More

    ಅಂತ್ಯ ಕಾಣದ ಅವಿಶ್ವಾಸ

    ಸಾಗರ: ಮಂಗಳವಾರ ನಡೆದ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಯಾವುದೇ ತೀರ್ವನಕ್ಕೆ ಬರಲು ಸಾಧ್ಯವಾಗಿಲ್ಲ.

    ಸದಸ್ಯರ ಅಮಾನತು, ಅವಿಶ್ವಾಸ ಗೊತ್ತುವಳಿ ಮತಕ್ಕೆ, ನಿರ್ಣಯ ಏನು ಎಂಬುದು ಸ್ಪಷ್ಟಪಡಿಸುವ ತನಕ ಸಭೆಯಿಂದ ನಿರ್ಗಮಿಸುವುದಿಲ್ಲ ಎಂದು ಹಲವು ಸದಸ್ಯರ ಪಟ್ಟು, ಜಿಲ್ಲಾಧಿಕಾರಿ ಆದೇಶಕ್ಕೆ ಕಾದು ಕುಳಿತ ತಾಪಂ ಇಒ…

    ಇವು ಮಂಗಳವಾರ ನಡೆದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯಲ್ಲಿ ನಡೆದ ಬೆಳವಣಿಗೆಗಳು

    ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಅಶೋಕ್ ಬರದಹಳ್ಳಿ, ಮೂವರು ಸದಸ್ಯರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿ ಗೊತ್ತುವಳಿಯನ್ನು ಮತಕ್ಕೆ ಹಾಕಿದರು. ಆದರೆ ಯಾರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಿಲ್ಲ.

    ಮಲ್ಲಿಕಾರ್ಜುನ ಹಕ್ರೆ ಪರ ಐವರು ಮತ್ತು ವಿರುದ್ಧವಾಗಿ ಹತ್ತು ಸದಸ್ಯರು ಕೈಎತ್ತಿದರು. ಮೂವರು ಸದಸ್ಯರು ಅಮಾನತು ಆಗಿದ್ದರಿಂದ ಅವಿಶ್ವಾಸ ಬಿದ್ದು ಹೋಗಿದೆ ಎಂದು ಅಧ್ಯಕ್ಷ ಸ್ಥಾನದಲ್ಲಿದ್ದ ಅಶೋಕ ಬರದವಳ್ಳಿ ತೀರ್ಪ ನೀಡಿ ಸಭೆ ಮುಕ್ತಾಯಗೊಳಿಸಲು ರಾಷ್ಟ್ರಗೀತೆ ಹಾಡುವಂತೆ ಹೇಳಿದರು.

    ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಿದ ನಂತರ ಬಿಜೆಪಿ ಸದಸ್ಯರಾದ ರಘುಪತಿ ಭಟ್, ದೇವೇಂದ್ರಪ್ಪ ಹಾಗೂ ಜೆಡಿಎಸ್ ಸದಸ್ಯ ಪರಶುರಾಮ್ ಕೆ.ಎಚ್. ಅವರನ್ನು ಸಭೆಯಿಂದ ಅಮಾನತು ಮಾಡಿರುವುದಾಗಿ ಘೊಷಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.

    ಅವಿಶ್ವಾಸದ ಪರವಾಗಿದ್ದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಶೋಕ ಬರದವಳ್ಳಿಗೆ ಶೇಮ್.ಶೇಮ್.. ಎಂದು ಘೊಷಣೆ ಕೂಗಿದರು. ನಡಾವಳಿ ಪುಸ್ತಕ ತೆಗೆದುಕೊಂಡು ಹೋಗಲು ಉಪಾಧ್ಯಕ್ಷ ಅಶೋಕ್ ಬರದವಳ್ಳಿ ಮುಂದಾದಾಗ ಸದಸ್ಯರು ಪುಸ್ತಕ ಹಿಡಿದು ಎಳೆದಾಡಿದರು. ಕೊನೆಗೆ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಅದನ್ನು ಇಒಗೆ ಒಪ್ಪಿಸಲಾಯಿತು.

    ಅವಕಾಶವಿಲ್ಲ: ವಿಶೇಷ ಸಭೆಯಲ್ಲಿ ಸದಸ್ಯರನ್ನು ಅಮಾನತು ಮಾಡಲು ಅವಕಾಶವಿಲ್ಲ ಎಂದು ಸದಸ್ಯ ಕಾರ್ಯದರ್ಶಿಯೂ ಆಗಿರುವ ಇಒ ಎಚ್.ಎನ್.ಮಂಜುನಾಥಸ್ವಾಮಿ, ಸಭೆಯ ಅಧ್ಯಕ್ಷರು ಕೈಗೊಂಡಿರುವ ಅಮಾನತು ಆದೇಶಕ್ಕೆ ನನ್ನ ಸಹಮತ ಇಲ್ಲ ಎಂದು ಡೀಸೆಂಟ್ ನೋಟ್ ಬರೆದು ಜಿಲ್ಲಾಧಿಕಾರಿಗೆ ಕಳುಹಿಸಿ ಮುಂದಿನ ಆದೇಶಕ್ಕಾಗಿ ಕಾಯುತ್ತ ಕುಳಿತರು.

    ಅಮಾನತು ಮಾಡಿರುವ ಮೂವರು ಸದಸ್ಯರನ್ನು ಸಭೆಯಿಂದ ಹೊರಗೆ ಕಳುಹಿಸಿ ಎಂದು ಅಧ್ಯಕ್ಷ ಸ್ಥಾನದಲ್ಲಿದ್ದ ಅಶೋಕ್ ಬರದವಳ್ಳಿ ಪೊಲೀಸರಿಗೆ ಸೂಚಿಸಿದರು. ಇಒ ಸೂಚಿಸಿದರೆ ಮಾತ್ರ ಸದಸ್ಯರನ್ನು ಹೊರಗೆ ಕಳುಹಿಸುತ್ತೇವೆ ಎಂದು ಪೊಲೀಸರು ಹೇಳಿದರು. ಸಭೆಯ ಮಧ್ಯದಲ್ಲಿ ಇಒಗೆ ಪದೇಪದೆ ಕರೆಗಳು ಬರುತ್ತಿದ್ದವು. ಎದ್ದು ಹೋಗಿ ಮಾತನಾಡುತ್ತಿದ್ದುದು ಕಂಡುಬಂತು. ಕೆಲವು ಮಹಿಳಾ ಸದಸ್ಯರೂ ಇದೇ ರೀತಿ ವರ್ತಿಸಿದರು.

    ಸಿಎಂ, ಶಾಸಕರ ಮೇಲೆ ಹಕ್ರೆ ಆರೋಪ: ಸಭೆ ಆರಂಭದಲ್ಲಿ ಮಾತನಾಡಿದ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಎಚ್.ಹಾಲಪ್ಪ ಹರತಾಳು ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಾಪಂ ಇಒ ಅವರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದರು.

    ಹಕ್ರೆ ಆರೋಪಕ್ಕೆ ವಿರೋಧ: ನಾವು 11 ಜನ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ನೋಟಿಸ್ ನೀಡಲು ಹೋದಾಗ ಮಲ್ಲಿಕಾರ್ಜುನ ಹಕ್ರೆ ಅವರು ಸಿಗಲಿಲ್ಲ. ಅರ್ಜಿಯನ್ನು ಟಪಾಲು ವಿಭಾಗಕ್ಕೆ ಸಲ್ಲಿಸಿ ನಂತರ ಜಿಲ್ಲಾಧಿಕಾರಿ ಕಚೇರಿಗೂ ತಲುಪಿಸಿದ್ದೇವೆ. ಎಲ್ಲ ದಾಖಲೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ಸದಸ್ಯೆ ಜ್ಯೋತಿ ಮುರಳೀಧರ್ ವಿವರಿಸಿದರು. ಮಾತಿನ ಮಧ್ಯೆ ಪ್ರವೇಶಿಸಿದ ಮಲ್ಲಿಕಾರ್ಜುನ ಹಕ್ರೆ, ಮುಖ್ಯಮಂತ್ರಿ ಹಾಗೂ ಶಾಸಕರ ಹೆಸರನ್ನು ಎಳೆದು ತಂದರು. ಬಿಜೆಪಿ ಸದಸ್ಯರಾದ ದೇವೇಂದ್ರಪ್ಪ, ರಘುಪತಿ ಭಟ್, ಸುವರ್ಣಾ ಟೀಕಪ್ಪ, ಕಲಸೆ ಚಂದ್ರಪ್ಪ, ಜೆಡಿಎಸ್ ಸದಸ್ಯ ಪರಶುರಾಮ್ ಪಕ್ಷೇತರ ಸದಸ್ಯ ಸೋಮಶೇಖರ್ ಲ್ಯಾವಿಗೆರೆ, ಪ್ರಭಾವತಿ ಚಂದ್ರಕಾಂತ್, ಪ್ರತಿಮಾ ಪ್ರಕಾಶ್, ಸವಿತಾ ನಟರಾಜ್ ತೀವ್ರ ವಿರೋಧಿಸಿದರು.

    ಜಿಲ್ಲಾಧಿಕಾರಿ ಅಂಗಳದಲ್ಲಿ ಚೆಂಡು: ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಅಶೋಕ ಬರದವಳ್ಳಿ ಸಭೆ ಮುಗಿಸಿ ಹೊರ ಬಂದಾಗ ಬೆಂಬಲಿಗರು ಜಯಕಾರ ಕೂಗಿದರು.ನಮಗೇ ಗೆಲುವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಅವಿಶ್ವಾಸ ಮಂಡನೆ ಸಭೆಯಲ್ಲಿ ಅನೇಕ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಅಂತಿಮ ನಿರ್ಣಯ ಜಿಲ್ಲಾಧಿಕಾರಿ ಕೈಯಲ್ಲಿದೆ. ಅವಿಶ್ವಾಸ ಗೊತ್ತುವಳಿ ಪರ 10 ಸದಸ್ಯರು ಕೈಎತ್ತಿದ್ದನ್ನು ಜಿಲ್ಲಾಧಿಕಾರಿ ಪುರಸ್ಕರಿಸಿದರೆ, ಹಕ್ರೆ ಅವರು ಅಧ್ಯಕ್ಷ ಸ್ಥಾನದಿಂದ ಇಳಿಯಬೇಕಾಗುತ್ತದೆ. ಸಭೆ ಕಾನೂನು ಬದ್ಧವಾಗಿ ನಡೆದಿದೆ. ಮೂವರನ್ನು ಅಮಾನತು ಮಾಡಿದ್ದು ಸರಿ ಎಂದು ಜಿಲ್ಲಾಧಿಕಾರಿ ತೀರ್ವನಕ್ಕೆ ಬಂದರೆ ಸಂಖ್ಯಾಬಲ ಇಲ್ಲದೆ ಅವಿಶ್ವಾಸ ಗೊತ್ತುವಳಿ ಬಿದ್ದುಹೋಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts