More

    ಕೆಆರ್‌ಐಡಿಎಲ್‌ಗಿನ್ನು ಕುಡಿವ ನೀರಿನ ಘಟಕ ಜವಾಬ್ದಾರಿ ಇಲ್ಲ

    ಮಂಗಳೂರು: ಶುದ್ಧ ನೀರು ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಜವಾಬ್ದಾರಿಯಿಂದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಎಲ್)ವನ್ನು ಮುಕ್ತಗೊಳಿಸುವುದು ಮತ್ತು ಈ ಜವಾಬ್ದಾರಿಯನ್ನು ಸರ್ಕಾರದ ನೀರು ಸರಬರಾಜು ಇಲಾಖೆಗೆ ಹಸ್ತಾಂತರಿಸುವುದು.
    -ಇದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ 19ನೇ ಸಾಮಾನ್ಯ ಸಭೆಯಲ್ಲಿ ಸೋಮವಾರ ಕೈಗೊಂಡ ನಿರ್ಣಯ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು.
    ಕಾಮಗಾರಿ ಆರಂಭಿಸಿದ ಮತ್ತು ಶೆಡ್ ನಿರ್ಮಿಸಿದ ಘಟಕಗಳ ಜವಾಬ್ದಾರಿಯಿಂದ ಕೆಆರ್‌ಐಡಿಎಲ್‌ನ್ನು ಕೈ ಬಿಟ್ಟು, ಹೊಸ ಜವಾಬ್ದಾರಿ ಕೊಡದಂತೆ ತೀರ್ಮಾನಿಸಲಾಯಿತು.
    ಎಲ್ಲ ಶುದ್ಧ ನೀರಿನ ಘಟಕಗಳ ತಪಾಸಣೆ ನಡೆಸಲಾಗಿದ್ದು, 125 ಘಟಕಗಳಲ್ಲಿ 60 ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಗೊಂಡಿದ್ದು, ಕಾರ್ಯಾಚರಣೆಯಲ್ಲಿವೆ ಎಂದು ಜಿಪಂ ಯೋಜನಾ ನಿರ್ದೇಶಕರು ತಿಳಿಸಿದರು.

    ಪ್ರಾಕೃತಿಕ ವಿಕೋಪ ಹಣ ಸಮಸ್ಯೆ:
    ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಮಳೆ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪ್ರಾಕೃತಿಕ ವಿಕೋಪ ಯೋಜನೆಯಡಿ ಸರ್ಕಾರ ಘೋಷಿಸಿದ್ದ ಹಣ ಸಕಾಲದಲ್ಲಿ ಬಿಡುಗಡೆಯಾಗುತ್ತಿಲ್ಲ. ಅಧಿಕಾರಿಗಳು ವಿವಿಧ ಕಾರಣಗಳನ್ನು ಒದಗಿಸುತ್ತಾರೆ ಎಂದು ಸದಸ್ಯರಾದ ಕೊರಗಪ್ಪ ನಾಯ್ಕ, ತುಂಗಪ್ಪ ಬಂಗೇರ, ಮಮತಾ ಗಟ್ಟಿ, ಎಂ.ಎಸ್.ಮಹಮ್ಮದ್ ಮುಂತಾದವರು ಆಕ್ಷೇಪಿಸಿದರು.
    ಸದಸ್ಯ ವಿನೋದ್ ಕುಮಾರ್ ವಿಷಯ ಪ್ರಸ್ತಾಪಿಸಿ, ತಮ್ಮ ಕ್ಷೇತ್ರದ ತೋಕೂರು ಹಾಗೂ ಸಸಿಹಿತ್ಲು ಬಳಿ ಸಂಪೂರ್ಣ ಮನೆ ಹಾನಿಯಾಗಿದ್ದು ಪರಿಹಾರ ದೊರಕಿಲ್ಲ ಎಂದರು.
    ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ನೆರೆ ಪ್ರವಾಹಕ್ಕೆ ಸಂಬಂಧಿಸಿ ಪೂರ್ತಿ ಮನೆ ಹಾನಿ ಪರಿಹಾರ ಬಹುತೇಕವಾಗಿ ಫಲಾನುಭವಿಗಳಿಗೆ ದೊರಕಿದೆ. ಭಾಗಶಃ ಹಾನಿ ಅಥವಾ ಬಳಿಕ ನಡೆದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪರಿಹಾರಕ್ಕೆ ಸಂಬಂಧಿಸಿ ಪರಿಹಾರವೇ ದೊರಕಿಲ್ಲ ಎಂಬ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು.
    ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯವರು ಸಂಪೂರ್ಣ ಮನೆ ಹಾನಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಅದನ್ನು ವಿತರಿಸುವ ಕಾರ್ಯ ನಡೆಯುತ್ತಿದೆ. ಬಳಿಕ ಅಕ್ಟೋಬರ್, ನವೆಂಬರ್‌ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪರಿಹಾರ ಘೋಷಣೆಯಾಗಿಲ್ಲ. ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ ತಿಳಿಸಿದರು.
    ಫಲಾನುಭವಿಗಳ ಪಟ್ಟಿ ಪಡೆದು ಇಒ, ಪಿಡಿಒಗಳ ಜತೆ ಸಭೆ ನಡೆಸಿ ಪರಿಶೀಲಿಸುವುದಾಗಿ ಅವರು ಸದಸ್ಯರಿಗೆ ಭರವಸೆ ನೀಡಿದರು.
    ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಜಿಲ್ಲಾ ಪಂಚಾಯಿತಿಯಲ್ಲಿ ಬಗೆಹರಿಸಿಕೊಳ್ಳಲು ಕಂದಾಯ ಇಲಾಖೆಯಿಂದ ಓರ್ವ ನೋಡಲ್ ಅಧಿಕಾರಿಯನ್ನು ಸಭೆಗೆ ಕರೆಸಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಂಡಿದ್ದರೂ ಅನುಷ್ಠಾನಗೊಂಡಿಲ್ಲ. ಜಿಲ್ಲಾ ಪಂಚಾಯಿತಿಗೆ ನಿಯಮದಲ್ಲಿ ಇರುವ ಈ ಅವಕಾಶ ಬಳಸಿಕೊಳ್ಳಬೇಕು ಎಂದು ಸದಸ್ಯ ಜನಾರ್ದನ ಗೌಡ ಆಗ್ರಹಿಸಿದರು.
    ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧನಲಕ್ಷ್ಮಿ, ಮಮತಾ, ರವೀಂದ್ರ ಕಂಬಳಿ ಉಪಸ್ಥಿತರಿದ್ದರು.

    ಪ್ಲಾಸ್ಟಿಕ್ ತ್ಯಾಜ್ಯ ಸವಾಲು
    ಹಸಿ ಕಸ ಸಮಸ್ಯೆ ಇಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉದ್ಯಮದಲ್ಲಿ ಮರುಬಳಕೆಗೆ ಸರಿಯಾದ ಜನರು ಯಾರೂ ಸಿಗುತ್ತಿಲ್ಲ. ಪ್ರಸ್ತುತ ಔರಂಗಾಬಾದ್‌ನ ಉದ್ಯಮಿಯೋರ್ವರು ಈ ಬಗ್ಗೆ ಈಗ ಆಸಕ್ತಿ ವಹಿಸಿದ್ದು, ನಾವು ನಿರೀಕ್ಷೆಯಲ್ಲಿದ್ದೇವೆ ಎಂದು ಸಿಇಒ ತಿಳಿಸಿದರು.

    ಪಕ್ಷ ಹಣ ಬಿಡುಗಡೆ ಮಾಡುತ್ತದೆಯೇ?:
    ಸರ್ಕಾರದ ಯೋಜನೆಗಳಿಗೆ ಯಾವುದಾದರೂ ರಾಜಕೀಯ ಪಕ್ಷಗಳು ಹಣ ಬಿಡುಗಡೆ ಮಾಡುತ್ತಿವೆಯೇ? ಅನೇಕ ಶಿಲಾನ್ಯಾಸ, ಪೂರ್ಣಗೊಂಡ ಯೋಜನೆ ಉದ್ಘಾಟನೆ ಸಂದರ್ಭ ನಿರ್ದಿಷ್ಟ ರಾಜಕೀಯ ಪಕ್ಷದ ಚಿಹ್ನೆ, ರಾಜಕೀಯ ಮುಖಂಡರ ಭಾವಚಿತ್ರ ಹಾಕಿ ಬ್ಯಾನರ್, ಪೋಸ್ಟರ್ ಹಾಕಲಾಗುತ್ತಿದೆ. ಇತರ ಪಕ್ಷದ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗುತ್ತಿಲ್ಲ ಎಂದು ಸದಸ್ಯ ಶಾಹುಲ್ ಹಮೀದ್ ಆಕ್ಷೇಪಿಸಿದರು. ‘ಈ ಪರಂಪರೆ ನಿಮ್ಮ ಪಕ್ಷದವರೇ ಆರಂಭಿಸಿದ್ದು’ ಎಂದು ಸದಸ್ಯ ವಿನೋದ್ ಕುಮಾರ್ ನಗುಮುಖದ ಪ್ರತಿಕ್ರಿಯೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts