More

    ಮಾರಕ ಏಡ್ಸ್ ಕಾಯಿಲೆಗೆ ಯುವಜನರು ಬಲಿ

    ಬೇಲೂರು: ಯುವ ಸಮೂಹ ಏಡ್ಸ್‌ನಂಥ ಮಾರಕ ಕಾಯಿಲೆಗೆ ತುತ್ತಾಗುತ್ತಿರುವುದು ಬೇಸರದ ಸಂಗತಿಯಾಗಿದ್ದು, ದೂರವಿರಲು ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.


    ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಪುರಸಭೆ-ಲಯನ್ಸ್ ಕ್ಲಬ್ ಹಾಗೂ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಯುಗದ ಜೀವನ ಶೈಲಿಯಿಂದ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಿ, ಬಾಳಬೇಕಾದ ಯುವ ಸಮೂಹ ಕೇವಲ ಕ್ಷಣಿಕ ಸುಖಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


    ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಪ್ರಜೆಗಳಾಗಬೇಕು. ಅದನ್ನು ಬಿಟ್ಟು ಕೆಟ್ಟ ದಾರಿಗಿಳಿದು ಹಾಳಾಗುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮಾರಕ ರೋಗಗಳಿಗೆ ತುತ್ತಾಗದೆ, ಮದುವೆಗೆ ಮುನ್ನ ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸದೆ ಎಚ್ಚರ ವಹಿಸಿ ಆರೋಗ್ಯ ಕಾಪಾಡಿಕೊಳ್ಳುವತ್ತ ಮುಂದಾಗಬೇಕು ಎಂದರು.


    ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ತಾಲೂಕಿನಲ್ಲಿ 743 ಏಡ್ಸ್ ರೋಗಿಗಳಿದ್ದಾರೆ. ಪರೀಕ್ಷೆಗೆ ಒಳಪಟ್ಟರೆ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ. ಏಡ್ಸ್‌ನಿಂದ ದೂರವಿರಲು ಮದುವೆಗೆ ಮುಂಚೆ ಲೈಂಗಿಕ ಸಂಪರ್ಕ ಮಾಡಬಾರದು, ಏಕ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕದಲ್ಲಿರಬೇಕು ಎಂದು ತಿಳಿಸಿದರು.


    ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಬಿ.ಎಂ.ರವಿಕುಮಾರ್ ಮಾತನಾಡಿ, ನಾವೇ ಪಡೆದುಕೊಳ್ಳುವ ಕಾಯಿಲೆ ಏಡ್ಸ್ ಆಗಿದೆ. ಇದಕ್ಕೆ ನಮ್ಮ ನಡವಳಿಕೆಯೇ ಕಾರಣ. ಸರಿಯಾಗಿಟ್ಟುಕೊಳ್ಳುವುದರಿಂದ ಮಾರಕ ರೋಗದಿಂದ ದೂರವಿರಬಹುದಾಗಿದೆ. ಏಡ್ಸ್ ರೋಗಿಗಳಲ್ಲಿ 18 ರಿಂದ 45 ವರ್ಷದ ಒಳಗಿನವರು ಶೇ.60 ಜನರು ಇರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.


    ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ.ಸುರೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಐಸಿಟಿಸಿ ಆಪ್ತ ಸಮಾಲೋಚಕ ಧರಣೇಶ್, ಐಸಿಟಿಸಿ ಪ್ರಯೋಗ ಶಾಲಾ ತಂತ್ರಜ್ಞ ರೇಣುಕಾ ಪ್ರಸಾದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts