More

    ನಿವೃತ್ತಿಯಿಂದ ವಾಪಸ್ ಆಗಲು ಯುವರಾಜ್ ಸಿಂಗ್ ಚಿಂತನೆ..!

    ಬೆಂಗಳೂರು: ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡುವ ಸಲುವಾಗಿ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ತವರು ರಾಜ್ಯ ಪಂಜಾಬ್ ತಂಡ ಪ್ರತಿನಿಧಿಸುವ ಸಲುವಾಗಿ ಯುವರಾಜ್ ಸಿಂಗ್ ನಿವೃತ್ತಿ ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತ್ರ ಬರೆದಿರುವ ಯುವರಾಜ್ ಸಿಂಗ್, ಯುವ ಆಟಗಾರರಿಂದಲೇ ಕೂಡಿರುವ ಪಂಜಾಬ್ ಪರ ಮತ್ತಷ್ಟು ದಿನ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್‌ಗೆ ಹೊಸ ಜವಾಬ್ದಾರಿ ನೀಡಿದ ಕೋಚ್ ಅನಿಲ್ ಕುಂಬ್ಳೆ

    2019ರ ಜೂನ್ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್, ಬಳಿಕ ಕೆನಡದಲ್ಲಿ ಗ್ಲೋಬಲ್ ಟಿ20 ಟೂರ್ನಿ, ದುಬೈನಲ್ಲಿ ಟಿ10 ಲೀಗ್‌ನಲ್ಲಿ ಆಡಿದ್ದರು. ಇದೀಗ ಪಂಜಾಬ್ ತಂಡಕ್ಕೆ ಶಕ್ತಿ ತುಂಬಲು ಯತ್ನಿಸುತ್ತಿರುವ ಯುವರಾಜ್, ಶುಭಮಾನ್ ಗಿಲ್, ಅನ್ಮೋಲ್‌ಪ್ರೀತ್ ಸಿಂಗ್, ಅಭಿಷೇಕ್ ಶರ್ಮ, ಹರ್‌ಪ್ರೀತ್ ಬ್ರಾರ್‌ರಂಥ ಯುವ ಕ್ರಿಕೆಟಿಗರೊಂದಿಗೆ ಆಡಲು ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ. ನಾನು ಮತ್ತು ಹರ್ಭಜನ್ ಸಿಂಗ್ ಪಂಜಾಬ್ ಚಾಂಪಿಯನ್ ಆಗಲು ಯುವಕರಿಗೆ ಪ್ರೇರಣೆಯಾಗಲು ಬಯಸುತ್ತೇವೆ ಎಂದು ಯುವಿ ಹೇಳಿದ್ದಾರೆ. ಇದಕ್ಕೂ ಮೊದಲು ಪಂಜಾಬ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಪುನೀತ್ ಬಾಲಿ, ರಾಜ್ಯ ತಂಡದ ಪರ ಆಡುವ ಸಲುವಾಗಿ ನಿವೃತ್ತಿ ವಾಪಸ್ ಪಡೆಯಬೇಕೆಂದು ಯುವರಾಜ್ ಸಿಂಗ್‌ಗೆ ಮನವಿ ಮಾಡಿದ್ದರು.

    ಇದನ್ನೂ ಓದಿ: VIDEO: ದಿಗ್ಗಜ ಸಚಿನ್ ತೆಂಡುಲ್ಕರ್ ಚೊಚ್ಚಲ ಏಕದಿನ ಶತಕಕ್ಕೆ 26 ವರ್ಷ…!

    ಯುವರಾಜ್ ಸಿಂಗ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಷಾಗೆ ಇ-ಮೇಲ್ ಕಳುಹಿಸಿದ್ದಾರೆ. ಒಂದು ವೇಳೆ ಆಡುವ ಅವಕಾಶ ಲಭಿಸಿದರೂ ಚುಟುಕು ಕ್ರಿಕೆಟ್‌ನಲ್ಲಿ ಆಡುವುದಾಗಿಯೂ ಯುವರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ಯುವರಾಜ್ ಸಿಂಗ್ ಮನವಿಯಲ್ಲಿ ಪುರಸ್ಕರಿಸಿದರೆ ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ, ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ದೇಶೀಯ ಕ್ರಿಕೆಟ್ ಟೂರ್ನಿಗಳು ನಡೆಯುವುದು ಅನುಮಾನವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts