More

    ಯುವಜನರೇ ದೇಶದ ಅಮೂಲ್ಯ ಆಸ್ತಿ

    ಬೆಳಗಾವಿ: ವಿದ್ಯಾರ್ಥಿಗಳೇ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಜ್ಞಾನದ ನಿಜವಾದ ರಾಯಭಾರಿಗಳು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.

    ನಗರದ ವಿಟಿಯು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಯುಕ್ತಿ 2ಕೆ24 ರಾಷ್ಟ್ರಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡಿದರು. ಯುವಜನರು ದೇಶದ ದೊಡ್ಡ ಶಕ್ತಿ. ಯುವಶಕ್ತಿಯು ಸಮಾಜವನ್ನು ಕ್ರಾಂತಿಕಾರಿಯಾಗಿ ಪರಿವರ್ತಿಸಿ ಅಭಿವೃದ್ಧಿ ಗೊಳಿಸುವ ಸಾಮರ್ಥ್ಯ ಹೊಂದಿದೆ. ಅವರ ಮೇಲೆ ದೇಶದ ಭವಿಷ್ಯವೂ ನಿಂತಿದೆ. ಆದ್ದರಿಂದ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಯುವ ಸಮುದಾ ಯವನ್ನು ಅವರ ಕೌಶಲ ಮತ್ತು ಪ್ರತಿಭೆ ಗುರುತಿಸಿ ಉತ್ತೇಜಿಸಬೇಕಿದೆ ಎಂದರು.

    ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಭಾರತದಾದ್ಯಂತ ಆಚರಿಸುತ್ತಿರುವ ‘ರಾಷ್ಟ್ರೀಯ ಯುವ ದಿನ’ ಯುವ ಜನತೆಯ ಚೈತನ್ಯ, ಸಾಮರ್ಥ್ಯ, ಆಕಾಂಕ್ಷೆ ಪ್ರತಿಧ್ವನಿಸುವ ಆಚರಣೆಯಾಗಿದೆ. ಸ್ವಾಮಿ ವಿವೇಕಾನಂದರ ಬೋಧನೆಗಳು, ಆಧ್ಯಾತ್ಮಿಕ ಸಾಮರಸ್ಯ, ಸಹಿಷ್ಣುತೆ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವತ್ವ ಗುರುತಿಸುವ ತತ್ವಗಳಾಗಿವೆ ಎಂದರು.

    ವಿಟಿಯು ಈ ನಿಟ್ಟಿನಲ್ಲಿ ತಂತ್ರಜ್ಞಾನ, ಸಂಸ್ಕೃತಿ ಮತ್ತು ಕಲೆಗಳಲ್ಲಿ ಯುವ ಮನಸ್ಸುಗಳನ್ನು ಒಂದೇ ವೇದಿಕೆಯಲ್ಲಿ ತಂದು ಕೌಶಲ, ಪ್ರತಿಭೆ ತೋರ್ಪಡಿಸಲು ಯುಕ್ತಿ -2ಕೆ24 ವೇದಿಕೆ ಕಲ್ಪಿಸಿದೆ. ದೇಶದ ಬೇರೆ ರಾಜ್ಯಗಳ ವಿವಿಧ ಸಂಸ್ಥೆಗಳಿಂದ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

    ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಪ್ರಾದೇಶಿಕ ನಿರ್ದೇಶಕ ಪ್ರೊ. ಎಸ್.ಬಿ. ದಂಡಗಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಪ್ರಲ್ಹಾದ ರಾಥೋಡ ಇದ್ದರು. ವಿಟಿಯು ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿದರು. ಸಾಂಸ್ಕೃತಿಕ ಸಂಯೋಜಕಿ ಪ್ರೊ.ದೀಪ್ತಿ ಶೆಟ್ಟಿ ಯುಕ್ತಿ-2ಕೆ24 ವರದಿ ವಾಚಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಟಿ.ಎನ್. ಶ್ರೀನಿವಾಸ ವಂದಿಸಿದರು. ನೃತ್ಯ, ಗಾಯನ, ಪೇಪರ್ ಪ್ರೆಸೆಂಟೇಶನ್, ಬ್ಯಾಟಲ್ ಆಫ್ ಬ್ಯಾಂಡ್ಸ್, ರಂಗೋಲಿ ಸ್ಪರ್ಧೆಗಳು ನಡೆದವು.

    ಇಂದು ಸಮಾರೋಪ: ಜ.13ರಂದು ಮಧ್ಯಾಹ್ನ 3.30ಕ್ಕೆ ವಿಟಿಯು ಆವರಣದಲ್ಲಿ 2ಕೆ24 ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ಅವರು ಬಹುಮಾನ ವಿತರಣೆ ಮಾಡುವರು. ಸಂಜೆ 6 ಗಂಟೆಯಿಂದ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts