More

    ಯುವಜನರಿಗೆ ವಂಚಿಸುವ ಯುವನಿಧಿ: ಕೋಟ ಶ್ರೀನಿವಾಸ ಪೂಜಾರಿ

    ಬೆಂಗಳೂರು:
    ಕಾಂಗ್ರೆಸ್ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಯುವನಿಧಿ ಅನುಷ್ಠಾನಕ್ಕೆ 10 ಸಾವಿರ ಕೋಟಿ ರೂ ಮೀಸಲಿಡದೆ, ಕೇವಲ 700 ಕೋಟಿ ಮೀಸಲಿಟ್ಟು ವಂಚಿಸಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಯುವನೀತಿ ಕುರಿತ ಪ್ರಣಾಳಿಕೆಯಲ್ಲಿ ಪದವಿ ಪಡೆದ ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ, ಡಿಪ್ಲೊಮಾ ಮಾಡಿದ ನಿರುದ್ಯೋಗಿಗೆ 1500 ಸಾವಿರ ಕೊಡುವುದಾಗಿ ಹೇಳಿದ್ದನ್ನು ಕಾಂಗ್ರೆಸ್ ಮರೆತಿದೆ ಎಂದರು.
    2022-23ರಲ್ಲಿ ಡಿಗ್ರಿ ಪಡೆದ 4 ಲಕ್ಷ ಯುವಕರು, 48 ಸಾವಿರ ಜನ ಡಿಪ್ಲೊಮಾ ಪಡೆದವರಿದ್ದಾರೆ. ಅದರಲ್ಲಿ ಉದ್ಯೋಗ ಪಡೆದವರನ್ನು ಕೈಬಿಟ್ಟು ಹೆಚ್ಚು ಕಡಿಮೆ 3 ರಿಂದ 3.5 ಲಕ್ಷ ನಿರುದ್ಯೋಗಿಗಳಿಗೆ 600- 700 ಕೋಟಿ ಖರ್ಚು ಮಾಡಿ ಯುವನೀತಿ ಅನುಷ್ಠಾನ ಮಾಡಿದ್ದಾಗಿ ಹೇಳಿಕೊಳ್ಳುತ್ತಿರುವುದು ಎಷ್ಟು ಸರಿ? ಇದು ವಂಚನೆಯಲ್ಲವೇ? ಎಂದು ಪ್ರಶ್ನಿಸಿದರು.
    ಯುವನಿಧಿ ಅನುಷ್ಠಾನ ವಿಳಂಬದ ಕುರಿತು ಬಿಜೆಪಿ ಟೀಕಿಸಿದ ಬಳಿಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ವರ್ಷದವರಿಗೆ ಮಾತ್ರ ಎಂದು ಸೀಮಿತ ಮಾಡಿದ್ದಾರೆ. ಡಿಗ್ರಿ ಮತ್ತು ಡಿಪ್ಲೊಮಾ ಪಡೆದವರು 40 ಲಕ್ಷ ಜನರಿರುವುದು ಸರ್ಕಾರದ ಗಮನಕ್ಕಿಲ್ಲವೇ? ಎಂದು ಕೇಳಿದರು.
    ಕೇವಲ ಮತಕ್ಕಾಗಿ ಪಂಚ ಗ್ಯಾರಂಟಿ ಜಾರಿ ಮಾಡಿದ್ದಾರೆ. ನಿಜವಾಗಿ ಗ್ಯಾರಂಟಿ ಅನುಷ್ಠಾನದಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

    ಸರಿಯಾದ ನಿರ್ಧಾರ ಆಗಲಿದೆ
    ಯಾವುದೇ ಶಿಸ್ತು ಮತ್ತು ಅಶಿಸ್ತು ಸೇರಿದಂತೆ ಪಕ್ಷದ ಮುಖಂಡರ ಎಲ್ಲ ಚಟುವಟಿಕೆಗಳನ್ನು ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ತಂಡಗಳು ಗಮನಿಸಲಿವೆ. ಈ ಬಗ್ಗೆ ಸಕಾಲದಲ್ಲಿ ಸರಿಯಾದ ನಿರ್ಧಾರ ಆಗಲಿದೆ ಎಂದು ಕೋಟ ಹೇಳಿದರು.

    ಕನ್ನಡ ಅನುಷ್ಠಾನ ಮುಖ್ಯ
    ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅದರಲ್ಲಿ ಎರಡು ಮಾತಿಲ್ಲ. ಇದನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು. ಕನ್ನಡದ ಸಾರ್ವಭೌಮತೆಗಾಗಿ ಬೀದಿಯಲ್ಲಿ ನಿಂತು ಕೂಗುವ ಪರಿಸ್ಥಿತಿ ಬರಬಾರದು. ಹಿಂಸಾಚಾರಕ್ಕೂ ಆಸ್ಪದ ನೀಡಬಾರದು ಎಂದು ವಿರೋಧ ಪಕ್ಷದ ನಾಯಕರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts