More

    ಅಂದು ದುಬೈ… ಇಂದು ಗುಡ್​ಬೈ..

    ಯು.ಎಸ್. ಪಾಟೀಲ ದಾಂಡೇಲಿ

    1974ರಲ್ಲಿ ಗಣೇಶಗುಡಿಯ ಸೂಪಾ ಡ್ಯಾಮ್ ಹಾಗೂ ಈ ಡ್ಯಾಮಿನ ನೀರು ಬಳಸಿ 1985-86ರಲ್ಲಿ ಅಂಬಿಕಾನಗರದ ನಾಗಝುರಿ ಪವರ್​ಹೌಸ್ ನಿರ್ವಣಕ್ಕೆಂದು ಬಂದಿದ್ದ ಕೆಪಿಸಿ ಸಿಬ್ಬಂದಿ ವಸತಿಗಾಗಿ ನಿರ್ವಿುಸಿದ ಅಂಬೇವಾಡಿಯ 182 ಮನೆಗಳು ಪಾಳು ಬಿದ್ದು ಭೂತ ಬಂಗಲೆಯಂತಾಗಿವೆ.

    ಗಣೇಶಗುಡಿ, ಅಂಬಿಕಾನಗರ ಮಾತ್ರವಲ್ಲದೆ, ದಾಂಡೇಲಿಯಲ್ಲಿಯೂ ಕೆಪಿಸಿಯ ಕೆಲ ಕಚೇರಿಗಳು, ಸಿಮೆಂಟ್ ಗೋದಾಮು ಹಾಗೂ ಕೆಪಿಸಿ ಕಾಲನಿಗಳು ನಿರ್ವಣಗೊಂಡವು. ದಾಂಡೇಲಿಯಲ್ಲಿ ಬಸ್ ನಿಲ್ದಾಣದ ಪಕ್ಕದಲ್ಲಿ 39 ಮನೆಗಳು (ಕ್ರ.ಸಂ 22, 25 ಹೊರತುಪಡಿಸಿ), ಟೌನ್​ಶಿಪ್ ಪೊಲೀಸ್ ಕ್ವಾರ್ಟಸ್ ಬಳಿಯ 18 ಮನೆಗಳು, ಬಂಗೂರನಗರ ಡಿಗ್ರಿ ಕಾಲೇಜ್ ಎದುರಿನಲ್ಲಿ 45 ಮನೆಗಳು ಸೇರಿ ಒಟ್ಟು 102 ಮನೆಗಳು ಈಗಾಗಲೇ ಹರಾಜಿನಲ್ಲಿ ಮಾರಾಟವಾಗಿದ್ದು, ಅಂಬೇವಾಡಿಯ 182 ಮನೆಗಳ ಕಾಲನಿ ಮಾತ್ರ ಹಾಗೆಯೇ ಉಳಿದಿದೆ.

    ದುಬೈ ಕಾಲನಿಯಾಗಿದ್ದ 182 ಮನೆಗಳು: ದಾಂಡೇಲಿಯ ಅಂಬೇವಾಡಿಯಲ್ಲಿ 1982ರಲ್ಲಿ ಸರ್ವೆ ನಂ. 18, 19, 21ರಲ್ಲಿ 12.8 ಎಕರೆ ಜಾಗದಲ್ಲಿ ಕೇವಲ 69 ಲಕ್ಷ ರೂ. ವೆಚ್ಚದಲ್ಲಿ 182 ಮನೆಗಳ ಈ ಕಾಲನಿ ನಿರ್ವಣಗೊಂಡಿದ್ದವು. ಅಂದು ಈ ಸುಸಜ್ಜಿತ ಕಾಲನಿಯನ್ನು ಕಂಡಿದ್ದ ಜನರು ಅದನ್ನು ದುಬೈ ಕಾಲನಿ ಎಂದೂ ಕರೆದದ್ದುಂಟು. ಮುಂದೆ ಕೆಪಿಸಿ ವಿದ್ಯುತ್ ಉತ್ಪಾದನೆ ಯೋಜನೆಯ ಕಾಮಗಾರಿಗಳು ಮುಗಿದ ನಂತರ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಯಿತು. ಕ್ರಮೇಣ 2002-03ರಲ್ಲಿ ಈ ಕಾಲನಿಯಲ್ಲಿ ಇದ್ದವರೆಲ್ಲರನ್ನೂ ಖಾಲಿ ಮಾಡಿಸಲಾಯಿತು. ಅಂದಿನಿಂದ ಈ ಎಲ್ಲ ಮನೆಗಳು ಪಾಳು ಬಿದ್ದಿವೆ.

    ನಗರಸಭೆಗೆ ಹಸ್ತಾಂತರ: 2017ರ ಜನವರಿ 19ರಂದು 182 ಮನೆಗಳನ್ನು ಕೆಪಿಸಿ ಅಧಿಕಾರಿಗಳು ದಾಂಡೇಲಿಯ ನಗರಸಭೆಗೆ ಹಸ್ತಾಂತರ ಮಾಡಿದರು. ಈ ಕಾಲನಿಯ 12.8 ಎಕರೆ ಜಾಗ ಹಾಗೂ ಅದರೊಳಗಿನ 182 ಮನೆಗಳನ್ನು ನಗರಸಭೆ 53 ಲಕ್ಷ 693 ರೂ. ಗಳನ್ನು ನೀಡಿ ತಮ್ಮ ವಶಕ್ಕೆ ಪಡೆದುಕೊಂಡಿತು. ಈ ಮನೆಗಳು ನಗರಸಭೆಗೆ ಹಸ್ತಾಂತರಗೊಂಡ ನಂತರ ತೀರಾ ಹಾಳಾಗಿವೆ ಎನ್ನಲಾಗುತ್ತಿದೆ. ಕೆಪಿಸಿ ಬಳಿ ಇದ್ದಾಗ ಮನೆಗಳ ರಕ್ಷಣೆಗೆ ಸೆಕ್ಯೂರಿಟಿ ಗಾರ್ಡ್​ಗಳನ್ನು ನೇಮಿಸಿ ಮನೆಗಳ ರಕ್ಷಣೆ ಮಾಡಿದ್ದರು. ಆದರೆ, ಈಗ ನಗರಸಭೆ ವತಿಯಿಂದ ಯಾವುದೇ ರಕ್ಷಣೆ ನೀಡದ ಹಿನ್ನೆಲೆಯಲ್ಲಿ ಮನೆಗಳಿಗೆ ಅಳವಡಿಸಿದ್ದ ಕಿಟಗಿ, ಬಾಗಿಲುಗಳನ್ನು ಕಳ್ಳರು ಕದ್ದೊಯುತ್ತಿದ್ದಾರೆ.

    ಲೇಔಟ್ ಮಾಡುವುದು ಸೂಕ್ತ: 38 ವರ್ಷ ಹಿಂದೆ ನಿರ್ವಣಗೊಂಡ ಕಟ್ಟಡಗಳು ಭದ್ರವಾಗಿವೆಯೋ ಅಥವಾ ಇಲ್ಲವೇ ಎಂಬುದು ಕೆಲವರ ಪ್ರಶ್ನೆಯಾಗಿದೆ. ಕಾಲನಿಯಲ್ಲಿನ 182 ಮನೆಗಳಲ್ಲಿ ನಾಲ್ಕು ಮನೆಗಳು ಮತ್ತು 2 ಮನೆಗಳು ಇರುವ ಒಂದೊಂದು ಬ್ಲಾಕ್​ಗಳು ಇರುವುದರಿಂದ ಈ ಮನೆಗಳನ್ನು ಪ್ರತ್ಯೇಕವಾಗಿ ಒಬ್ಬೊಬ್ಬರಿಗೆ ಒಂದರಂತೆ ಹಂಚಿಕೆ ಮಾಡುವುದು ಪ್ರಯೋಜನಕ್ಕೆಬಾರದು. ಕೆಪಿಸಿಯ ಈ 12. 8 ಎಕರೆ ಜಾಗೆಯಲ್ಲಿ ಸುಂದರವಾದ ಯೋಜನಾ ಬದ್ಧ ಕಾಲನಿ ನಿರ್ವಣವಾಗಲಿ ಎಂಬುದು ಬಹುಜನರ ಬೇಡಿಕೆಯಾಗಿದೆ.

    ದಾಂಡೇಲಿಯಲ್ಲಿ ಉತ್ತಮ ಲೇಔಟ್ ನಿರ್ವಣದ ಅವಶ್ಯಕತೆ ಇದೆ. ಇದೇ ರೀತಿ ಆರ್ಥಿಕವಾಗಿ ಹಿಂದುಳಿದ, ಮಧ್ಯಮ ವರ್ಗದ ಕಾರ್ವಿುಕರು, ಸೇವೆಯಿಂದ ನಿವೃತ್ತಿ ಹೊಂದಿದ ಸರ್ಕಾರಿ, ಅರೆಸರ್ಕಾರಿ ನೌಕರರಿಗೆ ಸೈಟ್ ಅಥವಾ ಕಟ್ಟಿದ ಮನೆಗಳ ಅವಶ್ಯಕತೆ ಹೆಚ್ಚಿದೆ. ಈ ಕುರಿತು ಮುಂಬರುವ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಸೂಕ್ತ ನಿರ್ಣಯ ಕೈಕೊಳ್ಳಲಾಗುವುದು. | ಡಾ. ಸೈಯದ್ ಜಾಹೇದಅಲಿ ಪೌರಾಯುಕ್ತರು, ನಗರಸಭೆ ದಾಂಡೇಲಿ

    ಕೆಪಿಸಿಯ ಈ ಕಾಲನಿಯಲ್ಲಿ ಹರಾಜು ಪದ್ಧತಿ ಅನುಸರಿಸಿದರೆ ಒಂದು ಬ್ಲಾಕ್​ನ ನಾಲ್ಕು ಮನೆಗಳಲ್ಲಿ ಒಬ್ಬರು ಮೇಲಿನ ಹಾಗೂ ಕೆಳಗಿನ ಎರಡು ಮನೆಗಳನ್ನು ಕೊಳ್ಳುವ ಮತ್ತು ಇನ್ನೊಬ್ಬರು ಅದೇ ಬ್ಲಾಕ್​ನ ಉಳಿದ ಎರಡು (ಮೇಲೆ, ಕೆಳಗಿನ) ಮನೆಗಳನ್ನು ಖರೀದಿಸುವ ಯೋಜನೆ ಅನುಕೂಲವಾಗಬಹುದು. ಮನೆಗಳು ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಕಟ್ಟಲಾಗಿದೆ. ಮನೆಗಳು ಸುಭದ್ರವಾಗಿವೆ. | ಬಸಪ್ಪ ಕೌವಲಗಿ, ನಿವೃತ್ತ ಕೆಪಿಸಿ ನೌಕರರ ಸಂಘದ ಕಾರ್ಯದರ್ಶಿ, ದಾಂಡೇಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts