ಹಾವೇರಿ: ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅ. 9ರಿಂದ ಮೂರು ದಿನಗಳ ಕಾಲ ಬೆಳಗಾವಿ ವಿಭಾಗಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕರ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾವಳಿ ಜರುಗಲಿದೆ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾಗೇಂದ್ರ ಪಂದ್ಯಾವಳಿ ಅಂಕಣದ ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಿಕ್ಷಕ ಜಮೀರ ರಿತ್ತಿ ಬರೆದ ‘ಕಬಡ್ಡಿ-ಮಿಂಚಿ ಮರೆಯಾದವರು’ ಎಂಬ ಸಂಶೋಧನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ ಎಂದರು.
ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಶಿರಸಿ ಮತ್ತು ಚಿಕ್ಕೋಡಿ(ಶೈಕ್ಷಣಿಕ ಜಿಲ್ಲೆಗಳು) ಸೇರಿ ಒಟ್ಟು 9 ಜಿಲ್ಲೆಯ 14ರಿಂದ 17 ವರ್ಷದ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಒಟ್ಟು 432 ಕ್ರೀಡಾಪಟುಗಳು, 100 ಜನ ತೀರ್ಪಗಾರರು ಭಾಗವಹಿಸಲಿದ್ದಾರೆ ಎಂದರು.
ವಿವಿಧ ಇಲಾಖೆಯ 250 ಜನರು ಕ್ರೀಡಾಕೂಟದ ಯಶಸ್ಸಿಗಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಅ. 9ರಂದು ವಿವಿಧ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳನ್ನು ಬ್ಯಾಟಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ವಿವಿಧ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ತಾಲೂಕು ಕ್ರೀಡಾಂಗಣಕ್ಕೆ ಕರೆತರಲಾಗುವುದು. ಪಂದ್ಯಾವಳಿ ವೀಕ್ಷಣೆಗೆ 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡದ ಕುರಿತು ಪ್ರತಿಕ್ರಿಯಿಸಿದ ಅವರು, ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಶೇ. 80-90ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಹೀಗಿರುವಾಗ ಬರ ಅಧ್ಯಯನಕ್ಕೆ ಮೊದಲ ಆದ್ಯತೆ ಹಾವೇರಿ ಜಿಲ್ಲೆಗೆ ನೀಡಬೇಕಿತ್ತು. ಈ ಬಗ್ಗೆ ನನಗೂ ಬೇಸರವಾಗಿದೆ. ಬೇರೆ ಜಿಲ್ಲೆಗಳಲ್ಲಿ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ಮಾಡಿದ್ದು, ನಮ್ಮ ಜಿಲ್ಲೆಯ ರೈತರಿಗೆ ಸಹ ಪರಿಹಾರ ಬರುತ್ತದೆ. ಹೀಗಾಗಿ ರೈತರು ಆತಂಕಗೊಳ್ಳುವುದು ಬೇಡ ಎಂದರು.
ಬರ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಅಧಿಕಾರದ ಅವಧಿಯಲ್ಲಿ ಅತಿವೃಷ್ಟಿಯಿಂದ ಬಿದ್ದ ಮನೆಗಳಿಗೆ ಈವರೆಗೂ ಪರಿಹಾರ ನೀಡಿಲ್ಲ. ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರ ಕಾಲದಲ್ಲಿ ಬಿದ್ದ ಮನೆಗಳಿಗೆ ನಮ್ಮ ಸರ್ಕಾರ ಪರಿಹಾರ ನೀಡುತ್ತಿದೆ ಎಂದರು.
ಪ್ರಮುಖರಾದ ಚನ್ನಬಸಪ್ಪ ಹುಲ್ಲತ್ತಿ, ಕುಮಾರಣ್ಣ ಚೂರಿ, ಹೊಳೆಪ್ಪ ಸೂರದ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ರೈತರಲ್ಲಿ ಮನವಿ
ಅ. 9ರಂದು ನಡೆಯುವ ಕಬಡ್ಡಿ ಪಂದ್ಯಾವಳಿಗೆ ಸಚಿವರು ಸೇರಿದಂತೆ ಬೇರೆ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದು, ರೈತರು ಅಹೋರಾತ್ರಿ ಧರಣಿ ಕೈಬಿಡಬೇಕು. ಸೋಮವಾರ ಅ. 9ರಂದು ಸರ್ಕಾರ ತಾಲೂಕನ್ನು ಬರಗಾಲವೆಂದು ಘೊಷಿಸಲಿದೆ. ಇಲ್ಲವಾದರೆ ನಾನೂ ನಿಮ್ಮೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳುವೆ. ಆದರೆ ರೈತರು, ಘೕರಾವ್, ಅಹೋರಾತ್ರಿ ಧರಣಿ ಕೈಬಿಡಬೇಕು ಎಂದು ಶಿವಣ್ಣನವರ ಮನವಿ ಮಾಡಿದರು.