More

    ಯುವಜನತೆ ಸ್ವಯಂ ಉದ್ಯೋಗದತ್ತ ಹೆಚ್ಚು ಆಸಕ್ತಿ ವಹಿಸಿ

    ಸಾಗರ: ಸರ್ಕಾರದ ಯೋಜನೆಗಳನ್ನು ಯುವಜನರು ಸದುಪಯೋಗ ಪಡಿಸಿಕೊಂಡು, ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

    ನಗರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಕೈಗಾರಿಕೆ, ಜಿಲ್ಲಾ ಪಂಚಾಯಿತಿ ಏರ್ಪಡಿಸಿದ್ದ ಉದ್ಯಮಶೀಲತಾ ಜಾಗೃತಿ ಶಿಬಿರ ಹಾಗೂ ಸುಧಾರಿತ ಉಪಕರಣಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಡವರ, ಜನಪರ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು.
    ಇದೀಗ ಟೈಲರ್‌ಗಳಿಗೆ ಬಹು ಬೇಡಿಕೆ ಇದೆ. ವಿವಿಧ ಮಾದರಿಯಲ್ಲಿ ವಿನ್ಯಾಸ ಮಾಡಿದ ಎಂಬ್ರಾಯಿಡರಿ ಕುಪ್ಪಸಕ್ಕೆ 1500 ರೂ. ನಿಂದ 5000 ರೂ.ವರೆಗೂ ತೆಗೆದುಕೊಳ್ಳಲಾಗುತ್ತದೆ. 45 ದಿನ ತರಬೇತಿ ಪಡೆದ ನಂತರ ಸ್ವಾವಲಂಬಿಯಾಗಿಯೂ ಜೀವನ ಸಾಗಿಸಬಹುದು. ಇಲ್ಲವೇ ಸಾಗರ, ಶಿವಮೊಗ್ಗ, ಬೆಂಗಳೂರುಗಳಲ್ಲಿರುವ ಗಾರ್ಮೆಂಟ್ಸ್‌ಗಳಲ್ಲಿ ಹೊಲಿಗೆ ಕಲಿತವರಿಗೆ ಬೇಡಿಕೆ ಇದೆ. ಅದನ್ನು ಬಳಸಿಕೊಳ್ಳಿ ಎಂದು ಹೇಳಿದರು.
    ಕೈಗಾರಿಕಾ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಕರಪತ್ರದ ಮೂಲಕ ಮಾಹಿತಿ ಕೊಡಿ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ 44 ಸಾವಿರ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಸಿಗುತ್ತಿದೆ. ಕೆಲವರಿಗೆ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಇದಕ್ಕಾಗಿ ವಿಶೇಷ ಶಿಬಿರ ಆಯೋಜಿಸಲಾಗಿದೆ. ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಉಚಿತ ವಿದ್ಯುತ್, ಪಡಿತರ ನೀಡಲಾಗಿದೆ. ರಾಜ್ಯ ಸರ್ಕಾರ ಒಂದು ಕುಟುಂಬಕ್ಕೆ ತಿಂಗಳಿಗೆ 4-5 ಸಾವಿರ ರೂ. ಆದಾಯ ಬರುವಂತೆ ಯೋಜನೆ ರೂಪಿಸಿದೆ. ಯುವನಿಧಿ ಯೋಜನೆ ಆರಂಭಗೊಂಡಿದ್ದು, ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
    ನಗರಸಭೆ ಸದಸ್ಯೆ ಲಲಿತಮ್ಮ ಮಾತನಾಡಿ, ಎಲ್ಲ ವೃತ್ತಿಯವರಿಗೂ ಕಷ್ಟ-ಸುಖ ಬರುತ್ತದೆ. ನಮ್ಮ ಜೀವನದ ಬಗ್ಗೆ ಎಚ್ಚರದ ಹೆಜ್ಜೆಯನ್ನಿಡಬೇಕು. ಸುಧಾರಣಾ ತರಬೇತಿ ಪಡೆದುಕೊಂಡು ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಬಡವರ ಪರ ಎಂಬುದನ್ನು ಸಾಬೀತು ಮಾಡಿದೆ. ಎಲ್ಲರಿಗೂ ಸರ್ಕಾರ ಕೆಲಸ ಕೊಡಲು ಸಾಧ್ಯವಿಲ್ಲ. ತರಬೇತಿ ಪಡೆದುಕೊಂಡವರು ಸ್ವಯಂ ಉದ್ಯೋಗ ಮಾಡಬೇಕು ಆಗ ಮಾತ್ರ ದೇಶದ ಆರ್ಥಿಕ ಸಬಲೀಕರಣ ಸಾಧ್ಯ ಎಂದರು.
    ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ, ಗಾರೆ, ಬಡಗಿ, ಕಾರ್ಪೆಂಟರ್ ಕೆಲಸ ಮಾಡುವವರಿಗೆ ಕಿಟ್ ವಿತರಿಸಲಾಯಿತು.
    ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ ಕುಮಾರ್, ಪ್ರಮುಖರಾದ ನಾಗರಾಜ, ನಿರ್ಮಲಾ, ಪ್ರಸನ್ನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts