More

    ಅಂತರರಾಜ್ಯ ಕಾರು ಕಳ್ಳನ ಬಂಧನ

    ಹಾಸನ: ಕಾರುಗಳನ್ನು ಕದಿಯುತ್ತಿದ್ದ ಅಂತರರಾಜ್ಯ ಕಳ್ಳನನ್ನು ಬಂಧಿಸಿ, ನಾಲ್ಕು ಕಾರು, 2.75 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
    ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಕೆ.ಎಸ್.ದಿಲೀಶ್ ಬಂಧಿತ ಆರೋಪಿ. ಈತನ ವಿರುದ್ಧ ಬೆಂಗಳೂರು ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವು ಕಾರುಗಳನ್ನು ಕಳ್ಳತನ ಮಾಡಿದ್ದ. ಕೆಲವು ಹಳೇ ಕಾರುಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಿದ್ದ ಎಂದು ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಾಳ್ಳುಪೇಟೆಯಲ್ಲಿ ಜು.8ರಂದು ಮಾರುತಿ ಆಲ್ಟೋ ಕಾರು ಕಳುವಾದ ಸಂಬಂಧ ಶಶಿಕುಮಾರ್ ಎಂಬುವರು ನೀಡಿದ್ದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿಂದೆಯೂ ಹಾಸನ ಹಾಗು ಆಲೂರು ಭಾಗದಲ್ಲಿ ದಾಖಲಾಗಿದ್ದ ಕಾರುಗಳ ಕಳ್ಳತನ ಪ್ರಕರಣಗಳನ್ನು ಭೇದಿಸಲು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಮುಂದಾಗಿದ್ದರು. ಕಾರು ಕಳವು ಪ್ರಕರಣದ ಸ್ಥಳದಲ್ಲಿನ ಸಿ.ಸಿ.ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಬಾಳ್ಳುಪೇಟೆಯಲ್ಲಿ ಕಳುವಾಗಿದ್ದ ಆಲ್ಟೋ ಕಾರು, ಆಲೂರಿನಲ್ಲಿ ಕಳುವಾಗಿದ್ದ ಓಮ್ನಿ, ಹಾಸನದಲ್ಲಿನ ಮತ್ತೊಂದು ಓಮ್ನಿ ಮತ್ತು ಬುಲೇರೋ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಸೆನ್ಸಾರ್ ಡಿವೈಸ್ ಬಳಸಿ ಸುಲಭವಾಗಿ ಕಾರಿನ ಲಾಕ್ ತೆಗೆದು ಕಳ್ಳತನ ಮಾಡುತ್ತಿದ್ದ ಎಂದು ಪತ್ತೆಯಾಗಿದೆ. ಆ ಡಿವೈಸ್ ವಶಕ್ಕೆ ಪಡೆಯಲಾಗಿದೆ. ಈತ ಈ ಹಿಂದೆ ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಕಾರುಗಳನ್ನು ಕದ್ದಿರುವ ಬಗ್ಗೆ ಮಾಹಿತಿ ಇದೆ. ಆ ಪ್ರಕರಣಗಳಲ್ಲಿ ಜಾಮೀನು ಪಡೆದು ಸ್ವಲ್ಪ ದಿನಗಳ ಕಾಲ ಸುಮ್ಮನಿದ್ದು, ಇದೀಗ ಪುನಃ ತನ್ನ ಚಾಳಿಯನ್ನು ಮುಂದುವರೆಸಿದ್ದ. ಇದೀಗ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts