More

    ಬ್ಯಾಂಕ್‌ಗಳಲ್ಲಿ ಕನ್ನಡಿಗರ ನೇಮಿಸಿ, ಉಡುಪಿ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

    ಉಡುಪಿ: ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಹುತೇಕ ಹೊರರಾಜ್ಯದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸ್ಥಳೀಯರಿಗೆ ಸಂವಹನ ಸಮಸ್ಯೆ ಉಂಟಾಗಿ ಬ್ಯಾಂಕ್ ಕೆಲಸಗಳಲ್ಲಿ ತೊಂದರೆಯಾಗುತ್ತಿದೆ. ಹೀಗಾಗಿ ಕನಿಷ್ಠ 2-3 ಮಂದಿ ರಾಜ್ಯದ ಸಿಬ್ಬಂದಿ ನೇಮಿಸುವಂತೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು.

    ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿಯ 23ನೇ ಸಾಮಾನ್ಯ ಸಭೆ ನಡೆಯಿತು.
    ಸದಸ್ಯ ಬಾಬು ಶೆಟ್ಟಿ ವಿಷಯ ಪ್ರಸ್ತಾಪಿಸಿ, ಕನ್ನಡದ ಸಿಬ್ಬಂದಿ ಇದ್ದರೆ ಸ್ಥಳೀಯರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಅನ್ಯರಾಜ್ಯದ ಸಿಬ್ಬಂದಿಯೊಂದಿಗಿನ ಭಾಷಾ ಸಮಸ್ಯೆಯಿಂದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ ಎಂದರು.
    ಬ್ಯಾಂಕಿಂಗ್ ನೇಮಕಾತಿಯಲ್ಲಿ ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಂಧ್ರ ಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶದ ಸಿಬ್ಬಂದಿ ಆಯ್ಕೆಯಾಗುತ್ತಿದ್ದಾರೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ತಿಳಿಸಿದರು.

    ಬ್ಯಾಂಕ್‌ಗಳಲ್ಲಿ ವಿದ್ಯಾಭ್ಯಾಸ ಸಾಲ ಮತ್ತು ಮುದ್ರಾ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕೂಡಲೇ ಮಂಜೂರು ಮಾಡಿ, ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು. ಸಣ್ಣ ಪುಟ್ಟ ಕಾರಣಗಳಿಗೆ ತಿರಸ್ಕರಿಸಬಾರದು. ಈ ಬಗ್ಗೆ ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಹೆಗ್ಡೆ ಹೇಳಿದರು.

    ಕಪ್ಪುಪಟ್ಟಿಗೆ ಸೇರಿಸಿ: ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು. ಅಧ್ಯಕ್ಷರು ಹಣ ಬಿಡುಗಡೆ ಮಾಡದಂತೆ ಸೂಚನೆ ನೀಡಿದರೂ ಧಿಕ್ಕರಿಸಿ ಬಿಲ್ ಪಾವತಿಸಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು. ಇದಕ್ಕೆ ಉತ್ತರಿಸಿ ಜಿಪಂ ಅಧ್ಯಕ್ಷ, ಸ್ಥಳಪರಿಶೀಲನೆ ನಡೆಸಿ ಗುತ್ತಿಗೆದಾರರನ್ನು ಸರ್ಕಾರ ಮಟ್ಟದಲ್ಲಿ ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
    ಬೆಳಗ್ಗೆ 11 ಗಂಟೆಗೆ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು ಆಗಮಿಸಿದ್ದರೂ ಕೋರಂ ಕೊರತೆಯಿಂದ 20 ನಿಮಿಷ ತಡವಾಗಿ ಸಭೆ ಪ್ರಾರಂಭವಾಯಿತು. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್, ಜಿಪಂ ಉಪಕಾರ್ಯದರ್ಶಿ ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.

    ಕಜೆ ಅಕ್ಕಿಗೂ ಬೆಂಬಲ
    ಬೆಲೆಗೆ ಸರ್ಕಾರಕ್ಕೆ ಪತ್ರ
    ಉದಯ ಕೋಟ್ಯಾನ್ ಮಾತನಾಡಿ, ಜಿಲ್ಲೆಯಲ್ಲಿ ಭತ್ತಕ್ಕೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ ಅಧಿಕಾರಿಗಳು ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ರೈತರು ಭತ್ತ ಮಾರಾಟ ಮಾಡಿದ ಬಳಿಕ ಖರೀದಿ ಕೇಂದ್ರ ತೆರೆದಿರುವ ಬಗ್ಗೆ ಆರೋಪವಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದರು. ಉತ್ತರಿಸಿದ ಆಹಾರ ಇಲಾಖೆ ಉಪನಿರ್ದೇಶಕ ಮಹಮ್ಮದ್ ಇಸಾಕ್, ಸರ್ಕಾರ ರಾಗಿ, ಜೋಳ, ಭತ್ತಕ್ಕೆ ಬೆಂಬಲಬೆಲೆ ಘೋಷಿಸಿತ್ತು. ಆದರೆ ಕಜೆ ಅಕ್ಕಿಗೆ ಬೆಂಬಲ ಬೆಲೆ ನೀಡಿಲ್ಲ. ಈ ಭಾಗದಲ್ಲಿ ಹೆಚ್ಚಿನ ರೈತರು ಕಜೆ ಮತ್ತು ಎಂಒ4 ಅಕ್ಕಿ ಬೆಳೆದಿದ್ದರು. ಹೀಗಾಗಿ ಹೆಚ್ಚಿನ ರೈತರಿಗೆ ಬೆಂಬಲ ಬೆಲೆ ನೀಡಲು ಸಾಧ್ಯವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ, ಕರಾವಳಿಯಲ್ಲಿ ಬೆಳೆಯುವ ಕಜೆ, ಜಯ, ಎಂಒ4 ಭತ್ತಕ್ಕೂ ಬೆಂಬಲ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts