More

    ಅಕ್ರಮ ಪ್ರಕರಣ ಮತ್ತಷ್ಟು ಬೆಳಕಿಗೆ

    ಹಾನಗಲ್ಲ: ತಾಲೂಕಿನಲ್ಲಿ ರೈತರಿಗೆ ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ಬಗೆದಷ್ಟು, ಮತ್ತಷ್ಟು ಅವ್ಯವಹಾರಗಳು, ಹೊಸ-ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರೆ, ಇದರ ಕುರಿತು ತನಿಖೆ ಏಕೆ ನಡೆಯುತ್ತಿಲ್ಲ? ಎಂಬುದೇ ಎಲ್ಲರಲ್ಲಿಯೂ ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

    ತಾಲೂಕಿನ ಶಿರಗೋಡ ಗ್ರಾಮದ ರೈತ ಬಸವಂತಪ್ಪ ಕಲ್ಲಾಪುರ ರಿಸನಂ 152/1(4.38 ಎಕರೆ) ಹೊಲಕ್ಕೆ ಸಂಬಂಧಿಸಿದ ಪರಿಹಾರ 46,528 ರೂ. ಗಳು ಇದೇ ಗ್ರಾಮದ ವಿದ್ಯಾರ್ಥಿನಿ ಭೂಮಿಕಾ ಪುರುಷನಗೌಡ್ರ ಎಂಬುವರ ಖಾತೆಗೆ ಜಮಾ ಮಾಡಲಾಗಿದೆ. ಆದರೆ, ಈ ಬಾಲಕಿಯ ಹೆಸರಿನಲ್ಲಿ ಜಮೀನು ಇಲ್ಲವೆಂಬುದು ಸ್ಪಷ್ಟ. ರಾಮನಗೌಡ ಸಂಗನಗೌಡ್ರ ಅವರ ರಿಸನಂ 58(1.31 ಎಕರೆ) ಪ್ರದೇಶದ ಪರಿಹಾರ 16,683 ರೂ. ಗಳು ಕೆಂಪವ್ವ ಪುರುಷನಗೌಡ್ರ ಎಂಬುವರ ಖಾತೆಗೆ ಜಮಾ ಆಗಿವೆ. ಇದೇ ರೈತನ ರಿಸನಂ 231/1(3 ಎಕರೆ) ಹೊಲಕ್ಕೆ ಸಂಬಂಧಿಸಿದ ಪರಿಹಾರ 28,198 ರೂ. ಗಳು ಉಮಾ ಪುರುಷನಗೌಡ್ರ ಅವರ ಖಾತೆಗೆ ಜಮಾ ಆಗಿವೆ.

    ಮಾವಕೊಪ್ಪ ಗ್ರಾಮದ ರೈತ ಮಂಜುನಾಥ ಉಜ್ಜಪ್ಪನವರ ರಿಸನಂ-39/1/ಬ (3.30 ಎಕರೆ) ಪ್ರದೇಶದ ಪರಿಹಾರ ಗುತ್ತೆಪ್ಪ ಸುಣಗಾರ ಎಂಬುವರ ಖಾತೆಗೆ ಹಾಕಲಾಗಿದೆ. ಇದೇ ಗ್ರಾಮದ ರಿಸನಂ.17/8 (2.29 ಎಕರೆ) ಶಾರದಾ ಬೆಲ್ಲದ ಅವರ ಹೊಲದ 18,310 ರೂ. ಗಳನ್ನು ವಿಶ್ವನಾಥ ಪೂಜಾರ ಎಂಬುವರ ಖಾತೆಗೆ ವರ್ಗಾಯಿಸಲಾಗಿದೆ.

    ಶಿರಗೋಡ ಗ್ರಾಮದ ನಾಗೇಂದ್ರಪ್ಪ ಭರಮಪ್ಪ ಮಡಿವಾಳರ ಎಂಬ ರೈತನ ರಿ.ಸ.ನಂ. 107/1ರ 3 ಎಕರೆ ಹೊಲಕ್ಕೆ ಸಂಬಂಧಿಸಿದ 30,837 ರೂ. ಗಳು ಇದೇ ಗ್ರಾಮದ ರಶ್ಮೀ ವೀರನಗೌಡ ಚನ್ನಗೌಡರ ಎಂಬುವರ ಬ್ಯಾಂಕ್ ಖಾತೆಗೆ ಜಮಾ ಆಗಿವೆ. ಇದಲ್ಲದೇ ರಶ್ಮಿ ಅವರ ಖಾತೆಗೆ ಇದೇ ಗ್ರಾಮದ ರಿ.ಸ.ನಂ. 91/1ರ 23 ಗುಂಟೆ ಹಾಗೂ 117/1ರ 29 ಗುಂಟೆ ಕ್ಷೇತ್ರದ ಬೆಳೆ ಹಾನಿ ಪರಿಹಾರವೂ ಜಮಾ ಆಗಿರುವುದು ಹಲವು ಅನುಮಾನ ಹುಟ್ಟು ಹಾಕಿದೆ. ಇತ್ತೀಚೆಗೆ ಈ ಘಟನೆಯ ಕುರಿತು ಗ್ರಾಮದ ರೈತರಿಂದ ದೂರು ಕೇಳಿಬರುತ್ತಿದ್ದಂತೆ ಗ್ರಾಮಲೆಕ್ಕಾಧಿಕಾರಿ ಆರೋಗ್ಯ ಸಮಸ್ಯೆ ನೆಪವೊಡ್ಡಿ ರಜೆ ಮೇಲೆ ತೆರಳಿರುವುದು ಇನ್ನಷ್ಟು ಸಂಶಯಗಳಿಗೆ ದಾರಿ ಮಾಡಿಕೊಟ್ಟಿವೆ.

    ಪ್ರಕರಣ ಮುಚ್ಚಿಹಾಕುವ ಹುನ್ನಾರ: ರಾಜ್ಯ ಮಟ್ಟದ ಅಧಿಕಾರಿಗಳಿಗೂ ಈ ಅವ್ಯವಹಾರದ ವಾಸನೆ ಬಡಿದಿದೆ. ನಾಲ್ಕಾರು ದಿನಗಳ ಹಿಂದೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಅಧಿಕಾರಿಗಳ ತಂಡ ತಾಲೂಕಿಗೆ ಭೇಟಿ ನೀಡಿ, ದೂರು ಸಲ್ಲಿಸಿದ ರೈತರ ದಾಖಲೆಗಳನ್ನು ಪರಿಶೀಲಿಸಿದೆ. ಗಮನಾರ್ಹ ಸಂಗತಿಯೆಂದರೆ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಯ ಪಾಸ್​ವರ್ಡ್ ದುರುಪಯೋಗವಾಗಿಲ್ಲ, ಖಾಸಗಿ ವ್ಯಕ್ತಿಗಳಿಗೆ ಸಿಕ್ಕಿಲ್ಲ ಎಂಬುದನ್ನು ಸೃಷ್ಟಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿಗೆ ಈ ಮೊದಲು ಹಾನಗಲ್ಲ ತಾಲೂಕಿನ ರೈತ ಸಂಘದ ಮುಖಂಡರು ಭೇಟಿಯಾಗಿ ಅವ್ಯವಹಾರದ ದಾಖಲೆಗಳನ್ನು ಪ್ರದರ್ಶಿಸಿ ತನಿಖೆಗೊಳಪಡಿಸುವಂತೆ ಕೋರಿದ್ದರು. ಆದರೆ, ಇದುವರೆಗೂ ಯಾವೊಬ್ಬರ ಮೇಲೂ ಕ್ರಮ ಜರುಗಿಸಿಲ್ಲ. ಇದಕ್ಕೂ ರೈತರು ಹೋರಾಟ ಕೈಗೊಳ್ಳಬೇಕೋ ಏನೋ?, ಇನ್ನೂ ಕಾಯ್ದು ನೋಡಬೇಕು.

    ವೆಬ್​ಸೈಟ್ ಬಂದ್: ಈ ಮಧ್ಯೆ ರೈತರು ಭೂಮಿ ಕೇಂದ್ರದ ಆನ್​ಲೈನ್(ಪರಿಹಾರ ಪೇಮೆಂಟ್ ವೆಬ್​ಸೈಟ್) ಮೂಲಕ ಈ ಹಗರಣದ ದಾಖಲೆಗಳನ್ನು ಪಡೆದುಕೊಳ್ಳಬಾರದೆಂಬ ಉದ್ದೇಶಕ್ಕಾಗಿ ಡೌನ್​ಲೋಡ್ ಆಗದಂತೆ ಆ ಪೇಜ್​ನ್ನು ಬಂದ್ ಮಾಡಲಾಗಿದೆ. ಹಗರಣದಲ್ಲಿ ಮುಖ್ಯ ಪಾತ್ರವಹಿಸಿರುವ ಮೊದಲಿದ್ದ ಗ್ರಾಮಲೆಕ್ಕಾಧಿಕಾರಿಯನ್ನು ಈ ಗ್ರಾಮದಿಂದ ವರ್ಗಾಯಿಸಿ, ಬೇರೊಬ್ಬರನ್ನು ತಂದು ಕುಳ್ಳಿರಿಸಿರುವ ಮಾಹಿತಿ ಲಭ್ಯವಾಗಿದೆ.

    ಖಾಸಗಿ ವ್ಯಕ್ತಿಗಳಿಗೆ ಯುಸರ್ ನೇಮ್ ಪಾಸ್​ವರ್ಡ್: ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲೆಂದೇ ನೇಮಕಗೊಂಡಿರುವ ಅಧಿಕಾರಿಗಳು-ಸಿಬ್ಬಂದಿ ತಮ್ಮ ಇಲಾಖೆ ಮಾಹಿತಿ ಸೋರಿಕೆ ಮಾಡುವುದರಿಂದಾಗುವ ಅನಾಹುತಗಳಿಗೆ ಹಾನಗಲ್ಲ ತಾಲೂಕು ಕಂದಾಯ ಇಲಾಖೆ ಉತ್ತಮ ಉದಾಹರಣೆಯಾಗಿದೆ!

    ಪರಿಹಾರ ತಂತ್ರಾಂಶದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ತನ್ನ ವ್ಯಾಪ್ತಿಯ ರೈತರ ಜಮೀನಿನ ವಿವರ, ಬೆಳೆ ಹಾನಿ ಮಾಹಿತಿ, ಆಧಾರ ಸಂಖ್ಯೆ ಸೇರಿ ಮಾಹಿತಿಯನ್ನು ಅಪ್​ಲೋಡ್ ಮಾಡಬೇಕು. ಈ ತಂತ್ರಾಂಶ ಬಳಸಲು ಯೂಸರ್ ನೇಮ್ ಮತ್ತು ಪಾಸ್​ವರ್ಡ್​ಗಳನ್ನು ನೀಡಲಾಗಿದೆ. ಆದರೆ, ಅಧಿಕಾರಿಗಳು ತಾವೇ ಮಾಹಿತಿ ದಾಖಲಿಸಿದೇ ಖಾಸಗಿ ವ್ಯಕ್ತಿಗಳಿಗೆ ಯೂಸರ್ ನೇಮ್ ಮತ್ತು ಪಾಸ್ ವರ್ಡ್​ಗಳನ್ನು ನೀಡಿದ್ದಾರೆ. ಈ ಅವಕಾಶ ದುರ್ಬಳಕೆ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳು ಸರ್ಕಾರ ಹಣವನ್ನು ಯಾರ್ಯಾರದೋ ಹೆಸರಲ್ಲಿ ಇನ್ಯಾರದೋ ಖಾತೆಗೆ ಜಮೆ ಮಾಡಿದ್ದಾರೆ. ಫಸಲು ಹಾನಿಗೊಳಗಾದ ರೈತರ ಹೆಸರಿನೊಂದಿಗೆ ಗ್ರಾಮದ ಕೆಲವು ವ್ಯಕ್ತಿಗಳು ತಮ್ಮ ಸಂಬಂಧಿಕರ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಜೋಡಣೆ ಮಾಡಿರುವುದು ಹಣವನ್ನು ವರ್ಗಾಯಿಸಿಕೊಳ್ಳಲೆಂದೇ ಮಾಡಿರುವ ಪೂರ್ವನಿಯೋಜಿತ ಯೋಜನೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಲ್ಲಿ ಏಜೆಂಟರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಶಾಮೀಲಾಗಿಯೇ ಈ ಅಕ್ರಮ ನಡೆಸಿದ್ದಾರೆ.

    ರಶ್ಮಿ ಚನ್ನಗೌಡರ ಅವರ ಹೆಸರಿನಲ್ಲಿ ಹೊಲವಿಲ್ಲದಿದ್ದರೂ ನನ್ನ ಪರಿಹಾರದ ಹಣ ಅವರ ಖಾತೆಗೆ ಏಕೆ ಹೋಯಿತು. ಇದರಂತೆ ಇಲ್ಲಿನ ಬಹಳಷ್ಟು ಜನರ ಪರಿಹಾರ ಇದೇ ಗ್ರಾಮದ ಕೆಲವರ ಸಂಬಂಧಿಕರ ಖಾತೆಗೆ ಜಮೆ ಆಗಿರುವುದು ವ್ಯವಸ್ಥಿತ ಅವ್ಯವಹಾರದ ಸಂಚು ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಿದೆ. ಇವರ ಮೇಲೆ ಕ್ರಿಮಿನಲ್ ದೂರು ದಾಖಲಿಸಿ, ವಿಚಾರಣೆಗೊಳಪಡಿಸಿದರೆ ಮಾತ್ರ ಸತ್ಯ ಹೊರಬರುತ್ತದೆ.
    | ನಾಗೇಂದ್ರಪ್ಪ ಭರಮಪ್ಪ ಮಡಿವಾಳರ, ಶಿರಗೋಡ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts