More

    ವಿದ್ಯಾಲಯದಲ್ಲಿ ಯುವಜನೋತ್ಸವ ಸಂಭ್ರಮ

    ಮಡಿಕೇರಿ: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಯುವಜನೋತ್ಸವ ಯುವ ಝೇಂಕಾರ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಲೋಗೋ ಬಿಡುಗಡೆಗೊಳಿಸಲಾಯಿತು.


    ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಿಮ ಸುತ್ತಿನ ಸಭೆಯ ನಂತರ ಕಾಲೇಜಿನ ಡೀನ್ ಡಾ.ಜಿ.ಎಂ.ದೇವಗಿರಿ ಮುಂದಾಳತ್ವದಲ್ಲಿ ಅಧ್ಯಾಪಕ ವರ್ಗ ಲೋಗೋವನ್ನು ಬಿಡುಗಡೆಗೊಳಿಸಿದರು.


    ಜ.18ರಿಂದ 20ರವರೆಗೆ 3 ದಿನಗಳವರೆಗೆ 9ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವವು ಅತ್ಯಂತ ಯಶಸ್ವಿಯಾಗಿ ಜರುಗಲು ಕಾಲೇಜಿನ ಡೀನ್ ಡಾ.ಜಿ.ಎಂ.ದೇವಗಿರಿ ಮುಂದಾಳತ್ವದಲ್ಲಿ ಸಕಲ ವ್ಯವಸ್ಥೆಗಳು ಬಿರುಸಿನಿಂದ ಸಾಗಿವೆ.


    5 ವರ್ಷಗಳಿಗೊಮ್ಮೆ ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿನ 6 ಮಹಾವಿದ್ಯಾಲಯಗಳ ಐನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದ.ಕೊಡಗಿನ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. 3 ದಿನಗಳವರೆಗೆ ವಿವಿಧ ಕಾರ್ಯಕ್ರಮಗಳು ಕಾಲೇಜಿನ ಆವರಣದಲ್ಲಿ ನಿರ್ಮಿಸಿರುವ ಸುಸಜ್ಜಿತವಾದ ವೇದಿಕೆಯಲ್ಲಿ ಮುಂಜಾನೆಯಿಂದ ಸಂಜೆಯವರೆಗೂ ಜರುಗಲಿದೆ.


    ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಸಹಯೋಗದಲ್ಲಿ 3 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಲಘುಸಂಗೀತ, ದೇಶಭಕ್ತಿಗೀತೆ, ಜಾನಪದದ ಸಮೂಹ ಗಾಯನ, ಸ್ಥಳದಲ್ಲಿಯೇ ಚಿತ್ರ ಬಿಡಿಸುವಿಕೆ, ವ್ಯಂಗ್ಯ ಚಿತ್ರ ರಚನೆ, ಏಕಾಂಕ ನಾಟಕ ಸೇರಿದಂತೆ ಎಲುಕ್ಯೂಷನ್, ಆಶುಭಾಷಣ ಸ್ಪರ್ಧೆ, ಚರ್ಚಾಸ್ಪರ್ಧೆ, ಏಕಾಪಾತ್ರಾಭಿನಯ, ಭಿತ್ತಿಚಿತ್ರ ರಚನೆ, ಲಘು ಪ್ರಹಸನ, ಜಾನಪದ ಸಮೂಹ ನೃತ್ಯ, ರಂಗೋಲಿ ಸ್ಪರ್ಧೆ, ಮಣ್ಣಿನಾಕೃತಿ ರಚನೆ, ತುಣುಕು ಚಿತ್ರ ರಚನೆ ಹಾಗೂ ಮೂಕ ಪಾತ್ರಾಭಿನಯಗಳು ವಿದ್ಯಾರ್ಥಿಗಳಿಂದ ಮೂಡಿಬರಲಿವೆ.

    ಜ.18ರಂದು ಬೆಳಗ್ಗೆ 8.30ಕ್ಕೆ ಸಾಂಸ್ಕೃತಿಕ ಮೆರವಣಿಗೆಯು ಪೊನ್ನಂಪೇಟೆ ಪಟ್ಟಣದ ಬಸವೇಶ್ವರ ದೇವಾಲಯದಿಂದ ಆರಂಭಗೊಳ್ಳಲಿದೆ. ರಾಮಕೃಷ್ಣ ಶಾರದಾಶ್ರಮದ ಪರಹಿತಾನಂದ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ವಿವಿಧ ಜಿಲ್ಲೆಯ ಮಹಾವಿದ್ಯಾಲಯದ ತಂಡಗಳು ಸಾಂಸ್ಕೃತಿಕ ಕಲೆ ಬಿಂಬಿಸುವ ಉಡುಪುಗಳನ್ನು ಧರಿಸಿ ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಮೆರವಣಿಗೆಯ ಮೂಲಕ ಸಾಗಿ ಕಾಲೇಜು ಆವರಣಕ್ಕೆ ಬರಲಿದೆ.

    ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಪ್ರಖ್ಯಾತ ಚುಟುಕು ಸಾಹಿತಿ ಎಚ್.ಡುಂಡಿರಾಜ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ.

    ಲೋಗೋ ಬಿಡುಗಡೆ ಸಂದರ್ಭ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ಎನ್.ಸತೀಶ್, ಡಾ.ಟಿ.ಎಸ್.ಹರೀಶ್, ಡಾ.ಬಿ.ಜಿ.ನಾಯಕ್, ಡಾ.ಟಿ.ಎಸ್.ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts