More

    ಸಂಕಷ್ಟದಲ್ಲಿರುವವರ ನೆರವಿಗೆ ಬರಲಿದೆ ಯುವಕರ ತಂಡ

    ಉಳ್ಳಾಲ: ಜಾತಿ, ಧರ್ಮದ ಹಂಗಿಲ್ಲದೆ ಮಾನವೀಯತೆಯಿಂದ ಕರೊನಾ ಸಂಕಷ್ಟದಲ್ಲಿ ಊರವರಿಗೆ ಧೈರ್ಯ ತುಂಬಲು ಸ್ಥಳೀಯ ಜಮಾಅತ್ ಮುಂದಾಗಿದೆ.

    ಕೋವಿಡ್ -19 ನಿಯಂತ್ರಣದ ಕಾರ್ಯನಿರ್ವಹಣೆಯಲ್ಲಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವ ಬಾಳೆಪುಣಿ ಗ್ರಾಮದ ಸಾಧನೆಯಲ್ಲಿ ನಡುಪದವು ಜಮಾಅತ್‌ನ ಪಾತ್ರವೂ ಇದೆ. ಇಲ್ಲಿರುವ ಅಲ್-ಮುಬಾರಕ್ ಜುಮಾ ಮಸೀದಿ ಸ್ಥಳೀಯರಿಗೆ ಅಗತ್ಯ ನೆರವು ನೀಡುತ್ತಿದೆ. ‘ಆರೋಗ್ಯ, ಆಹಾರ, ಶಿಕ್ಷಣ’ ಧ್ಯೇಯದಡಿ ಮಸೀದಿ ಆಡಳಿತ ಸಮಿತಿ ಅಧೀನದಲ್ಲಿ 30 ಯುವಕರ ತಂಡ ರಚಿಸಲಾಗಿದ್ದು, ಮಸೀದಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಪ್ರಧಾನರು. ‘ನಡುಪದವು ಹೆಲ್ಪ್ ಸರ್ವೀಸ್’ ಹೆಸರಲ್ಲಿ ತಂಡ ಅಸ್ತಿತ್ವಕ್ಕೆ ಬಂದಿದ್ದು, ಊರಿನಲ್ಲಿರುವ ಎಲ್ಲ ಮನೆಗಳ ಜವಾಬ್ದಾರಿ ಒಬ್ಬೊಬ್ಬ ಸದಸ್ಯರಿಗೆ ನೀಡಲಾಗಿದೆ. ಮನೆಗಳ ಮೇಲೆ ನಿಗಾ ಇಡುವ ಉಸ್ತುವಾರಿಗಳು, ಆರೋಗ್ಯ, ಆಹಾರ, ಶೈಕ್ಷಣಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಿದ್ದಾರೆ. ಜಮಾಅತ್‌ನ ನೋಂದಾಯಿತ 140 ಮುಸ್ಲಿಮ್ ಮನೆಗಳ ಸಹಿತ ಎಲ್ಲ ಧರ್ಮೀಯರ ಮನೆಗಳಿಗೂ ಸೇವೆ ವಿಸ್ತರಿಸಲಾಗಿದೆ.

    ಯಾವುದೇ ಮನೆಯಲ್ಲಿ ಸಮಸ್ಯೆ ಇದ್ದರೆ, ಉಸ್ತುವಾರಿ ಹೊಂದಿರುವವರು ಕೋಶಾಧಿಕಾರಿಯನ್ನು ಸಂಪರ್ಕಿಸಿ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಬೇಕು. ಕಿಟ್ ವಿಚಾರ ಮನೆಮಂದಿ, ಉಸ್ತುವಾರಿಗೆ ಹೊರತುಪಡಿಸಿ ಮೂರನೇ ವ್ಯಕ್ತಿಗೆ ತಿಳಿಸುವಂತಿಲ್ಲ.

    ಉಚಿತ ವಾಹನ ವ್ಯವಸ್ಥೆ: ಜ್ವರ, ಇತರ ಆರೋಗ್ಯ ಸಮಸ್ಯೆ ಕಾಡಿದರೆ ಕರೆದೊಯ್ಯಲು ಆರು ವಾಹನಗಳು, ಚಾಲಕರ ತಂಡ ರಚಿಸಲಾಗಿದೆ. ಆರೋಗ್ಯ ಸಮಸ್ಯೆ ಕಾಡಿದರೆ ಉಸ್ತುವಾರಿಗಳು ವಾಹನ ಚಾಲಕರಿಗೆ ಮಾಹಿತಿ ನೀಡಿದರೆ ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜಿಗೆ ಹೋಗಬೇಕೆಂದರೂ ಉಚಿತ ವಾಹನ ಸೇವೆ ಸಿಗಲಿದೆ.

    ಮದರಸಾದಲ್ಲಿ ಕ್ವಾರಂಟೈನ್: ಕರೊನಾ ಸೋಂಕು ಅಥವಾ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಮಸೀದಿ ಆವರಣದಲ್ಲಿರುವ ಮದರಸಾದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಅಗತ್ಯ ಚಿಕಿತ್ಸೆಯನ್ನು ಊರಿನಲ್ಲೇ ಇರುವ ನರ್ಸಿಂಗ್, ಪ್ಯಾರಾಮೆಡಿಕಲ್ ಕಲಿತವರು ನೋಡಿಕೊಳ್ಳಲಿದ್ದಾರೆ. ಆಹಾರ ಹಾಗೂ ಇತರ ವ್ಯವಸ್ಥೆಯನ್ನು ಜಮಾಅತ್ ಸಮಿತಿ ನೋಡಿಕೊಳ್ಳಲಿದೆ. ಈ ಎಲ್ಲ ಸೇವೆಗಳು ಉಚಿತ.

    ಲಾಕ್‌ಡೌನ್ ಸಂದರ್ಭ ಸಂಕಷ್ಟದಲ್ಲಿರುವ ಜನರಿಗೆ ಧೈರ್ಯ ತುಂಬುವುದು ಜಮಾಅತ್‌ನ ಉದ್ದೇಶ. ಇದಕ್ಕಾಗಿ ಮೂರು ಧ್ಯೇಯಗಳೊಂದಿಗೆ ಉಚಿತ ಸೇವೆ ಆರಂಭಿಸಲಾಗಿದೆ. ಇಂಥ ಕ್ರಮ ಎಲ್ಲ ಜಮಾಅತ್‌ಗಳಲ್ಲಿ ಕೈಗೊಂಡರೆ ಕರೊನಾ ನಿಯಂತ್ರಣ ಸುಲಭ.

    ನಾಸಿರ್ ನಡುಪದವು (ಪಟ ಇದೆ)
    ಅಧ್ಯಕ್ಷ, ಅಲ್-ಮುಬಾರಕ್ ಜುಮಾ ಮಸೀದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts