More

    ಮಹಾನ್ ಕಾರ್ಯಗಳು ಮೌನವಾಗಿ ಸಾಗಬೇಕು: ಸದ್ಗುರು ಮಧುಸೂದನ ಸಾಯಿ ಅಭಿಮತ

    ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜಾಗತಿಕ ಯುವ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

    ಶ್ರೀ ಸತ್ಯಸಾಯಿ ಬಾಬಾ ಜನ್ಮದಿನ ಅಂಗವಾಗಿ ತಲಾ ಎರಡು ದಿನ ಸಂಗೀತ ಸಮ್ಮೇಳನ, ಜಾಗತಿಕ ಯುವ ಸಮ್ಮೇಳನ, ವಿಶ್ವ ಸಮ್ಮೇಳನವನ್ನು ಕೈಗೊಳ್ಳಲಾಗಿದೆ. ಏಳನೇ ದಿನ ಸತ್ಯಸಾಯಿ ಅಭ್ಯುದಯ ಪುರಸ್ಕಾರ ಮತ್ತು ಬಾಬಾ ಹುಟ್ಟಿದ ದಿನ ಕಾರ್ಯಕ್ರಮ ನಡೆಯಲಿದೆ.

    ಈಗಾಗಲೇ ದೇಶ ವಿದೇಶಗಳ ಕಲಾವಿದರನ್ನೊಳಗೊಂಡ ಸಂವಾದ, ಚರ್ಚೆ ಮತ್ತು ಕಲಾ ಸೇವೆಯ ಮೂಲಕ ಸಂಗೀತ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಇದೀಗ ಸಾಂಕ್ರಾಮಿಕ ಸಂದರ್ಭದಲ್ಲಿನ ಅನುಭವಗಳು, ಸವಾಲುಗಳು ಮತ್ತು ಪರಿಹಾರ ಕ್ರಮಗಳ ಚರ್ಚೆಯಲ್ಲಿ ಯುವ ಪೀಳಿಗೆಗೆ ವೇದಿಕೆ ಕಲ್ಪಿಸುವ ಯುವ ಸಮ್ಮೇಳನಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನ ಸಾಂಕ್ರಾಮಿಕ ಪಿಡುಗಿನ ಪೂರ್ವೋತ್ತರ ಪಾಠಗಳ ಚಿಂತನ ಮಂಥನ ನಡೆಯಿತು.

    ಮಹಾನ್ ಕಾರ್ಯಗಳು ಎಂದಿಗೂ ಮೌನವಾಗಿ ಅರ್ಥಪೂರ್ಣ ಪಥದಲ್ಲಿ ನಡೆಯಬೇಕು. ಅಬ್ಬರದ ಪ್ರಚಾರವಿಲ್ಲದ ಸದಾಶಯವು ಜನಮನವನ್ನು ಮುಟ್ಟುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಪ್ರಾಯಪಟ್ಟರು.
    ಮೌಲ್ಯಗಳನ್ನು ಗಾಳಿಗೆ ತೂರಿ, ಮೆರೆದಾಡುತ್ತಿದ್ದ ಸಂದರ್ಭದಲ್ಲಿ ಸಾಂಕ್ರಾಮಿಕ ಪಿಡುಗು ಪ್ರಪಂಚಕ್ಕೆ ಹರಡುವ ಮೂಲಕ ಸಂವೇದನೆಯ ಪಾಠವನ್ನು ಕಲಿಸಿದೆ. ಸಹಜ ವೈಪರೀತ್ಯದ ಎದುರು ಹಣ, ಜನ, ಅಧಿಕಾರ ಸೇರಿ ಯಾವುದೂ ಕೆಲಸಕ್ಕೆ ಬರುವುದಿಲ್ಲ ಎಂಬುದರ ಅರಿವಾಗಿದೆ ಎಂದರು.

    ಕಷ್ಟದ ಸನ್ನಿವೇಶದಲ್ಲಿ ಮಾನವ ಸಹಜ ಸುಜ್ಞಾನವು ಜಗತ್ತನ್ನು ಪಾರು ಮಾಡುತ್ತದೆ. ಇದಕ್ಕೆ ತಕ್ಕ ಆತ್ಮವಿಶ್ವಾಸವು ಯುವಜನತೆಯಲ್ಲಿ ಇರಬೇಕು. ಸಾಂಕ್ರಾಮಿಕ ಪಿಡುಗಿನ ನಡುವೆಯೂ ಉಳಿದವರನ್ನು ಸಂರಕ್ಷಿಸುವ ಸೇವಾ ಕಾರ್ಯಗಳಾಗಬೇಕು. ಈ ನಿಟ್ಟಿನಲ್ಲಿ ಚರ್ಚೆಗೆ ಯುವ ಸಮ್ಮೇಳನವನ್ನು ಸಂಘಟಿಸಲಾಗಿದೆ ಎಂದು ಸದ್ಗರು ತಿಳಿಸಿದರು.

    ಬದುಕಿನಲ್ಲಿ ಸೋತಾಗ ಕುಗ್ಗದೆ ಧೈರ್ಯದಿಂದ ಮುನ್ನುಗ್ಗಬೇಕು. ಎಡೆಬಿಡದೆ ಕಾಡಿದ ಸಾಂಕ್ರಾಮಿಕ ಪಿಡುಗು ಮಾನವನ ಪ್ರವರ್ತನೆಯನ್ನು ಬದಲಿಸಿದ್ದು ಸತತ ಅಭ್ಯಾಸದಿಂದ ಭಯವನ್ನು ಗೆಲ್ಲಬಹುದು ಎಂಬುದರ ಅರಿವಾಗಿದೆ ಎಂದು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು. ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಕಂಠ ಮೂರ್ತಿ ಮತ್ತಿತರರು ಇದ್ದರು.

    11 ಮಂದಿಗೆ ಹೃದಯ ಶಸ್ತ್ರಚಿಕಿತ್ಸೆ: ಮುದ್ದೇನಹಳ್ಳಿಯಲ್ಲಿ ಇತ್ತೀಚೆಗೆ ಪ್ರಾರಂಭವಾದ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯಲ್ಲಿ 11 ಮಂದಿ ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಖ್ಯಾತ ವೈದ್ಯರ ತಂಡ ನೀಡಿದ ಗುಣಮಟ್ಟದ ಚಿಕಿತ್ಸೆಯಿಂದ ಮಕ್ಕಳು ಆರೋಗ್ಯವಾಗಿದ್ದಾರೆ. ಇನ್ನು ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆ ಲೋಕಾರ್ಪಣೆಗೊಂಡಿದ್ದು ಹೃದಯ ಸಮಸ್ಯೆಗಳಿಗೆ ತುತ್ತಾಗಿ ನೋವು ಅನುಭವಿಸುತ್ತಿದ್ದ ಕಂದಮ್ಮಗಳಿಗೆ ಉಚಿತ ಆರೋಗ್ಯ ಸೇವೆಯಿಂದ ಮರು ಜೀವ ಸಿಕ್ಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts