More

    ಕಾರಣವನ್ನೇ ತಿಳಿಸದೇ ಬಹುಮಾನವನ್ನು ತಿರಸ್ಕರಿಸಿದ ಬರಹಗಾರ್ತಿ ಫಾತಿಮಾ…

    ಬೆಂಗಳೂರು: ಒಂದು ವಾರ ಹಿಂದಷ್ಟೇ ಛಂದ ಪುಸ್ತಕ ಪ್ರಕಾಶನ ಸಂಸ್ಥೆಯಿಂದ ನೀಡಲಾಗುವ ‘ಛಂದ ಪುಸ್ತಕ ಬಹುಮಾನ’ವನ್ನು ಬರಹಗಾರ್ತಿ ಫಾತಿಮಾ ರಲಿಯಾಗೆ ಘೋಷಿಸಲಾಗಿತ್ತು. ಈಗ ಫಾತಿಮಾ ಬಹುಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ. ಇದಕ್ಕೆ ಯಾವುದೇ ಕಾರಣವನ್ನೂ ಆಕೆ ನೀಡಿಲ್ಲ.

    ‘ಇದಕ್ಕೆ ವೈಯಕ್ತಿಕ ಕಾರಣವಿರಬಹುದು, ಇದು ಫಾತಿಮಾ ಅವರ ಖಾಸಗಿ ವಿಷಯವಾದ್ದರಿಂದ, ಅವರ ಆಯ್ಕೆ ಸ್ವಾತಂತ್ರ್ಯವನ್ನು ಛಂದ ಪುಸ್ತಕ ಪ್ರಕಾಶನ ಗೌರವಿಸುತ್ತದೆ… ಓದುಗರಿಗೆ ಗೊಂದಲ ಉಂಟಾಗಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ…’ ಎಂದು ಪ್ರಕಾಶಕ ವಸುಧೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಬರಹಗಾರ್ತಿ ಫಾತಿಮಾ ರಲಿಯಾ ಬಹುಮಾನ ನಿರಾಕರಣೆಗೆ ಕಾರಣ ಏನಿರಬಹುದು ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ.

    ಯುವ ಬರಹಗಾರ್ತಿ ಫಾತಿಮಾ ರಲಿಯಾ ಪ್ರಶಸ್ತಿಗೆ ಭಾಜನರಾದಾಗ, ಛಂದ ಪುಸ್ತಕ ಸಂಸ್ಥೆ ಹೆಮ್ಮೆಯ ಮಾತುಗಳನ್ನು ವ್ಯಕ್ತಪಡಿಸಿತ್ತು. ಸತತ ಮೂರು ವರ್ಷಗಳ ಕಾಲ ಮಹಿಳೆಯರೇ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿತ್ತು. ಮುಂದಿನ ತಿಂಗಳು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಂಡಿತ್ತು. ಫಾತಿಮಾ ಕೂಡ ಅಂದಿನ ಕಾರ್ಯಕ್ರಮಕ್ಕೆ ಬರಬೇಕೆಂದು ಕೆಲವರಿಗೆ ಮೆಸೇಜ್ ಕೂಡ ಮಾಡಿದ್ದರು. ಈಗ ಪ್ರಶಸ್ತಿ ತಿರಸ್ಕರಿಸಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಎಡ-ಬಲ ಚರ್ಚೆಗಳು ಹುಟ್ಟಿಕೊಂಡಿವೆ.

    ಫಾತಿಮಾ ಕಳುಹಿಸಿದ್ದ ಹಸ್ತಪ್ರತಿಯಲ್ಲಿ ಮುಸ್ಲಿಂ ಮಹಿಳೆಯರ ತಲ್ಲಣಗಳು ದಾಖಲಾಗಿವೆ. ಈ ಕಾರಣಕ್ಕೆ ಪುಸ್ತಕವನ್ನು ಪ್ರಕಟಿಸಬಾರದು ಮತ್ತು ಬಹುಮಾನವನ್ನು ಪಡೆಯಬಾರದು ಎಂಬ ಒತ್ತಡವನ್ನು ಹೇರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹಿಂದೊಮ್ಮೆ ಕಥಾ ಸ್ಪರ್ಧೆಯಲ್ಲೂ ಇವರಿಗೆ ಬಹುಮಾನ ಬಂದಿತ್ತು. ಅಂದಿನ ಕಾರ್ಯಕ್ರಮಕ್ಕೂ ಫಾತಿಮಾ ಹೋಗಿರಲಿಲ್ಲ. ಆದರೆ ಪ್ರಶಸ್ತಿ ಮತ್ತು ಬಹುಮಾನ ಸ್ವೀಕರಿಸಿದ್ದರು. ಈಗ ಛಂದ ಪುಸ್ತಕ ಬಹುಮಾನವನ್ನೂ ನಿರಾಕರಿಸಿರುವುದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಕುರಿತಂತೆ ಛಂದ ಪುಸ್ತಕ ಪ್ರಕಾಶನದ ವಸುಧೇಂದ್ರ, ‘ಆ ಹುಡುಗಿ ವೈಯಕ್ತಿಕ ಕಾರಣಕ್ಕೆ ಬಹುಮಾನ ನಿರಾಕರಿಸಿದ್ದಾರಷ್ಟೆ… ಇದರ ಹಿಂದೆ ಅವರ ಧರ್ಮದವರು ಇದ್ದಾರೆ ಎನ್ನುವುದನ್ನು ನಾನು ಒಪ್ಪುವುದಿಲ್ಲ… ಈಕೆಗೆ ಬಹುಮಾನ ಬಂದಿದೆ ಎಂದು ಗೊತ್ತಾದಾಗ ಅವರ ಧರ್ಮದವರೂ ಸಂಭ್ರಮಿಸಿದ್ದರು, ಈಗಾಗಲೇ ಫಾತಿಮಾ ಅವರು ಒಂದು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಹೀಗಿರುವಾಗ ನಿರಾಕರಣೆಗೆ ಬೇರೆ ಬಣ್ಣ, ಬೇರೆ ಅರ್ಥ ಕೊಡುವುದು ಬೇಡ…’ ಎಂದಿದ್ದಾರೆ.

    ಛಂದ ಪುಸ್ತಕ ಬಹುಮಾನ 40,000 ರೂ. ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಸಕ್ತ ಸಾಲಿನ (2022) ಈ ಸ್ಪರ್ಧೆಯಲ್ಲಿ 93 ಕತೆಗಾರರು ಭಾಗವಹಿಸಿದ್ದರು. ಚಲನಚಿತ್ರ ನಿರ್ದೇಶಕ ಗಿರೀಶ್​ ಕಾಸರವಳ್ಳಿ ಛಂದ ಪುಸ್ತಕ ಹಸ್ತಪ್ರತಿಯ ತೀರ್ಪುಗಾರರಾಗಿದ್ದರು.

    ಪ್ರಸಕ್ತ ಸಾಲಿನ ಛಂದ ಪುಸ್ತಕ ಬಹುಮಾನ ನಿರಾಕರಿಸಿರುವ ಫಾತಿಮಾ ರಲಿಯಾ ಮೂಲತಃ ದಕ್ಷಿಣ ಜಿಲ್ಲೆಯ ಪೆರ್ನೆ ಗ್ರಾಮದವರು. ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸವಿದ್ದಾರೆ. ಇನ್​​ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅಬ್ದುಲ್ ರಶೀದ್ ಮತ್ತು ಆಯಿಶಾ ಪುತ್ರಿಯಾದ ಫಾತಿಮಾ ‘ಕಡಲು ನೋಡಲು ಹೋದವಳು’ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷ ಪ್ರಕಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts