಂಗಳೊಳಗೆ ಆರ್‌ಟಿಸಿ ತಿದ್ದುಪಡಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

    ಸ್ಮಶಾನ ವ್ಯವಸ್ಥೆ ಕಲ್ಪಿಸಿ: ತಾಲೂಕಿನಲ್ಲಿ 50 ಕಂದಾಯ ಗ್ರಾಮಗಳಿದ್ದು, ಇದರಲ್ಲಿ ಆರ್.ಎಸ್ ದೊಡ್ಡಿ, ದೊಡ್ಡಾಣೆ, ಕೊಕ್ಕಬರೆ, ತೋಕೆರೆ, ಹುತ್ತೂರು, ಅಂಬಿಕಾಪುರ, ನಾಗಣ್ಣನಗರ, ಪುದುರಾಮಾಪುರ, ದೊಮ್ಮನಗದ್ದೆ, ಸತ್ತಿಮಂಗಲ, ಅರ್ಜುನ್ ದೊಡ್ಡಿ, ಗೊಲ್ಲರದಿಂಬ, ಕೆ.ಗುಂಡಾಪುರ, ಮಾರಳ್ಳಿ, ಮಂಚಪುರ, ಪಚ್ಚೆದೊಡ್ಡಿ, ವಿ.ಎಸ್. ದೊಡ್ಡಿ, ಬಿ.ಜಿ. ದೊಡ್ಡಿ, ಉದ್ದಟ್ಟಿ ಹಾಗೂ ಜೀರಿಗೆಗದ್ದೆ ಗ್ರಾಮಗಳಲ್ಲಿ ಸ್ಮಶಾನ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಮಸ್ಥರು ಶವ ಸಂಸ್ಕಾರ ನೆರವೇರಿಸಲು ಕಷ್ಟ ಪಡುತ್ತಿದ್ದಾರೆ. ಹಾಗಾಗಿ ಸ್ಮಶಾನ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಿ ಜಾಗವಿದ್ದರೆ ಸ್ಮಶಾನಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವೇ ಖಾಸಗಿ ಜಮೀನು ಖರೀದಿಸಿ ಸ್ಮಶಾನ ಸೌಕರ್ಯ ಕಲ್ಪಿಸಬೇಕು ಎಂದು ಸೂಚಿಸಿದರು. ಇದಕ್ಕೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವುದಾಗಿ ಸಮ್ಮತಿ ಸೂಚಿಸಿದರು.

    ಹೊಸ ಕಂದಾಯ ಗ್ರಾಮಗಳ ರಚನೆ: ತಹಸೀಲ್ದಾರ್ ಆನಂದಯ್ಯ ಮಾತನಾಡಿ, ಸರ್ಕಾರದ ಆದೇಶದನ್ವಯ ರಾಜ್ಯದಲ್ಲಿರುವ ಲಂಬಾಣಿ ತಾಂಡ ಮತ್ತಿತರ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹನೂರು ತಾಲೂಕಿನ ಭೈರನತ್ತ, ನಾಗನತ್ತ, ದೊಡ್ಡಲತ್ತೂರು, ನಾಗಣ್ಣನಗರ, ದೊಡ್ಡಮಾಲಾಪುರ, ಕೆ.ಗುಂಡಾಪುರ, ಚೆನ್ನೂರು, ಹೊಸಳ್ಳಿ, ಮಂಚಾಪುರ, ವಡ್ಡರದೊಡ್ಡಿ, ನಾಲ್‌ರೋಡ್, ಮಲ್ಲಯ್ಯನಪುರ, ಪೂಜಾರಿಭೋವಿ ದೊಡ್ಡಿ ಹಾಗೂ ಅಂಡೇಕುರುಬನದೊಡ್ಡಿ ಗ್ರಾಮವನ್ನು ಹೊಸ ಕಂದಾಯ ಗ್ರಾಮವನ್ನು ರಚಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಧನಂಜಯ್ಯ, ಉಪ ತಹಸೀಲ್ದಾರ್ ಸುರೇಖಾ, ಶಿರಸ್ತೇದಾರರಾದ ನಾಗೇಂದ್ರ, ಉಮಾ, ಆರ್‌ಐಗಳಾದ ಬಿ.ಪಿ ಮಾದೇಶ್, ಮಹದೇವಸ್ವಾಮಿ, ತಾಲೂಕು ಸರ್ವೇಯರ್ ಕುಮಾರಸ್ವಾಮಿ, ಗ್ರಾಮಲೆಕ್ಕಿಗರಾದ ರಾಜು, ಶೇಷಣ್ಣ, ಪುನೀತ್, ವಿನೋದ್ ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts