More

    ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡದಿರಿ

    ಆಲೂರು: ಜಿಲ್ಲಾಧಿಕಾರಿ ಹಾಗೂ ಗಣಿಗಾರಿಕೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಹೊಂಕರವಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
    ಆಲೂರು ತಾಲೂಕಿನ ಗಡಿ ಭಾಗವಾದ ಸರ್ವೇ ನಂ. 57ರ ಪಕ್ಕದಲ್ಲಿರುವ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಹೊಸಗದ್ದೆ ಗ್ರಾಮದ ಸರ್ವೇ ನಂ. 149 ರಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಹೊಂಕರವಳ್ಳಿ ಗ್ರಾಮದ ಮುಖಂಡ ಪ್ರಕಾಶ್ ಗುರುವಾರ ಸುದ್ದಿಗೊಷ್ಠಿಯಲ್ಲಿ ದೂರಿದರು.
    ಈಗಾಗಲೇ ಗ್ರಾಮಸ್ಥರೆಲ್ಲರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಭೇಟಿ ನೀಡಿ, ನಿಯಮಗಳ ಪ್ರಕಾರವೇ ಗಣಿಗಾರಿಕೆಗೆ ಅವಕಾಶ ನೀಡಬೇಕು. ಗಣಿಗಾರಿಕೆ ನಡೆಸಲು ಮುಂದಾಗಿರುವ ಸ್ಥಳದ ಪಕ್ಕದಲ್ಲೇ ನಮ್ಮ ಗ್ರಾಮವಿದೆ ಯಾವ ಸಮಯದಲ್ಲಿ ಬೇಕಾದರೂ ಅವಘಡ ಸಂಭವಿಸಬಹುದು. ಅಲ್ಲದೆ ಗಣಿಗಾರಿಕೆ ನಡೆಸಲು ಈ ಸ್ಥಳ ಸೂಕ್ತವಲ್ಲ. ಹೀಗಾಗಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬಾರದು ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಹಣದ ಆಮಿಷಕ್ಕೆ ಒಳಗಾದ ಅಧಿಕಾರಿಗಳಿಂದಾಗಿ ನಾವು ಎಷ್ಟೇ ಮನವಿ ಪತ್ರ ಕೊಟ್ಟರೂ ಅರ್ಜಿಗಳು ಮಾತ್ರ ತಾಲೂಕು ಕಚೇರಿಯ ಟಪಾಲಿನಲ್ಲೇ ಉಳಿಯುತ್ತಿವೆ ಹೊರತು ಮೇಲಧಿಕಾರಿಗಳ ಗಮನಕ್ಕೆ ಹೋಗುತ್ತಿಲ್ಲ. ಈಗಲಾದರೂ ಅಕ್ರಮ ಗಣಿಗಾರಿಕೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥ ಯೋಗೇಶ್ ಮಾತನಾಡಿ, ಕಲ್ಲುಗಣಿಗಾರಿಕೆಯಿಂದ ನಮ್ಮ ಗ್ರಾಮಕ್ಕೆ ಅನುಕೂಲಕ್ಕಿಂತ ಹೆಚ್ಚಾಗಿ ಅನನುಕೂಲವಾಗುತ್ತದೆ. ಗ್ರಾಮದಿಂದ ಕ್ರಷರ್ ಘಟಕಕ್ಕೆ ಕೇವಲ 100 ರಿಂದ 300 ಮೀಟರ್ ಅಂತರವಿದ್ದು, ಗ್ರಾಮದಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸವಿವೆ. ಗಣಿಗಾರಿಕೆಯಿಂದ ಮನೆಗಳು ಬಿರುಕು ಬಿಡುವುದಲ್ಲದೆ ಕಲ್ಲು ಗಣಿಗಾರಿಕೆಯ ನೀರು ಗ್ರಾಮದಲ್ಲಿರುವ ಸರ್ಕಾರಿ ಕೆರೆಗೆ ಹರಿದು ನೀರು ಕಲುಷಿತಗೊಳ್ಳುತ್ತಿದೆ. ವಾಹನಗಳ ಓಡಾಟದಿಂದ ಗ್ರಾಮದಲ್ಲಿರುವ ಸರ್ಕಾರಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ರಾಕೇಶ್, ಚಂದ್ರು ಕುಮಾರ್, ಪ್ರಕಾಶ್, ಅಣ್ಣಪ್ಪ ಗುರುಪ್ರಸಾದ್, ಯೋಗೇಶ್, ನಾಗೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts