More

    ಸ್ವ ಉದ್ಯೋಗದತ್ತ ಯುವಕರು

    ಗೋಪಾಲಕೃಷ್ಣ ಪಾದೂರು, ಉಡುಪಿ

    ಸ್ವ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕರಾವಳಿಯಲ್ಲಿ ಹೆಚ್ಚಾಗುತ್ತಿದೆ. ಪ್ರಧಾನಮಂತ್ರಿ ಉದ್ಯೊಗ ಸೃಜನ ಯೋಜನೆ (ಪಿಎಂಇಜಿಪಿ) ಮೂಲಕ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಈ ವರ್ಷ 668 ಮಂದಿ ಸ್ವಂತ ಉದ್ಯಮಗಳನ್ನು ಸ್ಥಾಪಿಸಿದ್ದಾರೆ.

    ಪಿಎಂಇಜಿಪಿ ಮೂಲಕ ಉಡುಪಿ ಜಿಲ್ಲೆಯಲ್ಲಿ 2018-2019 ಸಾಲಿನಲ್ಲಿ 92 ಮಂದಿ, 2019-20ನೇ ಸಾಲಿನಲ್ಲಿ 170 ಮಂದಿ, 2020-21ನೇ ಸಾಲಿನಲ್ಲಿ 251 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷ 48 ಆಹಾರೋತ್ಪನ್ನ ಘಟಕ, 12 ವೆಲ್ಡಿಂಗ್ ಶಾಪ್, 2 ಜುವೆಲ್ಲರಿ ಘಟಕ, 4 ಕಾಗದ ಉತ್ಪನ್ನ ಘಟಕ, 2 ಪ್ರಿಂಟಿಂಗ್ ಪ್ರೆಸ್, 12 ದುರಸ್ತಿ ಮತ್ತು ಸೇವಾ ಘಟಕ, 40 ರಿಡಿಮೇಡ್ ಗಾರ್ಮೆಂಟ್ ಅಂಗಡಿ, 18 ಪೀಠೋಪಕರಣ ಅಂಗಡಿ, 13 ಸೇವಾ ವಲಯದ ಉದ್ಯಮಗಳನ್ನು ಆರಂಭಿಸಲಾಗಿದೆ.

    ದ.ಕ.ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ 236 ಮಂದಿ, 19-20ನೇ ಸಾಲಿನಲ್ಲಿ 367 ಮಂದಿ, 20-21 ಸಾಲಿನಲ್ಲಿ 417 ಮಂದಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ವರ್ಷ 103 ಆಹಾರೋತ್ಪನ್ನ ಘಟಕ, 36 ವೆಲ್ಡಿಂಗ್ ಶಾಪ್, 6 ಜುವೆಲ್ಲರಿ ಘಟಕ, 9 ಕಾಗದ ಉತ್ಪನ್ನ ಘಟಕ, 4 ಪ್ರಿಂಟಿಂಗ್ ಪ್ರೆಸ್, 20 ದುರಸ್ತಿ ಮತ್ತು ಸೇವಾ ಘಟಕ, 90 ರಿಡಿಮೇಡ್ ಗಾರ್ಮೆಂಟ್ ಅಂಗಡಿ, 21 ಪೀಠೋಪಕರಣ ಅಂಗಡಿ, 128 ಸೇವಾ ಚಟುವಟಿಕೆಗಳಿಗೆ ಸಹಾಯಧನ ಮಂಜೂರಾಗಿದೆ.

    10ರಿಂದ 25 ಲಕ್ಷ ರೂ. ಸಾಲ: ಪಿಎಂಇಜಿಪಿ ಯೋಜನೆ ಮೂಲಕ ಸೇವಾ ಚಟುವಟಿಕೆಗಳಿಗೆ ಗರಿಷ್ಠ 10 ಲಕ್ಷ ರೂ. ಹಾಗೂ ಇತರ ಕೈಗಾರಿಕೆಗಳಿಗೆ 25 ಲಕ್ಷ ರೂ. ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕ್‌ನಲ್ಲಿ ಸಾಲ ಸಿಗಲಿದೆ. ಫಲಾನುಭವಿಗಳಿಗೆ ಎರಡು ವಾರ ತರಬೇತಿಯನ್ನೂ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗಕ್ಕೆ ಶೇ.25 ಸಹಾಯಧನ ಹಾಗೂ ವಿಶೇಷ ವರ್ಗದ ಪ.ಜಾತಿ ಹಾಗೂ ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು, ಮಹಿಳಾ ಫಲಾನುಭವಿಗಳಿಗೆ ಸಹಾಯಧನ ಶೇ.35ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ. ನಗರ ಪ್ರದೇಶ ಸಾಮಾನ್ಯ ವರ್ಗಕ್ಕೆ ಶೇ.15 ಹಾಗೂ ವಿಶೇಷ ವರ್ಗಕ್ಕೆ ಶೇ.25 ಸಹಾಯಧನ ನೀಡಲಾಗುತ್ತದೆ.
    ಸ್ವಂತ ಬಂಡವಾಳವೂ ಬೇಕು: ಯೋಜನೆಯಡಿ ವಿಶೇಷ ವರ್ಗಕ್ಕೆ ಸೇರಿದ ಉದ್ದಿಮೆದಾರರು ಯೋಜನಾ ವೆಚ್ಚದ ಶೇ.5ರಷ್ಟು ಹಾಗೂ ಸಾಮಾನ್ಯ ವರ್ಗದವರು ಶೇ.10ರಷ್ಟು ಸ್ವಂತ ಬಂಡವಾಳ ಹೂಡಬೇಕಾಗುತ್ತದೆ. ಬ್ಯಾಂಕುಗಳು ಉದ್ದಿಮೆದಾರಿಗೆ ಸಾಲ ಮಂಜೂರು ಮಾಡಿ ಮೊದಲನೆ ಕಂತಿನ ಹಣ ಬಿಡುಗಡೆ ಮಾಡಿದ ನಂತರ ಬ್ಯಾಂಕ್‌ಗಳು ಅಂಚುಹಣ (ಮಿಡಲ್ ಎಂಡ್ ಸಬ್ಸಿಡಿ) ಕ್ಲೈಮ್ ಮಾಡಿ ಉದ್ದಿಮೆದಾರರ ಹೆಸರಿನಲ್ಲಿ ಟಿ.ಡಿ.ಆರ್.ಖಾತೆಯಲ್ಲಿ 3 ವರ್ಷ ಠೇವಣಿ ಇಡಬೇಕಾಗಿದೆ. ಘಟಕದ ಕೆಲಸ ಪರಿಶೀಲಿಸಿದ ನಂತರ ಉದ್ದಿಮೆದಾರರ ಸಾಲದ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. 10 ಲಕ್ಷ ರೂ.ಯೋಜನಾ ವೆಚ್ಚಕ್ಕೆ ಮೇಲ್ಪಟ್ಟ ತಯಾರಿಕಾ ಘಟಕಕ್ಕೆ ಮತ್ತು 5 ಲಕ್ಷ ರೂ.ಮೇಲ್ಪಟ್ಟ ಸೇವಾ ವಲಯದ ಘಟಕಗಳಿಗೆ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು.
    ಏನೇನು ಮಾಡಬಹುದು?: ಯೋಜನೆ ಮೂಲಕ ಕೃಷಿ ಆಧಾರಿತ ಮತ್ತು ಆಹಾರ ಉದ್ದಿಮೆಗಳಾದ ಜೇನು ಸಾಕಾಣೆ, ಹಾಲಿನ ಉತ್ಪನ್ನಗಳ ಘಟಕ, ಪಶು ಆಹಾರ, ಹಣ್ಣು ಮತ್ತು ತರಕಾರಿಗಳ ಪರಿಷ್ಕರಣೆ, ಗಾಣ ಬಳಸಿ ಎಣ್ಣೆ ತಯಾರಿ, ಮೆಂಥಾಲ್ ಎಣ್ಣೆ ತಯಾರಿ, ತೆಂಗಿನ ನಾರು ಹಾಗೂ ಇತರ ನಾರು ಉದ್ದಿಮೆ, ರಾಗಿ ಮತ್ತು ಮೆಕ್ಕೆ ಜೋಳದ ಪರಿಷ್ಕರಣೆ, ಬೆಂಡಿನ ಕೆಲಸ, ಚಾಪೆ ಹಾಗೂ ಹೂವಿನ ಹಾರಗಳು ಇತ್ಯಾದಿಗಳ ತಯಾರಿ, ಗೋಡಂಬಿ ಪರಿಷ್ಕರಣೆ, ಅಡಕೆ ಹಾಳೆ ತಟ್ಟೆ ತಯಾರಿಗೂ ಸಾಲ ನೀಡಲಾಗುತ್ತದೆ. ಗೃಹ ಕುಂಬಾರಿಕೆ, ಕಲ್ಲುಪುಡಿ ಮಾಡುವುದು, ಸೈಜು ಕಲ್ಲುಗಳ ತಯಾರಿ, ಕಟ್ಟಡ ಮತ್ತು ದೇವಾಲಯಗಳಿಗೆ ಕಲ್ಲಿನಲ್ಲಿ ಶಿಲ್ಪ, ಕಲ್ಲಿನಿಂದ ಬಳಕೆ ವಸ್ತು, ಚಿನ್ನ, ಬೆಳ್ಳಿ, ಕಲ್ಲು, ಚಿಪ್ಪುಗಳು ಹಾಗೂ ಕೃತಕ ವಸ್ತುಗಳಿಂದ ಆಭರಣ, ಬಳೆ, ಗಾಜಿನ ಅಲಂಕಾರಿಕ ವಸ್ತು, ಗೃಹ ಬೆಂಕಿಕಡ್ಡಿ, ಪಟಾಕಿ ಹಾಗೂ ಅಗರಬತ್ತಿ, ಬೆತ್ತ ಮತ್ತು ಬಿದಿರು ಉದ್ದಿಮೆ, ತಟ್ಟೆ, ಕೈಚೀಲ ಮತ್ತಿತರ ಕಾಗದದ ವಸ್ತುಗಳ ತಯಾರಿ, ಅರಣ್ಯ ಉತ್ಪನ್ನಗಳ ಸಂಗ್ರಹ, ಪರಿಷ್ಕರಣೆ ಹಾಗೂ ಪ್ಯಾಕಿಂಗ್, ಹಪ್ಪಳ, ಸಂಡಿಗೆ ಮಸಾಲೆ ಪುಡಿಗಳ ಪರಿಷ್ಕರಣೆ, ಪ್ಯಾಕಿಂಗ್ ಮತ್ತು ಮಾರಾಟ, ಹಿಟ್ಟಿನ ಗಿರಣಿ, ಭಾರತೀಯ ಸಿಹಿ ತಂಡಿ, ಗೃಹ ಸಾಬೂನು ಉದ್ದಿಮೆ, ಮೇಣದ ಬತ್ತಿ, ಕರ್ಪೂರ, ಸುಗಂಧ ಎಣ್ಣೆ, ಕಮ್ಮಾರಿಕೆ, ಗೃಹ ಬಳಿಕೆಗಾಗಿ ಅಲ್ಯೂಮಿನಿಯಂ ಪಾತ್ರೆ, ಕಲಾತ್ಮಕ ಪೀಠೋಪಕರಣ, ಮೋಟರ್ ವೈಂಡಿಂಗ್, ತಂತಿ ಬಲೆ, ಕಬ್ಬಿಣದ ಗ್ರಿಲ್, ಸಂಗೀತೋಪಕರಣಗಳ ತಯಾರಿಗೆ ಯೋಜನೆಯಲ್ಲಿ ಅವಕಾಶವಿದೆ.

    ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಸ್ವ ಉದ್ಯೋಗಕ್ಕಾಗಿ ಪ್ರಧಾನಮಂತ್ರಿಗಳ ಉದ್ಯೊಗ ಸೃಜನ ಯೋಜನೆ ಮೂಲಕ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಯುವಜನರಲ್ಲಿ ಉದ್ಯಮಶೀಲತೆ ಬೆಳೆಸುವುದು ಯೋಜನೆ ಮುಖ್ಯ ಉದ್ದೇಶ. ಸರ್ಕಾರದ ಸಹಾಯಧನದೊಂದಿಗೆ ಉತ್ಪಾದನಾ ವಲಯಕ್ಕೆ 25 ಲಕ್ಷ ರೂ.ಹಾಗೂ ಸೇವಾ ವಲಯಕ್ಕೆ 10 ಲಕ್ಷ ರೂ. ಸಾಲ ನೀಡಲಾಗುತ್ತದೆ.
    ಗೋಕುಲ್‌ದಾಸ್ ನಾಯಕ್
    ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts