More

    ಲೋಕಸಭೆಗೂ ಮುನ್ನ ಜಿ.ಪಂ.,ತಾ.ಪಂ. ಚುನಾವಣೆ?

    ಬೆಂಗಳೂರು: ಹೈಕೋರ್ಟ್ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಸಕಲ ಸಿದ್ಧತೆ ಮಾಡಕೊಳ್ಳುತ್ತಿದೆ.

    ಕ್ಷೇತ್ರ ಪುನರ್ ವಿಂಗಡಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳ ವಿಚಾರಣೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಕಾಂಬ್ಳೆ ಆಯೋಗ ಈಗಾಗಲೇ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಚುನಾವಣೆ ತಯಾರಿ ಆರಂಭಿಸಿದೆ.
    ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಕೂಡ ಗಂಭೀರ ಚರ್ಚೆ ನಡೆಸಲಾಗಿದೆ. ಹೈಕೋರ್ಟ್ ಗಡುವು ನೀಡಿರುವುದರಿಂದ ಚುನಾವಣೆಯನ್ನು ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಿಗೆ ಸೂಚಿಸಿದರು ಎನ್ನಲಾಗಿದೆ.

    ಕ್ಷೇತ್ರ ಸೀಮೆ ನಿಗದಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ವಿಚಾರಣೆ ಮಾಡಿ ಕಾಂಬ್ಳೆ ಅವರು ಹೈಕೋರ್ಟ್‌ಗೆ ವರದಿ ಕೊಟ್ಟಿದ್ದಾರೆ. ಯಾವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರದ ಸೀಮೆ ಹೇಗೆ ಎಂಬ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಅದರ ಅನ್ವಯ ಹೈಕೋರ್ಟ್ ನಾಲ್ಕೂ ವಾರಗಳ ಗಡುವು ನೀಡಿದೆ. ಅದಕ್ಕೆ ಪೂರಕವಾಗಿ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಒಟ್ಟು ಮತದಾರರಲ್ಲಿ ಶೇ.60ಕ್ಕೂ ಹೆಚ್ಚು ಸಂಖ್ಯೆಯ ಮತದಾರರನ್ನು ಒಳಗೊಂಡ ಜಿ.ಪಂ.,ತಾ.ಪಂ. ಚುನಾವಣೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗೆ ಸವಾಲಾಗಿದೆ. ಸುಮಾರು 3 ಕೋಟಿಗೂ ಹೆಚ್ಚು ಮತದಾರರು ಮತದಾನದ ಹಕ್ಕು ಹೊಂದಿರುವುದರಿಂದ ಈ ಚುನಾವಣೆಯನ್ನು ರಾಜಕೀಯ ಪಕ್ಷಗಳು ಸವಾಲಾಗಿ ಸ್ವೀಕರಿಸಲಿವೆ. ಅಲ್ಲದೆ, ಗ್ರಾಮೀಣ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಈ ಚುನಾವಣೆಗಳು ಸಹಕಾರಿಯಾಗಲಿವೆ. ಲೋಕಸಭೆ ಚುನಾವಣೆಗೂ ಮುನ್ನ ಈ ಚುನಾವಣೆ ನಡೆದರೆ ಮುಂದಿನ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿಯಾಗಲಿದೆ.

    ಸುಮಾರು ಎರಡೂವರೆ ವರ್ಷಗಳಿಂದ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಕಾರಣದಿಂದ ಚುನಾವಣೆ ಮುಂದೂಡಿಕೊಂಡು ಬರಲಾಗಿತ್ತು. ಇತ್ತೀಚೆಗೆ ಹೈಕೋರ್ಟ್ 4 ವಾರಗಳ ಗಡುವು ನೀಡಿ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದೆ. ಹಾಗಾಗಿ
    ಸರ್ಕಾರ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.

    ಆರ್‌ಡಿಪಿಆರ್‌ನಲ್ಲಿ ಭರದ ಸಿದ್ಧತೆ

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಕ್ಷೇತ್ರ ಪುನರ್ವಿಂಗಡಣೆ ಅಂತಿಮಗೊಳಿಸಿ ರಾಜ್ಯ ಪತ್ರ ಪ್ರಕಟಿಸಬೇಕಿದೆ. ಜತೆ ಜತೆಗೆ ಮೀಸಲಾತಿ ಕೂಡ ನಿಗದಿಪಡಿಸಬೇಕಿದೆ.

    ಹೈಕೋರ್ಟ್ ತಾಕೀತು

    ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು ಸಾಂವಿಧಾನಿಕ ಸಂಸ್ಥೆಗಳು. ಈ ಸಂಸ್ಥೆಗಳಿಗೆ ಚುನಾವಣೆ ನಡೆಸೇ ಅವುಗಳನ್ನು ಖಾಲಿ ಬಿಡುವುದು ಎಷ್ಟು ಸರಿ? ನಿಮ್ಮ ವಿಳಂಬ ಧೋರಣೆ ಸಲ್ಲ. ಕ್ಷೇತ್ರಗಳ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು 4 ವಾರಗಳಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು.

    ಚುನಾವಣಾ ಆಯೋಗ ಕೂಡ ರೆಡಿ

    ಜಿಪಂ ಮತ್ತು ತಾಪಂ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಮತದಾರರ ಪಟ್ಟಿ, ಸಿಬ್ಬಂದಿಗೆ ತರಬೇತಿ ನೀಡುವ ಕೆಲಸಗಳು ಮಾತ್ರ ಬಾಕಿ ಇವೆ. ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸಿದರೆ ಒಂದು ತಿಂಗಳ ಒಳಗೆ ಚುನಾವಣೆ ನಡೆಸಲು ಬೇಕಾದ ಎಲ್ಲ ಸಿದ್ಧತೆಯನ್ನೂ ಚುನಾವಣಾ ಆಯೋಗ ಮಾಡಿಕೊಂಡಿದೆ.

    ರಾಜ್ಯದಲ್ಲಿ 5.31,33,054 ಮತದಾರರಿದ್ದು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts