More

    ಶೂನ್ಯ ತ್ಯಾಜ್ಯ ವಲಯ ಸೃಷ್ಟಿ

    ಶ್ರವಣ್ ಕುಮಾರ್ ನಾಳ ಪುತ್ತೂರು

    ಬನ್ನೂರು ನೆಕ್ಕಿಲ ಡಂಪಿಂಗ್ ಯಾರ್ಡ್‌ನಲ್ಲಿ 15 ವರ್ಷಗಳಿಂದ ಮಣ್ಣಿನೊಳಗೆ ಹುದುಗಿರುವ 50 ಸಾವಿರ ಟನ್ ಹಳೇ ತ್ಯಾಜ್ಯ ತೆರವು ಮಾಡಿ ಶೂನ್ಯ ತ್ಯಾಜ್ಯ ವಲಯವಾಗಿ ಪರಿವರ್ತಿಸಲು ನಗರಸಭೆಯಿಂದ ಮಹತ್ತರ ಯೋಜನೆಯೊಂದರ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದೆ.

    ಲ್ಯಾಂಡ್‌ಫಿಲ್ ಸೈಟ್ ಆಗಿರುವ ಬನ್ನೂರು ಡಂಪಿಂಗ್ ಯಾರ್ಡ್ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆಯಿದ್ದು, ಪ್ರಸ್ತುತ ಸಮಸ್ಯೆ ಮುಕ್ತಗೊಳಿಸುವ ನಿರೀಕ್ಷೆ ಮೂಡಿಸಿದೆ. ನಗರದೆಲ್ಲೆಡೆ ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯ ಡಂಪಿಂಗ್ ಯಾರ್ಡ್‌ನಲ್ಲಿ ಸಂಸ್ಕರಣೆಯಾಗದೆ ನೇರವಾಗಿ ಮಣ್ಣಿನೊಳಗೆ ಹುದುಗಿಡುವ ವ್ಯವಸ್ಥೆ ನಡೆದು ಬಂದಿದೆ. ಸರ್ವೇ ಪ್ರಕಾರ ಹೀಗೆ ಹುದುಗಿರುವ ತ್ಯಾಜ್ಯ 50 ಸಾವಿರ ಟನ್ ದಾಟಿದೆ.

    1.41 ಕೋಟಿ ರೂ.ಅನುದಾನ: ಸ್ವಚ್ಛ ಭಾರತ್ ಮಿಶನ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗಾಗಿ ನಗರಸಭೆಗೆ ಬಿಡುಗಡೆಗೊಂಡಿರುವ 1.41 ಕೋಟಿ ರೂ. ಅನುದಾನವನ್ನು ಹಳೇ ತ್ಯಾಜ್ಯ ತೆರವಿಗೆ ಬಳಸುವ ಬಗ್ಗೆ ಸಿದ್ಧ್ದಪಡಿಸಿದ ಡಿಸಿಆರ್ ಜಿಲ್ಲಾಧಿಕಾರಿಗೆ ಕಳುಹಿಸಲು ಪುತ್ತೂರು ನಗರಸಭೆ ಒಪ್ಪಿಗೆ ಸೂಚಿಸಿದೆ. ಯೋಜನಾ ವರದಿಯ ವಿಸ್ತೃತ ವರದಿಯನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಿ ಅಲ್ಲಿಂದ ಒಪ್ಪಿಗೆ ಕಾಮಗಾರಿ ಬಗ್ಗೆ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಈಗಾಗಲೇ ಕೇಂದ್ರ ಪರಿಸರ ಮಾಲಿನ ನಿಯಂತ್ರಣ ಮಂಡಳಿ ಮಾರ್ಗಸೂಚಿ ಪ್ರಕಾರ ಹಳೇ ತ್ಯಾಜ್ಯ ತೆರವಿಗೆ ಡಿಪಿಆರ್ ಸಿದ್ಧಗೊಳಿಸಿದೆ.

    ಡಂಪಿಂಗ್ ಯಾರ್ಡ್‌ನ ಮಣ್ಣಿನೊಳಗೆ ಅಂದಾಜು 50 ಸಾವಿರ ಟನ್ ತ್ಯಾಜ್ಯ ಇರಬಹುದು. ಈಗಾಗಲೇ 1.41 ಕೋಟಿ ರೂ.ಅನುದಾನವನ್ನು ಹಳೇ ತ್ಯಾಜ್ಯ ತೆರವಿಗೆ ಬಳಸುವ ಬಗ್ಗೆ ಪಿಆರ್ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಲು ಸಾಮಾನ್ಯ ಸಭೆ ಒಪ್ಪಿಗೆ ನೀಡಿದೆ ಎಂದು ಪೌರಾಯುಕ್ತ ಮಧು ಮನೋಹರ್ ತಿಳಿಸಿದ್ದಾರೆ.

    ಚೆನ್ನೈ ಕಂಪೆನಿ ಜತೆ ಒಪ್ಪಂದ: 2006ರಿಂದ ಪ್ರತಿದಿನ 10 ಟನ್ ತ್ಯಾಜ್ಯ ಮಣ್ಣೊಳಗೆ ಹುದುಗಿಸಲಾಗುತ್ತಿದ್ದು, ವರ್ಷಗಳಲ್ಲಿ 15 -20 ಟನ್ ತ್ಯಾಜ್ಯ ಯಾರ್ಡ್‌ಗೆ ಸೇರುತ್ತಿದೆ. ಈ ಎಲ್ಲ ತ್ಯಾಜ್ಯ ತೆರವಿಗೆ 4.5 ಕೋಟಿ ರೂ. ವೆಚ್ಚ ತಗಲುವ ಸಾಧ್ಯತೆ ಇದೆ. ಈಗಾಗಲೇ ಸ್ವಚ್ಛ ಭಾರತ್ ಮಿಷನ್‌ನಡಿ ಬಿಡುಗಡೆಗೊಂಡಿರುವ 1.41 ಕೋಟಿ ರೂ.ಯನ್ನು ತ್ಯಾಜ್ಯ ತೆರವಿಗೆ ಬಳಸಲು ನಿರ್ಧರಿಸಿದ್ದು, ಉಳಿದ ಮೊತ್ತದ ಕ್ರೋಡೀಕರಣ ಆಗಬೇಕಿದೆ. ತೆರವುಗೊಳಿಸಿದ ಹಳೇ ತ್ಯಾಜ್ಯವನ್ನು ಉಚಿತವಾಗಿ ಸಾಗಾಟ ಮಾಡಲು ಚೆನ್ನೈ ಕಂಪನಿ ಜತೆ 2024ರ ತನಕ ನಗರಸಭೆ ಒಪ್ಪಂದ ಮಾಡಿಕೊಂಡಿದೆ.

    ಬಯೋಗ್ಯಾಸ್ ಉತ್ಪಾದನೆಯ ಗುರಿ: ಮಣ್ಣಿನೊಳಗಿನ ತ್ಯಾಜ್ಯ ತೆರವಾದ ಬಳಿಕ ಬನ್ನೂರು ಲ್ಯಾಂಡ್‌ಫಿಲ್ ಸೈಟ್ ತ್ಯಾಜ್ಯ ಮುಕ್ತವಾಗಲಿದೆ. ಮುಂದಿನ ದಿನಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಸಂಸ್ಕರಿಸಿ ಘನತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಿಸುವ ಮಹತ್ವದ ಯೋಜನೆಗೆ ರೋಟರಿ ಸಂಸ್ಥೆ ಮುಂದಾಗಿದ್ದು, ಬೆಂಗಳೂರಿನ ಸೈನಾಡ್ ಬಯೋಸೈನ್ಸ್ ಕಂಪನಿಯ ಸಲಹೆಯಡಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ರೋಟರಿ ಸಂಸ್ಥೆ ಪೂರ್ಣ ಬಂಡವಾಳ ಹೂಡಲಿದೆ.

    ಬನ್ನೂರು ನೆಕ್ಕಿಲದಲ್ಲಿರುವ ಡಂಪಿಂಗ್ ಯಾರ್ಡ್ ಲ್ಯಾಂಡ್‌ಫಿಲ್ ಸೈಟ್ ಆಗಿದ್ದು, ಇಲ್ಲಿ ಕಳೆದ 15 ವರ್ಷಗಳಿಂದ ಒಟ್ಟು 50 ಸಾವಿರ ಟನ್ ಹಳೇ ತ್ಯಾಜ್ಯ ಮಣ್ಣಿನಲ್ಲಿ ಹುದುಗಿಸಿದ್ದರಿಂದ ಪರಿಸರ ಹಾನಿ ಸಂಭವಿಸುವ ಸಾಧ್ಯತೆ ಇದೆ. ಇದರಿಂದ ಇಲ್ಲಿನ ತ್ಯಾಜ್ಯ ತೆರವು ಮಾಡಿ ಶೂನ್ಯ ತ್ಯಾಜ್ಯ ವಲಯವಾಗಿ ಪರಿವರ್ತಿಸಲು ನಗರಸಭೆಯಿಂದ ಮಹತ್ತರ ಯೋಜನೆ ಸಿದ್ಧಗೊಂಡಿದೆ.
    -ಜೀವಂಧರ್ ಜೈನ್, ಅಧ್ಯಕ್ಷರು, ಪುತ್ತೂರು ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts