More

    ಅತಿಯಾದ ತುಷ್ಟೀಕರಣದಿಂದಲೇ 2018ರಲ್ಲಿ ಸೋತಿದ್ದೀರಿ: ಸಿದ್ದರಾಮಯ್ಯಗೆ ಕೇಂದ್ರ ಸಚಿವ ಜೋಶಿ ಎಚ್ಚರಿಕೆ

    ಬೆಂಗಳೂರು ಅತಿಯಾದ ತುಷ್ಟೀಕರಣ ಮಾಡಿದ್ದರಿಂದಲೇ 2018ರ ಚುನಾವಣೆಯಲ್ಲಿ ನೀವು ಸೋತಿದ್ದೀರಿ. ಈಗ ಮತ್ತೆ ಅದನ್ನೇ ಮುಂದುವರಿಸಿದರೆ ಜನರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

    ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಗೆ ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

    ಅತಿಯಾದ ತುಷ್ಟೀಕರಣದ ಪರಿಣಾಮವೇ 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಏನಾಯಿತು ಎಂಬುದು ತಿಳಿದಿದ್ದರೆ ಸಾಕು. ಮತ್ತೆ ಅದನ್ನೇ ಮುಂದುವರಿಸುತ್ತೇನೆಂದರೆ ಜನ ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಅದಕ್ಕೆ ತಕ್ಕ ಬೆಲೆ ತೆತ್ತಬೇಕಾಗುತ್ತದೆ ಎಂದರು.

    ಅಷ್ಟಕ್ಕೂ ರಾಜ್ಯದಲ್ಲಿ ಹಿಜಾಬ್ ಅನ್ನು ಯಾರು ನಿಷೇಧಿಸಿದ್ದಾರೆ. ಯಾರು ಎಲ್ಲಿ ಬೇಕಾದರೂ ಹಿಜಾಬ್ ಧರಿಸಬಹುದು. ಶಾಲಾ- ಕಾಲೇಜಿನ ಕೊಠಡಿಗಳಲ್ಲಿ ಮಾತ್ರ ಧರಿಸಬಾರದೆಂದು ಸುತ್ತೋಲೆ ಹೊರಡಿಸಲಾಗಿದೆ. ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವುದಾಗಿ ಹೇಳಿದ್ದೀರಿ ನಿಮಗೆ ಕಾನೂನಿನ ಅರಿವಿದೆಯೇ ಎಂದು ಪ್ರಶ್ನಿಸಿದರು.

    ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಬಾರದೆಂದು ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತೇ ಎಂದು ಪ್ರಶ್ನಿಸಿದ ಜೋಶಿ, ಸರ್ಕಾರದ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಆತುರದಲ್ಲಿ ಹೇಳಿಕೆ ಕೊಡುವ ಅಗತ್ಯವಿತ್ತೇ ಎಂದರು.
    ಹಿಜಾಬ್‌ನಿಂದ ನಾಳೆ ಯಾರಾದರೂ ಕೇಸರಿ ಪೇಟಾ, ಮತ್ತಾರೋ ಮತ್ತೊಂದು ಟೋಪಿ ಹಾಕಿಕೊಂಡು ಬಂದರೆ, ಪೊಲೀಸ್ ಇಲ್ಲವೇ ಮಿಲಿಟರಿ ಪರೇಡ್‌ನಲ್ಲಿ ಹಿಜಾಬ್ ಧರಿಸುತ್ತೇವೆಂದರೆ ನಾವೇನು ಮಾಡಲು ಸಾಧ್ಯವೆಂದರು.

    ಸಿದ್ದರಾಮಯ್ಯ ಅವರು ಮೂರ್ಖರಲ್ಲ, ಎಲ್ಲ ತಿಳಿದೇ ಹೇಳಿಕೆ ನೀಡಿದ್ದಾರೆ. ಅವರಿಗೆ ಅರಿವಿಲ್ಲವೆಂದು ನಾವಾರು ಭಾವಿಸಬಾರದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts