More

    ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿ

    ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೋಬಳಿ ವ್ಯಾಪ್ತಿಯ ಪ್ರದೇಶದಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ಬಂದ್ ಮಾಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉಳಾಗಡ್ಡಿ-ಖಾನಾಪುರ ಗ್ರಾಮಸ್ಥರು ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಹಲವು ವರ್ಷಗಳಿಂದ ಸಂಕೇಶ್ವರ ಹೋಬಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಧೂಳು ಆವರಿಸಿ ಬೆಳೆ ಹಾಳಾಗುತ್ತಿದೆ. ಸ್ಫೋಟಿಸಿ ಕಲ್ಲು ತೆಗೆಯುತ್ತಿರುವುದರಿಂದ ಸುತ್ತಮುತ್ತಲಿನ ರೈತರು ಆತಂಕಪಡುವಂತಾಗಿದೆ. ಅಂತರ್ಜಲಮಟ್ಟ ಕುಸಿದು ಕೊಳವೆ ಬಾವಿಗಳು ಬಂದ್ ಆಗುತ್ತಿವೆ. ಸಾವಿರಾರು ರೂ.ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳ ಮೇಲೆ ಕಲ್ಲಿನ ಧೂಳು ಬಿದ್ದು ಬೆಳೆಗಳು ಅರ್ಧದಲ್ಲಿಯೇ ರೋಗಕ್ಕೆ ತುತ್ತಾಗಿ ನಾಶವಾಗುತ್ತಿದೆ ಎಂದು ರೈತರು ದೂರಿದರು.

    ರಾಜ್ಯ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೃಷಿ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲಾಗಿದೆ. ಆದರೆ, ಕಲ್ಲು ಗಣಿಗಾರಿಕೆಯಿಂದ ಭೂಮಿಯಲ್ಲಿ ತೀವ್ರ ಕಂಪನ ಉಂಟಾಗಿ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ತೆರೆದ ಮತ್ತು ಕೊಳೆವೆ ಬಾವಿಗಳ ನೀರಿನ ಮೂಲಗಳು ಸಂಪೂರ್ಣ ಮುಚ್ಚಿ ಹೋಗುತ್ತಿವೆ. ಇದರಿಂದಾಗಿ ರೈತರು ಜೀವನ ನಡೆಸಲು ಸಾಧ್ಯವಾಗದೆ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಲ್ಲು ಗಣಿಗಾರಿಕೆ ಬಂದ್ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ರಾಣಪ್ಪ ಖಾನಾಪುರಿ, ವಸಂತ ಖಾನಾಪುರಿ, ಸುರೇಶ ಜರಳಿ, ಬಸಪ್ಪ ಜರಳಿ, ಅಶೋಕ ತಳವಾರ, ಕೆಂಪಣ್ಣ ಸುಭಾಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts