More

    ಅಂಬಾರಗುಡ್ಡ ಜೀವವೈವಿಧ್ಯ ತಾಣ ವಿರೋಧಿಸಿ 16 ಕಿ.ಮೀ. ಪಾದಯಾತ್ರೆ

    ಬ್ಯಾಕೋಡು: ಅಂಬಾರಗುಡ್ಡ ಜೀವವೈವಿಧ್ಯ ತಾಣದ ಹೆಸರಿನಲ್ಲಿ ಜನವಸತಿ ಪ್ರದೇಶ ಸೇರಿಸಿ ಕಂದಾಯ ಇಲಾಖೆ ಭೂಮಿಯನ್ನು ಯಾವ ಸರ್ವೇ ಕೂಡ ನಡೆಸದೆ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿರುವುದು ಮನುಷ್ಯ ವಿರೋಧಿ ಕ್ರಮ. ಸರ್ಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಗ್ರಹಿಸಿದರು.
    ಸಾಗರ ತಾಲೂಕಿನ ಸಂಕಣ್ಣ ಶ್ಯಾನುಭೋಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಗ್ರಾಮದಲ್ಲಿ ಜೀವವೈವಿಧ್ಯ ತಾಣದಲ್ಲಿ ಜನವಸತಿ ಪ್ರದೇಶ ಉಳಿವಿಗೆ ಆಗ್ರಹಿಸಿ ಗುರುವಾರ ಕಾಂಗ್ರೆಸ್ ಆಯೋಜಿಸಿದ್ದ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ನೆಲದಲ್ಲಿ ತಲೆತಲಾಂತದಿಂದ ಜೀವನ ನಡೆಸುತ್ತಿರುವ ಜನ ಸಮುದಾಯ ಅಲ್ಲಿಯ ಕಾಡು, ನಾಡನ್ನು ಪ್ರೀತಿಸುತ್ತ ಬದುಕುತ್ತದೆ. ಆದರೆ ಇವರನ್ನು ಕಾಯ್ದೆ ಹೆಸರಿನಲ್ಲಿ ಒಕ್ಕಲು ಎಬ್ಬಿಸುವ ಕ್ರಮ ಜೀವ ವಿರೋಧಿಯಾದುದು ಎಂದರು.
    ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಶರಾವತಿ ಸಂತ್ರಸ್ತರು ದ್ವೀಪದಲ್ಲಿ ಬದುಕುವುದು ಅಸಾಧ್ಯ ಎಂಬ ವಾತಾವರಣವನ್ನು ಈಗಾಗಲೇ ಅರಣ್ಯ ಇಲಾಖೆ ನಿರ್ಮಾಣ ಮಾಡಿದೆ. ಈ ನಡುವೆ ಜೀವವೈವಿಧ್ಯ ತಾಣದ ಹೆಸರಿನಲ್ಲಿ ನೂರಾರು ಕುಟುಂಬಗಳು ವಾಸ ಇರುವ ಜಾಗವನ್ನು ಅವರ ಒಪ್ಪಿಗೆ ಇಲ್ಲದೆ ಅರಣ್ಯ ಇಲಾಖೆಗೆ ಸೇರಿಸಿರುವುದು ಬಾಣಲೆಯಿಂದ ಬೆಂಕಿಗೆ ಬೀಳುವಂತೆ ಮಾಡಿದೆ ಎಂದು ದೂರಿದರು.
    ಈ ಹಿಂದಿನ ಅಧಿಕಾರಾವಧಿಗಳಲ್ಲಿ ಈ ರೀತಿಯ ಅಧಿಕಾರಿಗಳ ದೌರ್ಜನ್ಯಕ್ಕೆ ಅವಕಾಶ ಇರಲಿಲ್ಲ. ಆದರೆ ಕಳೆದ ನಾಲ್ಕು ವರ್ಷದಿಂದ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದು ಯಾವುದೇ ಜನಪ್ರತಿನಿಧಿಯ ಭಯ ಇಲ್ಲವಾಗಿದೆ. ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲದೆ ಇರುವುದು ಇದಕ್ಕೆ ಕಾರಣ ಆಗಿದೆ ಎಂದು ಹೇಳಿದರು.
    ಮರಾಠಿ ಗ್ರಾಮದಿಂದ ಬೆಳಗ್ಗೆ ಆರಂಭವಾದ ಪಾದಯಾತ್ರೆ 16 ಕಿಮೀ ದೂರ ಇಕ್ಕಿಬೀಳು, ಹೊಸಕೊಪ್ಪ, ಆಡಗಳಲೆ ಮಾರ್ಗವಾಗಿ ಕ್ರಮಿಸಿ ಮಧ್ಯಾಹ್ನ ಮೂರು ಗಂಟೆಗೆ ಸುಳ್ಳಳ್ಳಿ ನಾಡಕಚೇರಿ ತಲುಪಿತು. ಬಿಸಿಲಿನ ಧಗೆಯನ್ನು ಲೆಕ್ಕಿಸದೆ ಆರು ನೂರಕ್ಕೂ ಹೆಚ್ಚು ರೈತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಜೈವಿಕ ವಲಯ ಘೋಷಣೆ ಮಾಡುವ ಮೂಲಕ ನೆಲದ ಜನರ ಹಕ್ಕನ್ನು ಮೊಟಕುಗೊಳಿಸುವ ಕೆಲಸ ಸರ್ಕಾರ ಮಾಡಿದೆ. ಈ ಮೂಲಕ ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
    ಸರ್ಕಾರದಿಂದ ವಂಚನೆ: ಹದಿನೈದು ವರ್ಷಗಳ ಹಿಂದೆ ಅಂಬಾರಗುಡ್ಡ ಗಣಿಗಾರಿಕೆ ಆರಂಭವಾದಾಗ ದ್ವೀಪದ ಜನ ಹೋರಾಟ ಮಾಡಿ ಉಳಿಸಿಕೊಂಡೆವು. ಆದರೆ ಯಾವ ಭೂಮಿಯನ್ನು ಉಳಿಸಿಕೊಂಡೆವೋ ಅದೇ ಭೂಮಿ ಸೇರಿದಂತೆ ಹೆಚ್ಚುವರಿ ಜನವಸತಿ ಪ್ರದೇಶವನ್ನು ಸೇರಿಸಿ ಜೀವವೈವಿಧ್ಯ ವಲಯ ಎಂದು ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ ಜನರನ್ನು ವಂಚಿಸುವ ಕೆಲಸ ಸರ್ಕಾರ ಮಾಡಿದೆ ಎಂದು ನಾಡಕಚೇರಿ ಮುಂಭಾಗ ನಡೆದ ಸಭೆಯಲ್ಲಿ ಜಿ.ಟಿ.ಸತ್ಯನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts