More

    ಯುವಕನ ಕೊಲೆ ಪ್ರಕರಣ ಸಾಬೀತು: 6 ಅಪರಾಧಿಗಳಿಗೆ ಜು.28ರಂದು ಶಿಕ್ಷೆ ಪ್ರಕಟ ಸಾಧ್ಯತೆ

    ಮಂಗಳೂರು: ಮದುವೆ ನಿಶ್ಚಯವಾಗಿದ್ದ ಬೆಳ್ತಂಗಡಿಯ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ವಿರುದ್ಧ ದಾಖಲಾಗಿದ್ದ ಆರೋಪ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದ ವಿಚಾರಣೆ ಜು.28ಕ್ಕೆ ನಡೆಯಲಿದೆ.

    ಬೆಳ್ತಂಗಡಿ ನಾವರ ನಿವಾಸಿ ಆನಂದ ನಾಯ್ಕ(39), ಕಸಬಾ ನಿವಾಸಿ ಪ್ರವೀಣ್ ನಾಯ್ಕ(39), ಚಾರ್ಮಾಡಿ ನಿವಾಸಿ ವಿನಯ ಕುಮಾರ್(34), ಮೂಡುಕೋಡಿ ನಿವಾಸಿ ಪ್ರಕಾಶ್(35), ಬಂಟ್ವಾಳ ಪುದು ನಿವಾಸಿ ಲೋಕೇಶ್(38), ಮೇಲಂತಬೆಟ್ಟು ನಿವಾಸಿ ನಾಗರಾಜ(43) ಅಪರಾಧಿಗಳು. ಬೆಳ್ತಂಗಡಿ ದಿಡುಪೆ ನಿವಾಸಿ ಸುರೇಶ್ ನಾಯ್ಕ(30) ಎಂಬುವರನ್ನು 6 ಮಂದಿಯ ತಂಡ 2017 ಏ.29ರಂದು ಕೊಲೆ ಮಾಡಿದ್ದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ಹಿನ್ನೆಲೆ: ನಾವರ ನಿವಾಸಿ ಆನಂದ ನಾಯ್ಕನಿಗೆ ಮದುವೆಯಾಗಿ ಮಕ್ಕಳಿದ್ದು, ಈತ ಪರಿಚಯದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿಯ ತಂದೆ ಬಳಿ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ ಆಕೆಯ ಮನೆಯವರು ವಿರೋಧಿಸಿದ್ದರು. ಬಳಿಕ ದಿಡುಪೆ ನಿವಾಸಿ ಸುರೇಶ್ ನಾಯ್ಕ ಜತೆ ಯುವತಿ ಮದುವೆ ನಿಶ್ಚಯಗೊಂಡಿತ್ತು. ಇದನ್ನು ತಿಳಿದ ಆನಂದ ನಾಯ್ಕ, ಯುವತಿಯ ಮನೆಯವರ ಬಳಿ ಸುರೇಶ್ ನಾಯ್ಕನ ಮೊಬೈಲ್ ನಂಬರ್ ಸಂಗ್ರಹಿಸಿ ‘ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು ಈ ಸಂಬಂಧವನ್ನು ಬಿಟ್ಟುಬಿಡು’ ಎಂದು ತಾಕೀತು ಮಾಡಿದ್ದ. ಒಪ್ಪದಿದ್ದಾಗ ಸುರೇಶನಿಗೆ ಜೀವ ಬೆದರಿಕೆ ಹಾಕಿದ್ದ. 2017 ಏ.29ರಂದು ಎರಡನೇ ಆರೋಪಿ ಪ್ರವೀಣ್ ನಾಯ್ಕ ಸುರೇಶ್‌ಗೆ ಕರೆ ಮಾಡಿ ಉಜಿರೆಗೆ ಕರೆಸಿಕೊಂಡಿದ್ದು, ಆರು ಮಂದಿ ಸೇರಿ ಆತನನ್ನು ಕಾರಿನಲ್ಲಿ ಪಟ್ರಮೆ-ಧರ್ಮಸ್ಥಳ ರಸ್ತೆಯಲ್ಲಿ ಕರೆದುಕೊಂಡು ಹೋಗಿದ್ದರು. ಸುರೇಶ್ ಮದುವೆ ನಿರಾಕರಿಸಲು ಒಪ್ಪದಿದ್ದಾಗ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರು. ಬಳಿಕ ಧರ್ಮಸ್ಥಳದ ಅವೆಕ್ಕಿಯ ತಗ್ಗು ಪ್ರದೇಶದಲ್ಲಿ ಮೃತದೇಹಕ್ಕೆ ಗೋಣಿ ಚೀಲ ಸುತ್ತಿ ಪೆಟ್ರೋಲ್ ಹಾಕಿ ಸುಟ್ಟಿದ್ದರು.

    ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ತೀರ್ಪು ನೀಡಿದ್ದಾರೆ. ಬೆಳ್ತಂಗಡಿಯ ಹಿಂದಿನ ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಪಿ. ರಾಮಲಿಂಗೇಗೌಡ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 33 ಮಂದಿ ಸಾಕ್ಷಿ ವಿಚಾರಣೆ ನಡೆಸಿದ್ದಾರೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ, ಶೇಖರ್ ಶೆಟ್ಟಿ ವಾದಿಸಿದ್ದರು.

     ಫೋನ್ ಕರೆಯಲ್ಲಿ ಸಿಕ್ಕಿ ಬಿದ್ದಿದ್ದರು: ಕೊಲೆಯಾದ ಸುರೇಶ್ ನಾಯ್ಕ ಮೊಬೈಲ್‌ಗೆ ಬಂದ ಕೊನೇ ಕರೆ ಪ್ರವೀಣ್ ನಾಯ್ಕನದ್ದಾಗಿತ್ತು. ಇದೇ ಆಧಾರದಲ್ಲಿ ಇಡೀ ಪ್ರಕರಣವನ್ನು ಪೊಲೀಸರು ಭೇದಿಸಿದ್ದರು. ಸುರೇಶ್ ನಾಯ್ಕ ಮತ್ತು ಅವರ ತಾಯಿಯ ಡಿಎನ್‌ಎ ಹೋಲಿಕೆಯಾಗಿತ್ತು. ಈ ಎಲ್ಲ ಸಾಕ್ಷಾೃಧಾರಗಳಿಂದ ಪ್ರಕರಣ ಸಾಬೀತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts