More

    ಮತದಾನ ಪ್ರಮಾಣ ಏರಿಕೆಗೆ ಜಿಪಂ ಸಿಇಒ ಸೂಚನೆ

    ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಎಲ್ಲ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ತನ್ಮೂಲಕ ಜಿಲ್ಲೆಯಲ್ಲಿ ಶೇ.100 ಮತದಾನ ಆಗುವಂತಾಗಲು ಎಲ್ಲ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಜಿಪಂ ಸಿಇಒ ಹಾಗೂ ಸ್ವೀಪ್​ ಸಮಿತಿ ಅಧ್ಯಕ್ಷ ಪ್ರತಿಕ್​ ಬಾಯಲ್​ ಹೇಳಿದರು.
    ಉಡುಪಿಯ ಜಿಲ್ಲಾ ಪಂಚಾಯಿತಿಯ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಸ್ವೀಪ್​ ಸಮಿತಿಯ ಸಭೆಯಲ್ಲಿ ಮಾತನಾಡಿ, ಉಡುಪಿ&-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರತಿ ಮತದಾರರಲ್ಲಿ ಮತದಾನ ಕುರಿತು ವ್ಯವಸ್ಥಿತವಾಗಿ ಅರಿವು ಮೂಡಿಸಬೇಕು ಎಂದರು.

    ಸೌಲಭ್ಯ ಕಲ್ಪಿಸಿ: ಮತಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ವಿಶೇಷ ಗಮನ ಹರಿಸಬೇಕು. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. 85 ವರ್ಷ ಮೇಲ್ಪಟ್ಟ ಮತದಾರರಿಗೆ ಮತಕೇಂದ್ರಕ್ಕೆ ಬಂದು ಮತದಾನ ಮಾಡಲು ಸಾಧ್ಯವಾಗದೆ ಇದ್ದರೆ ಅಂತಹವರಿಗೆ ಮನೆಯಲ್ಲಿಯೇ ಮತದಾನ ಮಾಡಲು ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಗಮನ ನೀಡಬೇಕು ಎಂದರು.

    ಮನೆಮನೆಗೆ ಕ್ರಮ ಸಂಖ್ಯೆಯ ಚೀಟಿ ತಲುಪಿಸಿ
    ಕಳೆದ ಚುನಾವಣೆಯಲ್ಲಿ ಮತದಾನ ಕಡಿಮೆ ಆಗಿರುವ ಕೇಂದ್ರಗಳ ವ್ಯಾಪ್ತಿಯಲ್ಲಿ ಮತದಾನ ಹೆಚ್ಚಿಸಲು ವಿವಿಧ ಸ್ವೀಪ್​ ಚಟುವಟಿಕೆ, ಮಾಹಿತಿ ಕಾರ್ಯಕ್ರಮ ಆಯೋಜಿಸಬೇಕು. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಅರಿವು ಮೂಡಿಸಬೇಕು. ಬಿಎಲ್​ಒಗಳು ಪ್ರತಿ ಮತದಾರರಿಗೂ ಮತದಾನಕ್ಕೆ ಅನುಕೂಲವಾಗುವಂತೆ ಮತದಾನ ಕ್ರಮ ಸಂಖ್ಯೆಯ ಚೀಟಿಯನ್ನು ಮನೆಮನೆಗೂ ವಿತರಿಸಬೇಕು. ಮತಯಂತ್ರದ ಬಳಕೆಯ ಕುರಿತೂ ಅರಿವು ಮೂಡಿಸಬೇಕು. ಯುವ ಮತದಾರರು ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ತೊಡಗುವಂತೆ ಜಾಗೃತಿ ಹಾಗೂ ಮತದಾನದ ಮಹತ್ವ ತಿಳಿಸಬೇಕು ಎಂದು ಜಿಪಂ ಸಿಇಒ ಪ್ರತಿಕ್​ ಬಾಯಲ್​ ಸಲಹೆ ನೀಡಿದರು.

    ಜಿಲ್ಲೆಯ ಪ್ರತಿ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ವೆಬ್​ಸೈಟ್​ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬಹುದು. ಒಂದು ವೇಳೆ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿದ್ದಲ್ಲಿ ಅರ್ಜಿ ಸಲ್ಲಿಸಿ, ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರತಿಕ್​ ಬಾಯಲ್​ ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ. ಗಡಾದ್​, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಕಾರ್ಮಿಕ ಇಲಾಖೆಯ ಅಧಿಕಾರಿ ಕುಮಾರ್​, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಡಿಡಿಪಿಯು ಮಾರುತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ. ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts