ಧಾರವಾಡ: ಜಿ.ಪಂ. ಸದಸ್ಯರಾಗಿದ್ದ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿ ನಾಶ, ಸಾಕ್ಷಿದಾರರ ಮೇಲೆ ಒತ್ತಡ, ರಾಜಿ ಸಂಧಾನ ಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಇಲ್ಲಿನ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯ ಸೋಮವಾರ ಪೊಲೀಸರಿಗೆ ಸೂಚಿಸಿದೆ.
ಇಂದರಿಂದಾಗಿ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ವಿನಯ ಕುಲಕರ್ಣಿಗೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಸಂಕಷ್ಟ ಎದುರಾದಂತಾಗಿದೆ.
ನಗರದ ಸಪ್ತಾಪುರದ ಜಿಮ್ಲ್ಲಿ 2016ರ ಜು. 15ರಂದು ಜಿ.ಪಂ. ಸದಸ್ಯರಾಗಿದ್ದ ಯೋಗೇಶಗೌಡ ಗೌಡರ ಕೊಲೆಯಾಗಿತ್ತು. ದೂರು ದಾಖಲಿಸಿಕೊಂಡಿದ್ದ ಉಪನಗರ ಠಾಣೆಯ ಪೊಲೀಸರು, ಜು. 17ರಂದು 6 ಆರೋಪಿಗಳನ್ನು ಬಂಧಿಸಿದ್ದರು. ಈ ಮಧ್ಯೆ ಯೋಗೇಶಗೌಡರ ಪತ್ನಿ ಮಲ್ಲಮ್ಮ ಗೌಡ ಮತ್ತು ಸಹೋದರ ಗುರುನಾಥಗೌಡ ಅವರು, ಮುಖ್ಯಮಂತ್ರಿ ಮತ್ತು ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು, ಪೊಲೀಸರು ಸರಿಯಾದ ತನಿಖೆ ಮಾಡದೇ ಕೆಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ ಮರು ತನಿಖೆಗೆ ಸಿಬಿಐಗೆ ವಹಿಸಬೇಕು ಎಂದು ಕೋರಿದ್ದರು. ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಗುರುನಾಥಗೌಡ ಹಾಗೂ ಅವರ ತಾಯಿ ತುಂಗಮ್ಮ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಪೀಠ, ವಜಾಗೊಳಿಸಿತ್ತು.
ಕಾನೂನು ಹೋರಾಟ ನಿಲ್ಲಿಸದ ಗುರುನಾಥಗೌಡ ಜಿಲ್ಲಾ ನ್ಯಾಯಾಲಯಕ್ಕೆ 195 (ಎ) ಅಡಿ ಅರ್ಜಿ ಸಲ್ಲಿಸಿದ್ದರು. ‘2017ರ ಅ. 23ರಂದು ಬೆಳಗಾವಿ ಐಜಿ ಕಚೇರಿಯ ಡಿವೈಎಸ್ಪಿ ತುಳಜಪ್ಪ ಸುಲ್ಪಿ ಎಂಬುವರು ಗೋವನಕೊಪ್ಪದಲ್ಲಿರುವ ತಮ್ಮ ಮನೆಗೆ ಬಂದು, ಆರೋಪಿಗಳ ಪರ ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದರು. ಅದೇ ದಿನ ಸಂಜೆ 6 ಗಂಟೆಗೆ ಮತ್ತೆ ಬಂದ ಸುಲ್ಪಿ, ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಎದುರು ಹಾಕಿಕೊಳ್ಳಬೇಡ. ಆರೋಪಿಗಳ ಜೊತೆ ರಾಜಿ ಸಂಧಾನ ಮಾಡಿಕೋ ಎಂದು ಹೆದರಿಸಿದ್ದರು. 2017ರ ನ. 10ರಂದು ಸುಲ್ಪಿ ಮತ್ತೊಮ್ಮೆ ಮನೆಗೆ ಬಂದಿದ್ದರಿಂದ ನ್ಯಾಯಾಲಯಕ್ಕೆ ಹೋದೆ. ಅದೇ ದಿನ ಸಂಜೆ 7.40ರ ಸುಮಾರಿಗೆ ಸುಲ್ಪಿ, ತಮ್ಮ ಕಾರಿನಲ್ಲಿ ಮಾತಿಗೆ ಕರೆದು ಸಂಧಾನಕ್ಕೆ ಒತ್ತಾಯಿಸಿದರು. ಅಂದು ರಾತ್ರಿ ಮಾಜಿ ಸಚಿವ ವಿನಯ ಕುಲಕರ್ಣಿಯೊಂದಿಗೆ ಮಾತುಕತೆಗೆ ಕರೆದುಕೊಂಡು ಹೋದರು. ಧಾರವಾಡ ರ್ಸಟ್ ಹೌಸ್ಗೆ ತೆರಳಿದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ಸಚಿವ ವಿನಯ ಕುಲಕರ್ಣಿ, ಧಾರವಾಡ ಡಿವೈಎಸ್ಪಿ ಚಂದ್ರಶೇಖರ ಆಗಮಿಸಿದರು. ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದ ಸಚಿವರು, (ಆರೋಪಿ)ಬಸವರಾಜ ಮುತ್ತಗಿಯನ್ನು ಕರೆಸಿ ಮಾತನಾಡೋಣ ಎಂದಿದ್ದರು. ಆರೋಪಿಯೊಂದಿಗೆ ಮಾತನಾಡಲು ನಿರಾಕರಿಸಿದಾಗ, ಡಿವೈಎಸ್ಪಿ ಚಂದ್ರಶೇಖರ, ಸಂಧಾನ ಮಾಡಿಕೊಂಡು ಸಾಕ್ಷಿ ಹೇಳಲು ಒತ್ತಾಯಿಸಿದ್ದರು. ಅಲ್ಲದೇ ನನಗೆ ಸಹಾಯ ಮಾಡಿದ ವಕೀಲರಿಗೆ ವಿನಯ ಕುಲಕರ್ಣಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಗುರುನಾಥಗೌಡ ಗೌಡರ ಜಿಲ್ಲಾ 4ನೇ ಹೆಚ್ಚುವರಿ ನ್ಯಾಯಾಲಯಕ್ಕೆ 195 (ಎ) ಅಡಿ ಖಾಸಗಿ ದೂರಿನಲ್ಲಿ ವಿವರಿಸಿದ್ದರು.
ವಿಚಾರಣೆ ಮಾಡಿದ್ದ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಗುರುನಾಥಗೌಡ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ್ದ ಏಕಸದಸ್ಯ ಪೀಠ, ಸಾಕ್ಷಿಗಳನ್ನು ಕಾನೂನು ಅಡಿ ವಿಚಾರಣೆ ಮಾಡಿ 195 (ಎ) ಅರ್ಜಿಯನ್ನು ಮರು ಪರಿಶೀಲಿಸುವಂತೆ ಇತ್ತೀಚೆಗೆ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತ್ತು. ವಿಚಾರಣೆ ಮಾಡಿದ್ದ ನ್ಯಾಯಾಲಯ, ಸಾಕ್ಷಿ ನಾಶ, ಜೀವ ಬೆದರಿಕೆ ಆರೋಪದ ಅರ್ಜಿಯ ಕುರಿತು ಸೂಕ್ತ ವಿಚಾರಣೆ ಮಾಡುವಂತೆ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸೂಚಿಸಿತ್ತು.
ಅದರಂತೆ ಏ. 8ರಂದು ವಿಚಾರಣೆ ಮಾಡಿದ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯದ ನ್ಯಾ. ವಿಜಯಲಕ್ಷ್ಮೀ ಘಾನಾಪುರ ಅವರು, 195 (ಎ) ಅಡಿ (ಸಾಕ್ಷಿ ನಾಶ ಯತ್ನ ಹಾಗೂ ಜೀವಬೆದರಿಕೆ) ದೂರಿನಲ್ಲಿ ಮೇಲ್ನೋಟಕ್ಕೆ ಆರೋಪಗಳು ಕಂಡುಬಂದಿದ್ದು, ಪ್ರತಿವಾದಿಗಳಾದ ವಿನಯ ಕುಲಕರ್ಣಿ, ಡಿವೈಎಸ್ಪಿಗಳಾದ ತುಳಜಪ್ಪ ಸುಲ್ಪಿ, ಚಂದ್ರಶೇಖರ ವಿರುದ್ಧ ದೂರು ದಾಖಲಿಸಿಕೊಂಡು, ತನಿಖೆ ನಡೆಸುವಂತೆ ಉಪನಗರ ಠಾಣೆ ಪೊಲೀಸರಿಗೆ ಸೂಚಿಸಿದರು.
ಡಿವೈಎಸ್ಪಿ ತುಳಜಪ್ಪ ಸುಲ್ಪಿ ಗುರುನಾಥ ಗೌಡರ ಮನೆಗೆ ಹೋಗಿದ್ದ, ಧಾರವಾಡದಲ್ಲಿ ಗೌಡರನ್ನು ವಿನಯ ಕುಲಕರ್ಣಿ ಭೇಟಿಯಾಗಿದ್ದ ಸಂಗತಿಯ ಆಡಿಯೋ ಮತ್ತು ವಿಡಿಯೋ ವೈರಲ್ ಆಗಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆ:ಪತಿಯ ಕೊಲೆಯ ಹಿಂದೆ ಅಂದಿನ ಸಚಿವ ವಿನಯ ಕುಲಕರ್ಣಿ ಕೈವಾಡವಿದೆ ಎಂದು ಮೃತ ಯೋಗೇಶಗೌಡ ಗೌಡರ ಪತ್ನಿ ಮಲ್ಲಮ್ಮ ಆರೋಪಿಸಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರೆ ಹೋಗಿದ್ದರು. ಜಿ.ಪಂ. ಕ್ಷೇತ್ರದ ಉಪಚುನಾವಣೆಯಲ್ಲಿ ಮಲ್ಲಮ್ಮ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸಿ, ಕೆಲವೇ ಮತಗಳ ಅಂತರದಲ್ಲಿ ಸೋತಿದ್ದರು. ಕೆಲ ದಿನಗಳ ನಂತರ ಮಲ್ಲಮ್ಮ ಏಕಾಏಕಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಒಂದೆಡೆ ತನಿಖೆಯನ್ನು ಸಿಬಿಐಗೆ ಸಲ್ಲಿಸಬೇಕು ಎಂದು ಗುರುನಾಥಗೌಡ ಹೈಕೋರ್ಟ್ಗೆ ಸಲ್ಲಿಸಿದ್ದರೆ, ಮತ್ತೊಂದೆಡೆ ಕೊಲೆಯ ಹಿಂದೆ ವಿನಯ ಕುಲಕರ್ಣಿ ಕೈವಾಡವಿಲ್ಲ ಎಂದು ಮಲ್ಲಮ್ಮ ಹೈಕೋರ್ಟ್ಗೆ ಪ್ರತಿವಾದಿಯಾಗಿ ಅರ್ಜಿ ಸಲ್ಲಿಸಿದ್ದರು.
ಚುನಾವಣಾ ಕಾಲದಲ್ಲಿ ತಟ್ಟಿದ ಬಿಸಿ:ಕೊಲೆ ಪ್ರಕರಣದ ಸಾಕ್ಷಿ ನಾಶ, ಸಾಕ್ಷಿದಾರರ ಮೇಲೆ ಒತ್ತಡ, ರಾಜಿ ಸಂಧಾನ ಯತ್ನ ಇವು ಜಾಮೀನು ರಹಿತ ಪ್ರಕರಣವಾಗಿವೆ. ಪ್ರಧಾನ ಜೆಎಂಎಫ್ಸಿ ನ್ಯಾಯಾಲಯದ ಆದೇಶವಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು. ಪ್ರಕರಣದ ಆರೋಪಿತರು ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶವಿದೆ. ಸರ್ಕಾರಿ ಅಧಿಕಾರಿಗಳಿಬ್ಬರ ವಿರುದ್ಧ ಆರೋಪ ಬಂದಿರುವುದರಿಂದ ಎಫ್ಐಆರ್ ದಾಖಲಾದರೆ ತನಿಖೆ ಮುಗಿಯುವವರೆಗೆ ಅವರು ಅಮಾನತು ಆಗಬಹುದು.
ಎಫ್ಐಆರ್ ದಾಖಲಾದ ನಂತರ ಪೊಲೀಸರು ಮತ್ತೊಮ್ಮೆ ಘಟನೆ ಜರುಗಿದ ಸ್ಥಳ ಪಂಚನಾಮೆ, ದೂರುದಾರ ನೀಡಿರುವ ದಾಖಲೆಗಳ ಪರಿಶೀಲನೆ ನಡೆಸಬೇಕು. ಪ್ರಕರಣದಲ್ಲಿ ಡಿವೈಎಸ್ಪಿ ಹಂತದ ಅಧಿಕಾರಿಗಳಿರುವುದರಿಂದ ಉನ್ನತ ಅಧಿಕಾರಿಗಳಿಂದಲೇ ತನಿಖೆ ನಡೆಸುವಂತೆ ಕೋರಿ ದೂರುದಾರ ನ್ಯಾಯಾಲಯದ ಮೊರೆ ಹೋಗಬಹುದು. ಮತ್ತೊಂದೆಡೆ, ಹೈಕೋರ್ಟ್ ನಿರ್ದೇಶನದಂತೆ ಜೆಎಂಎಫ್ಸಿ ದೂರು ದಾಖಲಿಸಿಕೊಳ್ಳಲು ಸೂಚಿಸಿರುವುದರಿಂದ ಎಫ್ಐಆರ್ ರದ್ದತಿ ಕೋರುವುದಾದರೆ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೆಏರಬೇಕಾಗುತ್ತದೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸದ್ಯ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ನ್ಯಾಯಾಲಯದ ಆದೇಶ ಸಂಕಷ್ಟ ತಂದೊಡ್ಡಿದೆ. ನಿರೀಕ್ಷಣಾ ಜಾಮೀಜು ಕೋರಿ ನ್ಯಾಯಾಲಯಕ್ಕೆ ಅಲೆದಾಡಬೇಕು. ಟಿಕೆಟ್ ಘೊಷಣೆ ವಿಳಂಬದಿಂದಾಗಿ ಅವರು ಇತ್ತೀಚೆಗಷ್ಟೇ ಪ್ರಚಾರ ಆರಂಭಿಸಿದ್ದು, ಕ್ಷೇತ್ರದ ವಿಸ್ತಾರ ದೊಡ್ಡದಾಗಿರುವುದರಿಂದ ಮತದಾರರನ್ನು ತಲುಪಲಿಕ್ಕೇ ಸಮಯ ಸಾಲದು. ಈ ಮಧ್ಯೆ ಪೊಲೀಸ್ ತನಿಖೆಯ ಬಿಸಿ ತಟ್ಟಲಿದೆ.
ವಿನಯ ಅವರ ವರ್ಚಸ್ಸಿನ ಕುರಿತು ಟೀಕಿಸಲು ಎದುರಾಳಿ ಅಭ್ಯರ್ಥಿಗಳಿಗೆ ದಾಖಲೆ ಸಮೇತ ಹೊಸ ವಿಷಯ ಸಿಕ್ಕಂತೆಯೂ ಆಗಿದೆ.
ನನ್ನ ಸಹೋದರ ಯೋಗೇಶಗೌಡನ ಕೊಲೆಯಲ್ಲಿ ಗಣ್ಯ ವ್ಯಕ್ತಿಗಳ ಕೈವಾಡವಿದ್ದು, ಸಾಕ್ಷಿ ನಾಶ ಮತ್ತು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೆ. ಪ್ರಸ್ತುತ ನ್ಯಾಯಾಲಯದ ಆದೇಶ ಆಶಾದಾಯಕವಾಗಿದೆ.
ಗುರುನಾಥಗೌಡ ಗೌಡರ, ಯೋಗೇಶಗೌಡ ಸಹೋದರ