More

    ಅಕಾಲಿಕ ಮಳೆಗೆ ಹಾಳಾಗುತ್ತಿದೆ ಅಡಕೆ

    ಶಿರಸಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ ಭಾರಿ ನಷ್ಟ ಉಂಟು ಮಾಡುತ್ತಿದೆ. ಜಿಲ್ಲೆಯ ಕೃಷಿಕರ ಪ್ರಮುಖ ಬೆಳೆಯಾದ ಅಡಕೆ ಮಳೆಯಿಂದಾಗಿ ಸರಿಯಾಗಿ ಒಣಗದೆ ಕೆಟ್ಟು ಹೋಗುವ ಭೀತಿಯಲ್ಲಿದೆ. ಅಲ್ಲದೆ, ಅಡಕೆ ಮರಗಳಲ್ಲಿರುವ ಹಿಂಗಾರು ಕೂಡ ಮಳೆಯಿಂದಾಗಿ ಕರಟಿ ಹೋಗುವ ಆತಂಕ ಎದುರಾಗಿದೆ. ಮಾರುಕಟ್ಟೆಯಲ್ಲಿ ಅಡಕೆಗೆ ಉತ್ತಮ ಧಾರಣೆಯಿದ್ದರೂ, ಅಕಾಲಿಕ ಮಳೆಯಿಂದಾಗಿ ಅದರ ಪ್ರಯೋಜನ ಪಡೆಯಲಾಗದ ಸ್ಥಿತಿ ಉಂಟಾಗಿದೆ. ಮೊದಲ ಕೊಯ್ಲನ್ನು ಕೊಯ್ದು ಒಣಗಲು ಹಾಕಿರುವ ಅಡಕೆ ಮಳೆಯಿಂದಾಗಿ ಸಂಪೂರ್ಣ ಒದ್ದೆಯಾಗಿದೆ. ಸರಿಯಾಗಿ ಒಣಗದ ಅಡಕೆಯ ಹೋಳುಗಳು ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಮಾರುಕಟ್ಟೆಯಲ್ಲಿ ಇದು ತೃತೀಯ ದರ್ಜೆಯ ಅಡಕೆಯಾಗಿ ಪರಿವರ್ತಿತವಾಗುತ್ತದೆ. ಈ ಅಡಕೆಗೆ ಅತ್ಯಂತ ಕಡಿಮೆ ಬೆಲೆ ನಿಗದಿಯಾಗಿದ್ದು, ಹೆಚ್ಚಿನ ಅಡಕೆಗಳು ಹಾಳಾಗುವ ಭೀತಿಯೂ ಇದೆ.
    ಕೊಯ್ಲು ಮಾಡಿದ ಅಡಕೆ ಕನಿಷ್ಠ ಹದಿನೈದು ದಿನಗಳ ಕಾಲ ಬಿಸಿಲಲ್ಲಿ ಒಣಗುವ ಅಗತ್ಯವಿದ್ದು, ಈ ಬಾರಿ ಮಳೆ ಸುರಿದ ಪರಿಣಾಮ ಸರಿಯಾಗಿ ಒಣಗದ ಕಾರಣ, ಅಡಕೆ ಕಪ್ಪಾಗುವ ಸಾಧ್ಯತೆ ಹೆಚ್ಚಾಗಿದೆ. ಕೈಯಲ್ಲಿದ್ದ ಅಡಕೆ ಮಳೆಯಿಂದಾಗಿ ಹಾಳಾಗುತ್ತಿರುವುದು ಬೆಳೆಗಾರನ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಡಿಸೆಂಬರ್, ಜನವರಿಯಲ್ಲಿ ಅಡಕೆಯ ಮೊದಲ ಫಸಲು ಕೊಯ್ಲಿಗೆ ಸಿದ್ಧವಾಗುತ್ತಿದ್ದು, ಈ ಕಾರಣಕ್ಕಾಗಿ ಜಿಲ್ಲೆಯ ಎಲ್ಲ ಕೃಷಿಕರೂ ಫಸಲನ್ನು ಕೊಯ್ದು ಒಣಗಲು ಹಾಕುವ ಸಮಯ ಇದಾಗಿದೆ. ಆದರೆ, ನಿರಂತರವಾಗಿ ಕಾಡುತ್ತಿರುವ ಮೋಡ ಹಾಗೂ ಆಗಾಗ ಸುರಿಯುತ್ತಿರುವ ಮಳೆ ಪರಿಣಾಮ ಅಡಕೆಯನ್ನು ಸರಿಯಾಗಿ ಒಣಗಿಸಲಾಗದ ಸ್ಥಿತಿ ಬೆಳೆಗಾರರದ್ದಾಗಿದೆ.
    ಕೊಯ್ದ ಅಡಕೆಯ ಸ್ಥಿತಿ ಇದಾದರೆ, ಇನ್ನೊಂದೆಡೆ ಇದೀಗ ಮತ್ತೊಂದು ಫಸಲಿಗೆ ಹೂ ಬಿಡುವ ಕಾಲವಾಗಿರುವುದರಿಂದ ಮಳೆ ಅಡಕೆ ಹಿಂಗಾರವನ್ನೂ ಹಾಳು ಮಾಡುತ್ತಿವೆ. ನಿರಂತರವಾಗಿ ಮಳೆಯಾಗಿ, ಬಿಸಿಲು ಬರುವ ಕಾರಣ ಹಿಂಗಾರಗಳು ಬಿಸಿಲಿಗೆ ಕರಟಿ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಬಹುತೇಕ ತೋಟಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

    ಅತಿವೃಷ್ಟಿಯಿಂದ ಈ ಮೊದಲೇ ಇಳುವರಿಯಲ್ಲಿ ಹೊಡೆತ ತಿಂದಿದ್ದ ಅಡಕೆ ಬೆಳೆಗಾರರಿಗೆ ಅಕಾಲಿಕ ಮಳೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.
    | ರತ್ನಾಕರ ಗೌಡ, ಅಡಕೆ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts