More

    ಹಾನಗಲ್ಲದಲ್ಲಿ ಗ್ಯಾಂಗ್ ರೇಪ್ ಪ್ರಕರಣ, ಸಂತ್ರಸ್ತೆಗೆ ಸರ್ಕಾರ ಹೇಳಿಲ್ಲ ಸಾಂತ್ವನ

    ಹಾನಗಲ್ಲ: ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ, ನೈತಿಕ ಪೊಲೀಸ್​ಗಿರಿ ಪ್ರಕರಣ ನಡೆದು 5 ದಿನ ಕಳೆದಿವೆ. ಆದರೆ, ಈವರೆಗೆ ರಾಜ್ಯ ಮಹಿಳಾ ಆಯೋಗದವರು ಸೇರಿದಂತೆ ಸಂತ್ರಸ್ತೆಯನ್ನು ಯಾರೂ ಭೇಟಿ ಮಾಡಿ ಆರೋಗ್ಯ ವಿಚಾರಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

    ಶಿರಸಿ ಮೂಲದ ಅನ್ಯ ಕೋಮಿನ ಮಹಿಳೆ ಹಾನಗಲ್ಲ ಸಮೀಪದ ವಸತಿ ಗೃಹಕ್ಕೆ ಬೇರೆ ಸಮುದಾಯದ ವ್ಯಕ್ತಿಯೊಂದಿಗೆ ತೆರಳಿದ್ದಳು. ಆಟೋ ಚಾಲಕನೊಬ್ಬನಿಂದ ಈ ಮಾಹಿತಿ ಪಡೆದ ಯುವಕರ ಗುಂಪು ವಸತಿ ಗೃಹದ ಕೊಠಡಿಗೆ ನುಗ್ಗಿ ಅವರಿಬ್ಬರನ್ನು ಥಳಿಸಿ, ನಂತರ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತೆ ನನ್ನ ಮೇಲೆ ಗ್ಯಾಂಗ್​ರೇಪ್ ನಡೆದಿದೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಳು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ನ್ಯಾಯಾಧೀಶರೆದುರು ಆಕೆಯನ್ನು ಪೊಲೀಸರು ಹಾಜರುಪಡಿಸಿ, ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಸಿದ್ದರು. ನಂತರವಷ್ಟೆ ಗ್ಯಾಂಗ್ ರೇಪ್ ಪ್ರಕರಣ ದಾಖಲಾಯಿತು.

    ಮರೆತುಹೋದ ಮಾನವೀಯತೆ:

    ಇಂಥ ಅಮಾನವೀಯ ಘಟನೆ ಅಲ್ಪಸಂಖ್ಯಾತ ಯುವಕರ ಗ್ಯಾಂಗ್​ನಿಂದ ನಡೆದಿದ್ದರೂ ಕ್ಷೇತ್ರದ ಶಾಸಕ, ಸಂಸದ, ಸಚಿವರು, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು, ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು… ಹೀಗೆ ಜವಾಬ್ದಾರಿ ಸ್ಥಾನದಲ್ಲಿರುವ ಯಾರೊಬ್ಬರೂ ಶನಿವಾರ ಸಂಜೆವರೆಗೆ ಆಕೆಯನ್ನು ಸೌಜನ್ಯಕ್ಕೂ ಭೇಟಿ ಮಾಡಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

    ದೆಹಲಿ, ಉತ್ತರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಇಂಥ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆದ ಸಂದರ್ಭದಲ್ಲಿ ಸರ್ಕಾರಗಳು ಸಂತ್ರಸ್ತೆಯ ಬೆನ್ನಿಗೆ ನಿಂತಿದ್ದವು. ಆದರೆ, ಇಲ್ಲಿನ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಮರೆತಿರುವುದು ಎದ್ದುಕಾಣುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಘಟನೆ ಕುರಿತು ಈವರೆಗೂ ಮಾತನಾಡಿದ ಮಾಹಿತಿಯೂ ಇಲ್ಲ.

    ಹರಿದಾಡುತ್ತಿರುವ ವಿಡಿಯೋ:

    ಹಾನಗಲ್ಲ ತಾಲೂಕಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೈತಿಕ ಪೊಲೀಸ್​ಗಿರಿಗೆ ಸಂಬಂಧಿಸಿದ ಮತ್ತೆರಡು ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅನ್ಯಕೋಮಿನ ವಿದ್ಯಾರ್ಥಿನಿ ಬಸ್​ನಲ್ಲಿ ಪ್ರಯಾಣಿಸುವುದಾಗ ಪಕ್ಕದ ಸೀಟಿನಲ್ಲಿ ಬಹುಸಂಖ್ಯಾತ ಸಮುದಾಯದ ವಿದ್ಯಾರ್ಥಿ ಕುಳಿತಿದ್ದ. ಅದಕ್ಕಾಗಿ ಆ ವಿದ್ಯಾರ್ಥಿನಿಗೆ ಯುವಕರು ಇಲ್ಲಸಲ್ಲದ ಪ್ರಶ್ನೆ ಕೇಳಿ ಪೀಡಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ. ನಿಮ್ಮ ಪಾಲಕರ ಮೊಬೈಲ್ ಸಂಖ್ಯೆ ಕೊಡು, ಮಾತನಾಡುತ್ತೇವೆ. ಯಾರೊಂದಿಗೆ ಹೋಗಿದ್ದೆ? ಎಂದು ಬೆದರಿಸುವ ಮಾತುಗಳು ವಿಡಿಯೋದಲ್ಲಿವೆ.

    ಇನ್ನೊಂದು ವಿಡಿಯೋದಲ್ಲಿ ಅನ್ಯಕೋಮಿನ ಮಹಿಳೆ ಓರ್ವ ವ್ಯಕ್ತಿಯೊಂದಿಗೆ ಹೊಲದಲ್ಲಿ ಏಕಾಂತವಾಗಿದ್ದ ಸಂದರ್ಭದಲ್ಲಿ ಅವರಿಬ್ಬರ ಮೇಲೆ ನೈತಿಕ ಪೊಲೀಸ್​ಗಿರಿ ಮೆರೆದು ಹಲ್ಲೆ ನಡೆಸಿದ ದೃಶ್ಯವಿದೆ. ಇಂಥ ಘಟನೆಗಳು ಈ ಮೊದಲು ನಡೆದಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ವಿಕೃತ ಮನಸಿನವರು ತಾವು ಮಾಡಿದ್ದೆಲ್ಲ ನಡೆಯುತ್ತದೆ ಎಂದು ಭಾವಿಸಿದ್ದರಿಂದ ಘೊರ ದುರಂತ ಸಂಭವಿಸಿತು ಎಂಬ ಮಾತು ಕೇಳಿಬರುತ್ತಿದೆ.

    ಪ್ರತಿಪಕ್ಷ ಬಿಜೆಪಿಯವರು ಸಹ ಮೊದಲು ಸುಮ್ಮನಿದ್ದರು. ನಾಲ್ಕು ದಿನಗಳ ನಂತರ, ಶನಿವಾರ ಸಂತ್ರಸ್ತೆಯನ್ನು ಭೇಟಿಯಾಗಿ ಸಾಂತ್ವನ ಹೇಳಿ, ನ್ಯಾಯಕ್ಕಾಗಿ ಹೋರಾಟ ಮಾಡಲು ಬೆಂಬಲ ನೀಡುವುದಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts