More

    ಮೊಸಳೆ ದವಡೆಗೆ ಸಿಲುಕಿದ್ದ ಮಗನನ್ನು ರಕ್ಷಿಸಲು ಪ್ರಾಣ ಪಣಕ್ಕಿಟ್ಟು ಕಾದಾಡಿದ ತಾಯಿ: ಮುಂದೇನಾಯ್ತು ಗೊತ್ತಾ ?

    ಹರಾರೆ(ಜಿಂಬಾಬ್ವೆ): ಮೊಸಳೆಯ ದವಡೆಗೆ ಸಿಲುಕಿದ್ದ ಮೂರು ವರ್ಷದ ಮಗನನ್ನು ರಕ್ಷಿಸಿಕೊಳ್ಳಲು ಸರೀಸೃಪದೊಂದಿಗೆ ಕಾದಾಟಕ್ಕೆ ಇಳಿದ ತಾಯಿ ತನ್ನ ಚಾಣಾಕ್ಷತೆಯಿಂದ ದೈತ್ಯ ಜೀವಿಯ ಮೂಗಿನ ಹೊಳ್ಳೆಗಳಿಗೆ ಬೆರಳು ತೂರಿ ತನ್ನ ಕಂದನನ್ನು ಕಾಪಾಡಿಕೊಂಡ ರೋಚಕ ಘಟನೆ ಜಿಂಬಾಬ್ವೆಯಿಂದ ವರದಿಯಾಗಿದೆ.

    ಮೌರಿನಾ ಮುಸಿಸಿನ್ಯಾನ(30) ಎಂಬಾಕೆಯೇ ಮಗುವನ್ನು ರಕ್ಷಿಸಿಕೊಂಡ ದಿಟ್ಟ ತಾಯಿ. ಚಿರೆಡ್ಜಿ ಗ್ರಾಮದ ನಿವಾಸಿ ಮೌರಿನಾಳ ಗಂಡು ಮಕ್ಕಳಿಬ್ಬರು ಆಗ್ನೇಯಾ ಜಿಂಬಾಬ್ವೆಯ ಗೊನಾರೆಜಹು ರಾಷ್ಟ್ರೀಯ ಉದ್ಯಾನವನ ಬಳಿಯಿರುವ ರುಂಡೆ ನದಿ ದಡದಲ್ಲಿ ಆಡುವಾಗ ಭೀಕರ ಘಟನೆ ನಡೆದಿದೆ.

    ಮೌರಿನಾ ನದಿಯಲ್ಲಿ ಮೀನು ಹಿಡಿಯುವಾಗ ಯಾರೋ ಕೂಗಾಡುವುದನ್ನು ಕೇಳಿದ್ದಾಳೆ. ತಕ್ಷಣ ತನ್ನ 3 ವರ್ಷದ ಮಗ ಗಿಡೆಯೊನ್​ ಮೊಸಳೆ ಬಾಯಿಗೆ ಸಿಲುಕಿಕೊಂಡಿದ್ದನ್ನು ನೋಡಿ ಶಾಕ್​ ಆಗಿದ್ದಾಳೆ. ದಡದಲ್ಲಿ ಛತ್ರಿಯೊಂದಿಗೆ ಆಟುತ್ತಿದ್ದ ಗಿಡೆಯೊನ್​ನನ್ನು ಛತ್ರಿ ಸಮೇತ ನೀರಿನೊಳಗೆ ಮೊಸಳೆ ಎಳೆದುಕೊಂಡಿದೆ. ತಕ್ಷಣವೇ ತನ್ನ ಮೀನು ಹಿಡಿಯುವ ಸಾಧನವನ್ನು ಪಕ್ಕಕ್ಕೆ ಎಸೆದ ಮೌರಿನಾ ನೀರಿಗೆ ಜಿಗಿಯುತ್ತಾಳೆ.

    ಮೊಸಳೆಯೊಂದಿಗೆ ಕಾದಾಡುವಾಗ ಮೌರಿನಾಗೆ ತನ್ನ ಹಿರಿಯರ ಮಾತೊಂದು ನೆನಪಾಗುತ್ತದೆ. ಅದೇನೆಂದರೆ ಮೊಸಳೆಯ ಮೂಗನ್ನು ಒತ್ತಿ ಹಿಡಿದರೆ, ಉಸಿರಾಟದ ತೊಂದರೆಯಿಂದ ಮೊಸಳೆ ತನ್ನ ಬಲವನ್ನು ಕಳೆದುಕೊಳ್ಳುತ್ತದೆ ಎಂಬುದು. ತಕ್ಷಣ ಮೊಸಳೆಯ ಬಾಯಲ್ಲಿ ಸಿಲುಕಿರುವ ಮಗುವನ್ನು ಬಿಡಿಸಲು ಮೌರಿನಾ ತನ್ನ ತೋಳನ್ನ ಉಪಯೋಗಿಸಿ, ಕೈಬೆರಳುಗಳಿಂದ ಮೊಸಳೆಯ ಮೂಗಿನ ಹೊಳ್ಳೆಗಳಿಗೆ ಸಿಗಿಸುತ್ತಾಳೆ. ಈ ವೇಳೆ ಮೊಸಳೆಯು ಕೂಡ ಮೌರಿನಾಳನ್ನು ಗಾಯಗೊಳಿಸುತ್ತದೆ. ಕೊನೆಗೂ ಅದರ ದವಡೆಯಿಂದ ಮಗುವನ್ನು ಬಿಡಿಸಿಕೊಂಡು ಈಜಿಕೊಂಡು ಮೌರಿನಾ ದಡವನ್ನು ತಲುಪುತ್ತಾಳೆ.

    ಮಗು ಗಿಡೆಯೊನ್​ ಮುಖವನ್ನು ಮೊಸಳೆ ಕಚ್ಚಿ ಹಿಡಿದಿದ್ದರಿಂದ ಆತನಿಗೆ ಗಂಭೀರ ಗಾಯಗಳಾಗಿ, ಉಸಿರಾಟದ ತೊಂದರೆಯು ಎದುರಾದಾಗ ಮೌರಿನಾ ತಕ್ಷಣ ಆಸ್ಪತ್ರೆಗೆ ಧಾವಿಸಿ, ಮಗುವಿನೊಂದಿಗೆ ತಾನೂ ಚಿಕಿತ್ಸೆ ಪಡೆದುಕೊಳ್ಳುತ್ತಾಳೆ.

    ಮೊಸಳೆಯೊಂದಿಗಿನ ಕಾದಾಟದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಮೌರಿನಾ, ನಾನು ನನ್ನ ಮಗನನ್ನು ರಕ್ಷಿಸಿದೆ ಎಂಬುದನ್ನು ಈ ಕ್ಷಣದಲ್ಲೂ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಮಗು ಗಿಡೆಯೊನ್​ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಡಾ. ಮೆಸ್ಚೆಕ್​ ಚಿಬ್ವೆ ತಿಳಿಸಿದ್ದು, ಸದ್ಯ ತಾಯಿ ಮತ್ತು ಮಗು ಮೊಸಳೆ ದಾಳಿಯಿಂದ ಬಚಾವ್​ ಆಗಿ ಗುಣಮುಖರಾಗಿದ್ದಾರೆ.

    ಇನ್ನು ರುಂಡೆ ನದಿ ಮೊಸಳೆಗಳ ಆವಾಸ ಸ್ಥಾನವಾಗಿದ್ದು, ಆಗ್ನೇಯ ಜಿಂಬಾಬ್ವೆಯ ಚಿರೆಡ್ಜಿ ಗ್ರಾಮದ ಜನರು ಮೀನು ಹಿಡಿಯುವಾಗ ಅಥವಾ ನದಿಯನ್ನು ದಾಟುವಾಗ ಮೊಸಳೆ ದಾಳಿಗೆ ಸಿಲುಕಿ ಸಾವಿಗೀಡಾಗಿರುವ ಸಾಕಷ್ಟು ಉದಾಹರಣೆಗಳು ಇವೆ. ರುಂಡೆ ನದಿಯಲ್ಲಿ ನೈಲ್​ ಮೊಸಳೆಗಳು ಹೆಚ್ಚಾಗಿವೆ. ನ್ಯಾಷನಲ್​ ಜಿಯೋಗ್ರಫಿ ಪ್ರಕಾರ ಈ ಮೊಸಳೆಗಳು ಮಾನವ ಭಕ್ಷಕಗಳಾಗಿವೆ. ಅತಿ ಮುಖ್ಯವಾಗಿ ಮೀನನ್ನೇ ತಿಂದು ಬದುಕಿದರೂ, ತನ್ನ ಹಾದಿಯನ್ನು ದಾಟುವ ಜೀಬ್ರಾ, ಸಣ್ಣ ನೀರು ಕುದುರೆಗಳ ಮೇಲೆಯೂ ದಾಳಿ ಮಾಡುತ್ತವೆ. ಪ್ರತಿ ವರ್ಷ ಮೊಸಳೆ ದಾಳಿಗೆ 200 ಮಂದಿ ಸಾವಿಗೀಡಾಗುತ್ತಾರೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್​)

    ಇದ್ದಕ್ಕಿದಂತೆ ಚೀನಾ ಕರೊನಾ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದ್ದೇಕೆ?: ಅನುಮಾನ ಮೂಡಿಸಿದ ಸರ್ಕಾರದ ನಡೆ

    ಕೋವಿಡ್​ ಭೀಕರತೆಗೆ ಸಾಕ್ಷಿಯಾದ ಆಸ್ಪತ್ರೆ: ಕರೊನಾ ಮೃತದೇಹಗಳ ಎದುರೇ ರೋಗಿಗಳಿಗೆ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts