More

    ದ್ವಾದಶ ರಾಶಿಗಳ ವರ್ಷ ಭವಿಷ್ಯ: ಶ್ರೀ ಶುಭಕೃತದಿಂದ ಶ್ರೀ ಶೋಭಾಕೃತನಾಮ ಸಂವತ್ಸರದ ಯುಗಾದಿವರೆಗೆ

    ದ್ವಾದಶ ರಾಶಿಗಳ ವರ್ಷ ಭವಿಷ್ಯ: ಶ್ರೀ ಶುಭಕೃತದಿಂದ ಶ್ರೀ ಶೋಭಾಕೃತನಾಮ ಸಂವತ್ಸರದ ಯುಗಾದಿವರೆಗೆವೇ||ಬ್ರ|| ದೇವದತ್ತ ಶರ್ಮಾ ಗುರೂಜಿ

    ಸಂಪರ್ಕ: 80880 52190

     

     

    ಮೇಷ

    ಈ ವರ್ಷ ನಿಮ್ಮ ಪಾಲಿಗೆ ಸುಖ-ದುಃಖದ ಮಿಶ್ರ ಫಲದಾಯಕವಾಗಲಿದೆ. ಗುರುವಿನ ದುಷ್ಪಲವನ್ನು, ಲಾಭದ ಶನಿ ತಕ್ಕಮಟ್ಟಿಗೆ ತಡೆಹಿಡಿಯಬಹುದು. ವರ್ಷದ ಆರಂಭದಿಂದಲೇ ಅಪವಾದ ಭಯ ಕಾಡತೊಡಗುವುದು. ವಂಚನೆಯ ಅನುಭವ, ಮಾನಸಿಕ ರೋಗವೂ ಬಾಧಿಸಬಹುದು. ಕಬ್ಬಿಣ, ಲೋಹಗಳ ವ್ಯಾಪಾರದಲ್ಲಿ ಅಧಿಕ ಲಾಭ ನಿಮ್ಮದಾಗಲಿದೆ. ರೋಗಬಾಧೆಗಳಿಂದ ಪರಿಹಾರ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಚಿಂತೆ ಇರುತ್ತದೆ. ವರ್ಷದ ಅಂತ್ಯದಲ್ಲಿ ಸಾಂಸಾರಿಕ ಸುಖ ಅಷ್ಟಕಷ್ಟೆ. ಸ್ಕಂದನನ್ನು ಆರಾಧಿಸಿ. ಕುಲದೇವರನ್ನು ಸ್ಮರಿಸಿ.

    ಅದೃಷ್ಟ ಸಂಖ್ಯೆ: 1.3.4

    ವೃಷಭ

    ಈ ವರ್ಷದಲ್ಲಿ ಪ್ರಾಯಶಃ ನಿಮ್ಮಷ್ಟು ಸುಖಿಗಳು ಯಾರೂ ಇಲ್ಲ. ಲಾಭದ ಗುರು ಕರ್ಮದಲ್ಲಿ ಸೇರಿಕೊಂಡು ನಿಮ್ಮನ್ನು ಯಶಸ್ಸಿನ ಉತ್ತುಂಗಕ್ಕೆ ಒಯ್ಯುತ್ತಾರೆ. ವರ್ಷದ ಆರಂಭದಿಂದಲೇ ಆರ್ಥಿಕ ಲಾಭಗಳನ್ನು ನಿರೀಕ್ಷಿಸಬಹುದು. ಬ್ಯಾಂಕಿನ ವ್ಯವಹಾರದ ಸಂಘ-ಸಂಸ್ಥೆಗಳಿಂದ ವಿಶೇಷ ಸ್ಥಾನಮಾನ ಬರಲಿದೆ. ಸಾಲಬಾಧೆಯಿಂದ ಹೊರಬರಲಿದ್ದೀರಿ. ನ್ಯಾಯಾಲಯದ ವಿಚಾರದಲ್ಲಿ ಜಯ ಸಿಗಲಿದೆ. ವಾಹನ ಮತ್ತು ಹೈನುಗಾರಿಕೆಯಿಂದ ಉನ್ನತಿ. ಉದ್ಯೋಗದಲ್ಲಿ ಮುಂಬಡ್ತಿ. ಕೌಟುಂಬಿಕ ನೆಮ್ಮದಿ, ಸನ್ಮಾನ ಮುಂತಾದ ಸತ್ಪಲಗಳು ಹುಡುಕಿ ಬರಲಿದೆ. ಲಲಿತಾ ಪರಮೇಶ್ವರಿಯನ್ನು ಪೂಜಿಸಿ.

    ಅದೃಷ್ಟ ಸಂಖ್ಯೆ: 5, 6, 8

    ಮಿಥುನ

    ಕರ್ಮದ ಗುರು ಮತ್ತು ಭಾಗ್ಯದ ಶನಿ ಜೀವನದಲ್ಲಿ ಸಿಹಿ ಉಣಬಡಿಸಲಿದ್ದಾರೆ. ವರ್ಷದ ಆರಂಭದಲ್ಲಿ ಅವಿವಾಹಿತರಿಗೆ ವಿವಾಹಯೋಗ. ದೂರಪ್ರಯಾಣ ಮಾಡಬೇಕಾಗಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯಲಿದ್ದು, ತೀರ್ಥಯಾತ್ರೆ ಅನುಭವಕ್ಕೆ ಬರಲಿದೆ. ವಸ್ತ್ರಾಭರಣ ಖರೀದಿಸುವಿರಿ, ಏಕೆಂದರೆ ಮನೆಯಲ್ಲಿ ಶುಭಕಾರ್ಯಗಳು ಇರಲಿವೆ. ಧಾರ್ವಿುಕ ಸಿದ್ಧಿ, ಯೋಗಶಾಸ್ತ್ರಗಳಲ್ಲಿ ಪರಿಣಿತಿ, ಆಧ್ಯಾತ್ಮಿಕ ಪ್ರವೃತ್ತಿ ಜಾಸ್ತಿಯಾಗಲಿದೆ. ವರ್ಷದ ಆದಿಯಲ್ಲಿ ಸ್ನೇಹಿತ ವರ್ಗದಿಂದ ನಷ್ಟ, ಅನಾರೋಗ್ಯ ಸಮಸ್ಯೆಗಳು ಇರುವುದರಿಂದ ಎಚ್ಚರಿಕೆಯಿಂದ ಇರಿ. ಲಕ್ಷ್ಮೀನರಸಿಂಹನನ್ನು ಆರಾಧಿಸಿ.

    ಅದೃಷ್ಟ ಸಂಖ್ಯೆ: 3, 5, 6, 8

    ಕಟಕ

    ಈ ಸಂವತ್ಸರ ನಿಮಗೆ ಸಮ್ಮಿಶ್ರ ಫಲಗಳನ್ನು ನೀಡಲಿದೆ. ಅಷ್ಟಮ ಶನಿಯ ಪ್ರಭಾವದಿಂದ ಅಶುಭ ಫಲಗಳು ಜಾಸ್ತಿ. ದೇಹಾರೋಗ್ಯದ ಕುರಿತು ಎಚ್ಚರದಿಂದಿರಿ. ಹಣಕಾಸಿನ ಸಮಸ್ಯೆ, ಪ್ರಿಯರ ವಿಯೋಗ, ಉದ್ಯೋಗದಲ್ಲಿ ಹಿಂಬಡ್ತಿ, ಹಿತಶತ್ರುಗಳ ಕಾಟ ಮುಂತಾದ ಕೆಟ್ಟಫಲಗಳು ಅನುಭವಕ್ಕೆ ಬರಬಹುದು. ವರ್ಷದ ನಾಲ್ಕು ಮಾಸಗಳಲ್ಲಿ ಮಾತ್ರ ಇದ್ದುದರಲ್ಲಿ ಸಮಾಧಾನದ ವಾತಾವರಣವಿರುತ್ತದೆ. ಆದರೂ ಧೃತಿಗೆಡಬೇಕಾಗಿಲ್ಲ. ಗುರು ಗ್ರಹ ಆಶಾಕಿರಣವಾಗಿದೆ. ಹಿರಿಯರ ಆಶೀರ್ವಾದ, ಕುಲದೇವತೆಯ ಅನುಗ್ರಹ ಶ್ರೀರಕ್ಷೆಯಾಗಲಿದೆ. ಸಂಕಷ್ಟ ಗಣಪತಿಯನ್ನು ಆರಾಧಿಸಿ.

    ಅದೃಷ್ಟ ಸಂಖ್ಯೆ: 2, 3, 9

    ಸಿಂಹ

    ಏಳರ ಶನಿ, ಎಂಟರ ಗುರು ಸೇರಿಕೊಂಡು ಜೀವನವನ್ನು ಜಂಜಾಟದ ಗೂಡಾಗಿಸಲಿದ್ದಾರೆ. ಮಕ್ಕಳಿಂದ ಚಿಂತೆ, ಬುದ್ಧಿಚಾಂಚಲ್ಯ, ಮೋಸ ಹೋಗುವ ಭಯ, ಉದರವ್ಯಾಧಿ ಬಾಧಿಸಲಿದೆ. ವರ್ಷದ ನಾಲ್ಕು ಮಾಸಗಳಲ್ಲಿ ಸಾಂಸಾರಿಕ ವಾತಾವರಣ ಚೆನ್ನಾಗಿರುವುದಿಲ್ಲ. ಆಸ್ತಿ ಕೈತಪ್ಪುವ ಭೀತಿಯೂ ಇದೆ. ಭಯ ಬೇಡ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ರಾತ್ರಿ ಮುಗಿದ ನಂತರ ಹಗಲು ಬರಲೇಬೇಕು, ಬರುತ್ತದೆ. ಸದ್ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ ಕಷ್ಟಗಳ ಪ್ರಮಾಣ ವರ್ಷಾಂತ್ಯದಲ್ಲಿ ಕಡಿಮೆಯಾಗುತ್ತದೆ. ಉಮಾಮಹೇಶ್ವರರನ್ನು ಆರಾಧಿಸಿ.

    ಅದೃಷ್ಟ ಸಂಖ್ಯೆ: 1, 3, 5, 9

    ಕನ್ಯಾ

    ಈ ವರ್ಷದಲ್ಲಿ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ವರ್ಷದ ಆರಂಭದಲ್ಲಿ ಪಂಚಮಶನಿ ಬಿಡುಗಡೆಯಾಗುವುದರಿಂದ ವರ್ಷದ ಮಧ್ಯದಲ್ಲಿ ಹಲವು ಯಶಸ್ಸು ಸಿಗಲಿದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಆಸ್ತಿ ಪ್ರಾಪ್ತಿ, ವಿದೇಶ ಪ್ರಯಾಣಯೋಗ, ಗೃಹನಿರ್ವಣ ಯೋಗ, ಭೂಲಾಭ, ಮಾನಸಿಕ ನೆಮ್ಮದಿ, ಮುಂತಾದ ಒಳ್ಳೆಯ ಫಲಗಳು ಕಾದಿವೆ. ವರ್ಷಾಂತ್ಯದಲ್ಲಿ ಮಾನಸಿಕ ಕಿರಿಕಿರಿ, ಸಂಚಾರ, ಅಪವ್ಯಯ, ಅಪಘಾತ, ಹೀಗೆ ಕೆಟ್ಟ ಫಲಗಳಿವೆ. ಸುಖ-ದುಃಖ ಎರಡೂ ಇರುವ ವರ್ಷವಿದು. ದುರ್ಗಾಪರಮೇಶ್ವರಿಯನ್ನು ಆರಾಧಿಸಿ.

    ಅದೃಷ್ಟ ಸಂಖ್ಯೆ: 3, 5, 6, 8

    ತುಲಾ

    ಪಂಚಮ ಶನಿ, ಆರರ ಗುರು ವ್ಯತಿರಿಕ್ತ ಫಲ ಕೊಡುತ್ತಾರೆ. ದಾಯಾದಿ ಕಲಹ, ಆಂತರಿಕ ಶತ್ರುಪೀಡನೆ, ಕಾರ್ಯಗಳಲ್ಲಿ ಅಪಜಯ, ಮಾನಹಾನಿ ಪ್ರಸಂಗದಂಥ ಅನರ್ಥಗಳು ಘಟಿಸಬಹುದು. ಅವಮಾನ, ಅಪವಾದಗಳು, ಉದ್ಯೋಗಗಳಲ್ಲಿ ಹಿಂಬಡ್ತಿ, ಮುಂತಾದ ಕೆಟ್ಟ ಫಲಗಳೂ ಎದುರಾಗಬಹುದು. ಮನಸ್ಸಾಕ್ಷಿಗೆ ತಕ್ಕಂತೆ ನಡೆಯಿರಲಿ. ಆರ್ಥಿಕ ಮುಗ್ಗಟ್ಟು ಏನೇ ಇದ್ದರೂ ಆರ್ಥಿಕವಾಗಿ ಸುಸ್ಥಿತಿ ಇರುತ್ತದೆ. ಗುರುಹಿರಿಯರ ಆಶೀರ್ವಾದ ಮತ್ತು ಕುಲದೇವತಾ ಅನುಗ್ರಹದಿಂದ ವರ್ಷದ ಅಂತ್ಯದಲ್ಲಿ ನೆಮ್ಮದಿ ಸಿಗಲಿದೆ. ಆಂಜನೇಯನನ್ನು ಆರಾಧಿಸಿ.

    ಅದೃಷ್ಟ ಸಂಖ್ಯೆ: 5, 6, 8

    ವೃಶ್ಚಿಕ

    ಈ ಸಂವತ್ಸರ ನಿಮಗೆ ಆಶಾದಾಯಕವಾಗಿದೆ. ಪಂಚಮದ ಗುರುವಿನ ಪ್ರಭಾವದಿಂದ ವಿಜಯಲಕ್ಷ್ಮಿ ಒಲಿಯುತ್ತಾಳೆ. ಮಕ್ಕಳಿಲ್ಲ ಎಂಬ ಕೊರಗು ಬಾಧಿಸುತ್ತಿದ್ದರೆ ಅದು ಈ ವರ್ಷ ದೂರವಾಗಿ ಸಂತಾನಭಾಗ್ಯ ಫಲಿಸೀತು. ಬಂಧುಗಳಿಂದ ಸಹಾಯ ದೊರೆಯಲಿದೆ. ಸನ್ಮಾನ, ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮುಂತಾದ ಯೋಗಗಳು ಈ ಸಂವತ್ಸರದಲ್ಲಿ ನಿಮ್ಮನ್ನು ನೆಮ್ಮದಿಯಲ್ಲಿ ಇಡಲಿವೆ. ತಾಯಿಯ ಆರೋಗ್ಯ ವಿಚಾರದಲ್ಲಿ ಹಾಗೂ ಭೂ ಸಂಬಂಧಿ ವಿಚಾರದಲ್ಲಿ ಕಿರಿಕಿರಿ ಇರಲಿದೆ. ಬಾಲಾ ತ್ರಿಪುರಸುಂದರಿಯನ್ನು ಭಕ್ತಿಯಿಂದ ಆರಾಧಿಸಿ. ಆಕೆ ಕಾಪಾಡುತ್ತಾಳೆ.

    ಅದೃಷ್ಟ ಸಂಖ್ಯೆ: 1, 2, 3, 9

    ಧನು

    ಸಾಡೇಸಾತಿ ಶನಿ ವಿದಾಯ ಹೇಳುವ ಸಂತಸದ ಸಮಯವಿದು. ಸುಖದ ಗುರು ಸಂತಸವನ್ನು ದುಪ್ಪಟ್ಟು ಮಾಡುತ್ತಾನೆ. ಈ ಸಂವತ್ಸರದಲ್ಲಿ ನಿಮಗೆ ಮಾನಸಿಕ ನೆಮ್ಮದಿ, ನಿವೇಶನ ಖರೀದಿ, ಕೃಷಿಯಲ್ಲಿ ಉನ್ನತಿ, ಬಂಧು ಬಾಂಧವರಿಂದ ಸಹಾಯ, ವಾಹನ ಖರೀದಿ ಯೋಗ, ನಿರಂತರವಾದ ಧಾರ್ವಿುಕ ಕಾರ್ಯಗಳು ಸಾಧ್ಯವಾಗುತ್ತವೆೆ. ಶತ್ರುಗಳು ಮಿತ್ರರಾಗುತ್ತಾರೆ. ಆದರೂ ಕೆಲವು ಹೇಳಲಾಗದ ಚಿಂತೆ ಕಾಡುವ ಸಂಭವ ಜಾಸ್ತಿ ಇದ್ದು, ಇಕ್ಕಟ್ಟಿನ ಸನ್ನಿವೇಶ ಎದುರಿಸ ಬೇಕಾದೀತು. ದತ್ತಾತ್ರೇಯನನ್ನು ಆರಾಧಿಸಿ. ಆತ ದಾರಿ ತೋರುತ್ತಾನೆ.

    ಅದೃಷ್ಟ ಸಂಖ್ಯೆ: 1, 3, 8, 9

    ಮಕರ

    ಸಾಡೇಸಾತಿ ಶನಿ ಹಾಗೂ ತೃತೀಯದ ಗುರು ಸೇರಿಕೊಂಡು ಪ್ರತಿ ಕಾರ್ಯದಲ್ಲಿ ತಡೆ ತಂದೊಡ್ಡಬಹುದು. ಪಿತ್ರಾರ್ಜಿತ ಆಸ್ತಿಪಾಸ್ತಿಯ ಸಂಪತ್ತುಗಳು ಕೈತಪ್ಪುವ ಸಾಧ್ಯತೆ ಇದೆ. ನಿಮ್ಮ ಮಾತೇ ನಿಮಗೆ ಶತ್ರುವಾಗಬಹುದು. ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ ಬರಲಿದೆ. ಕುಟುಂಬದ ಸಮಸ್ಯೆಯೂ ಹೆಚ್ಚಾಗಬಹುದು. ವ್ಯಾಪಾರ ವ್ಯವಹಾರಸ್ಥರಿಗೆ ನಷ್ಟ ಸಂಭವಿಸಬಹುದು. ಅವಮಾನಗಳು ನೆರಳಿನಂತೆ ಹಿಂಬಾಲಿಸುತ್ತವೆ. ಶನೈಶ್ಚರನನ್ನು ಆರಾಧಿಸಿ. ಪರಿಹಾರದ ಮಾರ್ಗ ತೋರಿಸುತ್ತಾನೆ.

    ಅದೃಷ್ಟ ಸಂಖ್ಯೆ: 5, 6, 8, 4

    ಕುಂಭ

    ಈ ವರ್ಷ ನಿಮಗೆ ಸುಖ-ದುಃಖ, ಲಾಭ-ನಷ್ಟ ಹೀಗೆ ಮಿಶ್ರಫಲದಾಯಕವಾಗಲಿದೆ. ಜನ್ಮಕ್ಕೆ ಬರುವ ಶನಿಯ ಕಷ್ಟ ಫಲಗಳನ್ನು ದ್ವಿತೀಯದ ಗುರು ತಕ್ಕಮಟ್ಟಿಗೆ ಪರಿಹರಿಸುತ್ತಾನೆ. ವರ್ಷಾರಂಭದಿಂದಲೇ ಹೊಸ ಕಾರ್ಯಗಳಲ್ಲಿ ಅಪಜಯ, ರೋಗ, ಅಪವಾದ, ಸ್ಥಾನಪಲ್ಲಟ… ಹೀಗೆ ಹತ್ತಾರು ಸಮಸ್ಯೆಗಳು. ದೃಷ್ಟಿ ಸಂಬಂಧವಾದ ತೊಂದರೆ, ಅತಿಯಾದ ಕೋಪ ಮೊದಲಾದ ಕಷ್ಟಫಲಗಳು ಅನುಭವಕ್ಕೆ ಬಂದರೂ, ದ್ವಿತೀಯದ ಗುರುವಿನ ಮಹಿಮೆಯಿಂದ ಸಾಂಪತ್ತಿಕ ಆಗಮನ, ಕುಟುಂಬದವರ ಸಹಕಾರ, ಪಿತ್ರಾರ್ಜಿತ ಆಸ್ತಿಪಾಸ್ತಿಗಳ ಲಾಭ ಪ್ರಾಪ್ತಿಯಾಗಲಿವೆ. ಆಂಜನೇಯನನ್ನು ಸ್ಮರಿಸಿ.

    ಅದೃಷ್ಟ ಸಂಖ್ಯೆ: 4, 5, 6, 8

    ಮೀನ

    ಈ ವರ್ಷ ಮಿಶ್ರಫಲದಾಯಕವಾಗಿದ್ದರೂ ನೂತನವಾಗಿ ಆರಂಭವಾಗುವ ಸಾಡೇಸಾತಿ ಶನಿಯು ಹೊಸ ಸಮಸ್ಯೆಗಳನ್ನು ತಂದೊಡ್ಡಲಿದ್ದಾನೆ. ಆದರೆ ಜನ್ಮದ ಗುರು ಬಲಿಷ್ಠನಾಗಿರುವುದರಿಂದ ಆತನ ಮಹಿಮೆ ಸ್ವಲ್ಪಮಟ್ಟಿನ ನೆಮ್ಮದಿ ಕೊಡಬಲ್ಲದು. ಹಣಕಾಸಿನ ಸಮಸ್ಯೆ ತಲೆದೋರಲಿದೆ. ಸ್ಥಾನಪಲ್ಲಟ ಯೋಗವಿದ್ದರೂ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವ್ಯಾಪಾರಸ್ಥರಿಗೆ ನಷ್ಟ, ಅಪವಾದ, ಅವಮಾನ ಮೊದಲಾದ ಕೆಟ್ಟಫಲ ಕಾಣಿಸಬಹುದು. ಗುರುಹಿರಿಯರ ಆಶೀರ್ವಾದ-ಕುಲದೇವತಾನುಗ್ರಹದಿಂದ ಆದಾಯಕ್ಕೆ ಕೊರತೆ ಇರುವುದಿಲ್ಲ. ಶನೇಶ್ಚರನನ್ನು ಮಹಾದೇವನನ್ನು ಆರಾಧಿಸಿ.

    ಅದೃಷ್ಟ ಸಂಖ್ಯೆ: 1, 3, 8, 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts