More

    ಅಕ್ರಮ ಮದ್ಯ ತಡೆಯಲು ಹೋಗಿ ಎತ್ತಂಗಡಿ!

    ರಾಣೆಬೆನ್ನೂರ: ಅವರು 52 ಗ್ರಾಮಗಳನ್ನು ಮದ್ಯ ಮುಕ್ತ ಮಾಡಲು ಪಣ ತೊಟ್ಟವರು. ಈಗಾಗಲೇ 15ಕ್ಕೂ ಅಧಿಕ ಗ್ರಾಮಗಳನ್ನು ಮದ್ಯ ಮುಕ್ತಗೊಳಿಸಿ ಗ್ರಾಮಸ್ಥರು, ಮಹಿಳೆಯರಿಂದ ಶಹಬ್ಭಾಷಗಿರಿ ಪಡೆದಿದ್ದರು. ಆದರೆ, ಅವರು ಮಾಡಿದ ಒಳ್ಳೆಯ ಕಾರ್ಯವೇ ಈಗ ಅವರಿಗೆ ಕುತ್ತು ತಂದಿದೆ. ಜಿಲ್ಲೆಯಲ್ಲಿನ ಅಕ್ರಮ ಮದ್ಯ ಮಾರಾಟಗಾರರ ಪ್ರಭಾವ ಅವರನ್ನು ತಾಲೂಕು ಮಾತ್ರವಲ್ಲ, ಜಿಲ್ಲೆಯಿಂದಲೇ ಎತ್ತಂಗಡಿ ಮಾಡಿಸಿದೆ!

    ತಾಲೂಕಿನ ಹಲಗೇರಿ ಪೊಲೀಸ್ ಠಾಣೆ ಪಿಎಸ್​ಐ ಸಿದ್ಧಾರೂಢ ಬಡಿಗೇರ ಅವರನ್ನು ಏಕಾಏಕಿ ವರ್ಗಾವಣೆ ಮಾಡಿ ದಾವಣಗೆರೆ ಆಜಾದ್ ನಗರ ಠಾಣೆಗೆ ನಿಯುಕ್ತಿಗೊಳಿಸಿರುವುದು ಇಂಥದೊಂದು ಚರ್ಚೆಗೆ ಗ್ರಾಸವಾಗಿದೆ.

    ಸಿದ್ಧಾರೂಢ ಬಡಿಗೇರ ಅವರು 2019ರ ಆಗಸ್ಟ್ 29ರಂದು ಗುತ್ತಲ ಠಾಣೆಯಿಂದ ಹಲಗೇರಿ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು. ಸರ್ಕಾರದ ನಿಯಮದ ಪ್ರಕಾರ ಯಾವುದೇ ಸರ್ಕಾರಿ ನೌಕರ ವರ್ಗಾವಣೆಯಾದ ಒಂದು ಸ್ಥಳದಲ್ಲಿ ಒಂದು ವರ್ಷ ಪೂರೈಸುವವರೆಗೂ ಮತ್ತೆ ಬೇರೆಡೆ ವರ್ಗಾವಣೆ ಮಾಡುವಂತಿಲ್ಲ. ಕನಿಷ್ಠ ಒಂದು ವರ್ಷ ಪೂರೈಸಿದ ಬಳಿಕ ವರ್ಗಾವಣೆ ಮಾಡಬಹುದು. ಆದರೆ, ಸಿದ್ಧಾರೂಢ ಬಡಿಗೇರ ಅವರನ್ನು ಕೇವಲ ಆರು ತಿಂಗಳಲ್ಲಿ ವರ್ಗಾವಣೆ ಮಾಡಿರುವುದು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಸಿದ್ಧಾರೂಢ ಬಡಿಗೇರ ಅವರು ಹಲಗೇರಿ ಠಾಣೆಗೆ ಬಂದ ಬಳಿಕ ತಮ್ಮ ಠಾಣೆ ವ್ಯಾಪ್ತಿಯ 52 ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆದಿದ್ದರು. ಅಷ್ಟೇ ಅಲ್ಲ, ಎಲ್ಲ ಗ್ರಾಮಗಳನ್ನು ಮದ್ಯ ಮುಕ್ತಗೊಳಿಸಲು ಪಣ ತೊಟ್ಟಿದ್ದರು. ಬೆನಕನಕೊಂಡ, ಮಾಗೋಡ ಗ್ರಾಮಗಳನ್ನು ಮದ್ಯ ಮುಕ್ತಗೊಳಿಸಿ ನಾಮಫಲಕ ಕೂಡ ಅಳವಡಿಸುವ ಮೂಲಕ ಕಾರ್ಯಾರಂಭ ಮಾಡಿದ್ದರು.

    ಎಲ್ಲ ಗ್ರಾಮಗಳ ಅಕ್ರಮ ಮದ್ಯ ಮಾರಾಟಗಾರರಿಗೆ ಎರಡು ತಿಂಗಳು ಕಾಲಾವಕಾಶ ನೀಡಿ ಅಕ್ರಮ ಮದ್ಯ ಮಾರಾಟ ಕೈ ಬಿಡಬೇಕು; ಇಲ್ಲವಾದರೆ ಎಲ್ಲರ ಮೇಲೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇದರಿಂದಾಗಿ ಹಲಗೇರಿ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಬಹುತೇಕ ಸ್ಥಗಿತಗೊಂಡಿತ್ತು. ಹೀಗಾಗಿ, ನಗರದಿಂದ ಹಳ್ಳಿಗಳಿಗೆ ಅಕ್ರಮವಾಗಿ ಮದ್ಯ ಸಾಗಿಸುವವರಿಗೆ ತೊಂದರೆ ಎದುರಾಗಿತ್ತು. ಕ್ರಮೇಣ ಮದ್ಯ ಮಾರಾಟ ಕಡಿಮೆಯಾಗುತ್ತಿದ್ದಂತೆ ಅಕ್ರಮ ಮದ್ಯ ಮಾರಾಟಗಾರರು ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿತ್ತು. ಹೀಗಾಗಿ ಪಿಎಸ್​ಐ ಅವರನ್ನು ಎತ್ತಂಗಡಿ ಮಾಡುವ ಹುನ್ನಾರ ಎರಡು ತಿಂಗಳಿಂದಲೇ ನಡೆದಿತ್ತು ಎನ್ನುವ ಆರೋಪ ಕೇಳಿಬಂದಿದೆ.

    ಶಾಸಕರ ವಿರುದ್ಧ ಜನಾಕ್ರೋಶ

    ಪಿಎಸ್​ಐ ಸಿದ್ಧಾರೂಢ ಬಡಿಗೇರ ಅವರ ಏಕಾಏಕಿ ವರ್ಗಾವಣೆಯು ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ ವಿರುದ್ಧ ಜನರು ಆಕ್ರೋಶಗೊಳ್ಳುವಂತೆ ಮಾಡಿದೆ. ಶಾಸಕರು ಹಾಗೂ ಅವರ ಹಿಂಬಾಲಕರು ಬೆಂಗಳೂರಿಗೆ ಹೋಗಿ ಸಿದ್ಧಾರೂಢ ಬಡಿಗೇರ ಅವರ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ಕೇಳಿಬರತೊಡಗಿದೆ. ಗ್ರಾಮೀಣ ಭಾಗದ ಮಹಿಳೆಯರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರೂಢ ಬಡಿಗೇರ ವರ್ಗಾವಣೆ ರದ್ದುಪಡಿಸಬೇಕು. ಈ ಭಾಗದ ಗ್ರಾಮಗಳನ್ನು ಮದ್ಯಮುಕ್ತಗೊಳಿಸಬೇಕು. ಇಲ್ಲವಾದರೆ ಪ್ರತಿಭಟನೆ ಮೂಲಕ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಬೆನಕನಕೊಂಡ ಗ್ರಾಮದ ಮಹಿಳೆ ರೇಣುಕಮ್ಮ, ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮತ್ತಿತರರು ಎಚ್ಚರಿಸಿದ್ದಾರೆ.

    ಜಿಲ್ಲೆಯಲ್ಲಿ ಅಬಕಾರಿ ಲಾಬಿ ಜೋರು!

    ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಗಾರರ ಲಾಬಿಯೂ ಜೋರಾಗಿಯೇ ನಡೆದಿದೆ ಎನ್ನುವ ಆರೋಪ ಬಲವಾಗಿದೆ. ಈ ಹಿಂದೆ ಅಬಕಾರಿ ಉಪ ಆಯುಕ್ತ ನಾಗಶಯನ ಅವರು ಲಂಚ ಕೇಳಿದ್ದಾರೆ ಎನ್ನುವ ಆರೋಪದ ಮೇಲೆ ಹಲವು ಪ್ರತಿಭಟನೆ ನಡೆದವು. ಆದರೆ, ಅವರು ಲಂಚ ಕೇಳಿದ ಬಗ್ಗೆ ಯಾವುದೇ ದಾಖಲೆ ಇಲ್ಲದಿದ್ದರೂ ಸರ್ಕಾರ ಅವರನ್ನು ವರ್ಗಾವಣೆ ಮಾಡಿತು. ಇದಕ್ಕೂ ಅಕ್ರಮ ಮದ್ಯ ಮಾರಾಟಗಾರರ ಲಾಬಿಯೇ ಕಾರಣ ಎನ್ನುವ ಆರೋಪ ಜಿಲ್ಲೆಯ ಜನರದ್ದು.

    ಸಿದ್ಧಾರೂಢ ಬಡಿಗೇರ ಅವರನ್ನು ಆಡಳಿತಾತ್ಮಕ ದೃಷ್ಟಿಯಿಂದ ಸರ್ಕಾರ ವರ್ಗಾವಣೆ ಮಾಡಿದೆ. ಅವರಿಗೆ ಅನ್ಯಾಯ ಆಗಿದೆ ಎನ್ನುವುದಾದರೆ ಅವರು ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ಮೊದಲು ಇಲಾಖೆಯಿಂದ ಹೊರಡಿಸಿದ ಆದೇಶ ಪಾಲಿಸಬೇಕು.
    | ಕೆ.ಜೆ. ದೇವರಾಜ, ಎಸ್ಪಿ, ಹಾವೇರಿ

    ಸಿದ್ಧಾರೂಢ ಬಡಿಗೇರ ಅವರ ಕಾರ್ಯವೈಖರಿ ಇಷ್ಟವಾಗದ ಕಾರಣ ಅವರನ್ನು ವರ್ಗಾವಣೆ ಮಾಡಿಸಲಾಗಿದೆ. ಹಲಗೇರಿ ಭಾಗದಲ್ಲಿ ಇಸ್ಪೀಟ್, ಮಟ್ಕಾ ತಡೆಯುವಲ್ಲಿ ಅವರು ವಿಫಲವಾಗಿದ್ದಾರೆ.
    | ಅರುಣಕುಮಾರ ಪೂಜಾರ, ಶಾಸಕ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts