More

    ನಿಮ್ಮ ರಕ್ಷಣೆ ಹೊಣೆ ನಮ್ಮದು

    ಬೆಳಗಾವಿ: ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಬಿಮ್ಸ್ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

    ಬಳಿಕ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕರೊನಾ ಸೇನಾನಿಗಳ ರಕ್ಷಣೆ ಹೊಣೆ ನಮ್ಮದು. ಮುಂದೆ ಈ ರೀತಿ ದುರ್ಘಟನೆ ನಡೆಯದಂತೆ ಹಾಗೂ ಎಲ್ಲ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ ನಿಲ್ಲಿಸಿ, ಕರ್ತವ್ಯಕ್ಕೆ ತೆರಳಿದರು.

    ಭದ್ರತೆ ನೀಡಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆವರಣದಲ್ಲಿ ಬುಧವಾರ ರಾತ್ರಿ ಏಕಾಏಕಿ ದುಷ್ಕರ್ಮಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದ್ದಲ್ಲದೆ, ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ನಿನ್ನೆಯ ಈ ಅಹಿತಕರ ಘಟನೆಯಿಂದಾಗಿ ವೈದ್ಯರು, ನರ್ಸ್ ಸೇರಿದಂತೆ ಇನ್ನಿತರ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಭಯ ಕಾಡುತ್ತಿದೆ. ಹಾಗಾಗಿ ಇಲ್ಲಿನ ಎಲ್ಲ ಸಿಬ್ಬಂದಿಗೆ ಸೂಕ್ತ ಭದ್ರತೆ ನೀಡಲು ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಬೇಕು ಎಂದು ವೈದ್ಯರು ಆಗ್ರಹಿಸಿದರು.

    ಪದೇಪದೆ ಹಲ್ಲೆ: ಬಿಮ್ಸ್ ಸೇರಿದಂತೆ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿ ಮೇಲೆಯೂ ಪದೇಪದೆ ಹಲ್ಲೆ ನಡೆಸುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಧೈರ್ಯ ಸಾಲುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬುಧವಾರ ರಾತ್ರಿ ಬಿಮ್ಸ್ ಆವರಣದಲ್ಲಿ ನಡೆದ ಈ ದುಷ್ಕೃತ್ಯದಿಂದಾಗಿ ನಮಗೆಲ್ಲ ಜೀವಭಯ ಕಾಡುತ್ತಿದೆ.

    ನಮ್ಮ ಜೀವವನ್ನೂ ಲೆಕ್ಕಿಸದೆ ಕರೊನಾ ವೈರಸ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ನಮಗೆ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ಜಿಲ್ಲಾಡಳಿತ ಸೂಕ್ತ ಭದ್ರತೆ ನೀಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ವೈದ್ಯಕೀಯ ಸಿಬ್ಬಂದಿ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ, ಬಿಮ್ಸ್ ಅಧಿಕಾರಿಗಳು, ನರ್ಸ್‌ಗಳು ಇತರರು ಇದ್ದರು.

    ಆಸ್ಪತ್ರೆಗೆ ನಿತ್ಯವೂ ಎರಡು ಬಾರಿ ಭೇಟಿ ನೀಡುವೆ: ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹೆದರಬೇಕಿಲ್ಲ. ತಾವುಗಳೆಲ್ಲ ಕರೊನಾ ಸೋಂಕಿನ ವಿರುದ್ಧ ದೇಶ ರಕ್ಷಣೆಯಲ್ಲಿ ತೊಡಗಿರುವ ಯೋಧರ ರೀತಿಯಲ್ಲೇ ಹೋರಾಟ ನಡೆಸುತ್ತಿದ್ದೀರಿ. ಹೀಗಾಗಿ ತಮಗೆಲ್ಲರಿಗೂ ಕಾನೂನು ರಕ್ಷಣೆ ಇದೆ. ನಿಮಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು.

    ನಾನು ಪ್ರತಿದಿನವೂ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ತಾಲೂಕು ಮಟ್ಟದಲ್ಲಿ ಕೋವಿಡ್-19 ಕೇಂದ್ರಗಳನ್ನು ತೆರೆದಿರುವುದರಿಂದ ನಿಮಗೆಲ್ಲ ಒತ್ತಡ ಕಡಿಮೆ ಆಗಲಿದೆ. ಬಿಮ್ಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಘೋಷಿಸಲಾಗಿದೆ. ಅಲ್ಲದೆ, ಬಿಮ್ಸ್ ಸುತ್ತಮುತ್ತ ನಿಷೇಧಾಜ್ಞೆ ಮುಂದುವರಿಸಲಾಗುವುದು. ಜತೆಗೆ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಪ್ರತಿಭಟನಾನಿರತ ವೈದ್ಯರು ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭರವಸೆ ನೀಡಿದರು.

    ಬಿಮ್ಸ್‌ನಲ್ಲಿ ಬುಧವಾರ ನಡೆದ ಅಹಿತಕರ ಘಟನೆ ಮರೆತು ನಮ್ಮ ವೈದ್ಯಕೀಯ ಕರ್ತವ್ಯ ಮುಂದುವರಿಸಿಕೊಂಡು ಹೋಗುತ್ತೇವೆ. ಜಿಲ್ಲಾಧಿಕಾರಿಗಳು ನಮಗೆಲ್ಲರಿಗೂ ಧೈರ್ಯ, ಹುಮ್ಮಸ್ಸು ತುಂಬಿದ್ದಾರೆ. ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.
    | ಡಾ. ವಿನಯ ದಾಸ್ತಿಕೊಪ್ಪ, ಬಿಮ್ಸ್ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts