More

    ಯೋಗಾಭ್ಯಾಸದಲ್ಲಿ ಸಹಸ್ರಾರು ಮಂದಿ ತಲ್ಲೀನ

    ಚಿತ್ರದುರ್ಗ: ಸೂರ್ಯ ಉದಯಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಜನವೋ ಜನ. ಬೆಳಗ್ಗೆ 6.30ರಿಂದಲೇ ಗುಂಪು-ಗುಂಪಾಗಿ ಜನರ ಆಗಮನ. ಮ್ಯಾಟ್ ಹಾಸಿಕೊಂಡು ಸಾಲಾಗಿ ಕುಳಿತು ಯೋಗಾಭ್ಯಾಸದಲ್ಲಿ ತಲ್ಲೀನ. ವಿವಿಧ ಭಂಗಿಗಳಲ್ಲಿ ಹೊರಹೊಮ್ಮಿದ ಪ್ರದರ್ಶನ.

    ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ, ಶಿಕ್ಷಣ, ಆಯುಷ್ ಇಲಾಖೆ ಸೇರಿ ಜಿಲ್ಲೆಯ ಹಲವು ಯೋಗ ಸಂಸ್ಥೆಗಳ ವತಿಯಿಂದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಯೋಗಥಾನ್ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

    ವಿದ್ಯಾರ್ಥಿಗಳು, ಹಿರಿಯರು, ಕಿರಿಯರು ಎಂಬ ವಯಸ್ಸಿನ ಬೇಧವಿಲ್ಲದೆ, ಅನೇಕರು ಮಾರ್ಗದರ್ಶಕರು ಸೂಚಿಸಿದಂತೆ ಯೋಗಾಭ್ಯಾಸದಲ್ಲಿ ನಿರತರಾದರು. ಕಣ್ಣಾಯಿಸಿದಷ್ಟು ದೂರ ಜನವೋ ಜನ.

    ‘ಓಂ’ ಪ್ರಾರ್ಥನೆಯೊಂದಿಗೆ ಯೋಗಥಾನ್ ಆರಂಭವಾಯಿತು. ಕತ್ತು, ಭುಜ, ಸೊಂಟ, ಮೊಣಕಾಲು ಚಲನೆಯ ಸೂಕ್ಷ್ಮ ವ್ಯಾಯಾಮ ಪ್ರದರ್ಶಿಸಿದರು. ನಿಂತು ಮಾಡುವ ಆಸನಗಳಾದ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ ಆಕರ್ಷಿಸಿದವು.

    ಕುಳಿತು ಮಾಡುವ ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉತ್ಪಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಲಟಾಸನ, ಸೇತು ಬಂಧಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ ಪ್ರದರ್ಶಿಸಲಾಯಿತು.

    ಕಪಾಲಭಾತಿ, ಪ್ರಾಣಾಯಾಮ, ನಾಡಿಶೋಧ, ಅನುಲೋಮ-ವಿಲೋಮ, ಶೀತಳಿ, ಭ್ರಾಮರಿ, ಧ್ಯಾನ, ಸಂಕಲ್ಪ ಹಾಗೂ ಶಾಂತಿ ಪಾಠದೊಂದಿಗೆ ಮುಕ್ತಾಯಗೊಂಡಿತು.
    ಶಾಲಾ-ಕಾಲೇಜುಗಳಲ್ಲಿಯೇ ಒಂದು ವಾರಗಳ ಕಾಲ ಯೋಗ ಶಿಕ್ಷಕರಿಂದ ತರಬೇತಿ ನೀಡಿದ್ದರಿಂದ ಯೋಗಥಾನ್‌ದಲ್ಲಿ ವಿದ್ಯಾರ್ಥಿಗಳು ಸುಲಲಿತವಾಗಿ ಯೋಗ ಪ್ರದರ್ಶನ ನೀಡಿದರು. 8 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

    ಯೋಗ ಗುರು ಚಿನ್ಮಯಾನಂದ, ತರಬೇತುದಾರರಾದ ಶ್ರೀನಿವಾಸ್, ತಿಪ್ಪೇಸ್ವಾಮಿ, ಕೆಂಚವೀರಪ್ಪ, ಸುನೀತಾ, ರವಿ ಅಂಬೇಕರ್, ಯಶೋಧಾ, ಲಲಿತಾ ಬೇದ್ರೆ, ವೀರೇಶ್, ಕೃಷ್ಣಮೂರ್ತಿ ಮಾರ್ಗದರ್ಶನ ನೀಡಿದರು.

    ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಗದೀಶ್, ಡಾ.ಟಿ.ಶಿವಕುಮಾರ್, ಡಿಡಿಪಿಐ ರವಿಶಂಕರ್‌ರೆಡ್ಡಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ ಹಾಗೂ ಜಿಲ್ಲೆಯ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    *ಕೋಟ್
    ನಿರ್ದಿಷ್ಟ ಗುರಿ ತಲುಪಲು ಅಥವಾ ಯಾವುದೇ ವಿಷಯದ ಕುರಿತು ಕೇಂದ್ರಿಕರಿಸಲು ದೇಹ, ಮನಸ್ಸು, ಆತ್ಮ ಒಂದಾಗಿರಬೇಕು. ಇದು ಯೋಗ, ಧ್ಯಾನದಿಂದ ಮಾತ್ರ ಸಾಧ್ಯ. ಯೋಗವೆಂಬುದು ಕೇವಲ ಆಸನವಲ್ಲ, ಅದೊಂದು ಅದ್ಬುತ ಶಕ್ತಿ.
    ದಿವ್ಯಾಪ್ರಭು ಜಿಲ್ಲಾಧಿಕಾರಿ

    *ಕೋಟ್
    ದೇಹ ದಂಡಿಸಿ ಆರೋಗ್ಯ ಕಾಪಾಡಿಕೊಳ್ಳಲು, ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಯೋಗ ಸಹಕಾರಿ. ಎಲ್ಲರೂ ನಿತ್ಯ ಯೋಗಾಭ್ಯಾಸ ಮಾಡುವುದರಿಂದ ನೆಮ್ಮದಿ ಕಾಣಬಹುದು. ಏಕಾಗ್ರತೆ, ನವೋಲ್ಲಾಸದಿಂದ ಕೆಲಸ ಆರಂಭಿಸಬಹುದು.
    ಎಂ.ಎಸ್.ದಿವಾಕರ್ ಜಿಪಂ ಸಿಇಒ

    ಪ್ರಥಮ, ದ್ವಿತೀಯ ಬಹುಮಾನ
    ಯೋಗಥಾನ್‌ನಲ್ಲಿ ಅತಿ ಹೆಚ್ಚು ವಿದ್ಯಾರ್ಥಿನಿಯರು ನೋಂದಣಿ ಮಾಡಿಸಿದ್ದು, ಪ್ರದರ್ಶನ ನೀಡಿದ್ದಕ್ಕಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಥಮ ಹಾಗೂ ಸಂತ ಜೋಸೆಫರ ಕಾನ್ವೆಂಟ್ ಶಾಲೆ ಪ್ರೌಢಶಾಲಾ ವಿಭಾಗ ದ್ವಿತೀಯ ಬಹುಮಾನ ಪಡೆಯಿತು. ವಿಜೇತರಿಗೆ ಜಿಲ್ಲಾಧಿಕಾರಿ ಶೀಲ್ಡ್ ವಿತರಿಸಿದರು.

    ಸ್ಕಾೃನ್ ಆಗದ ಕ್ಯುಆರ್ ಕೋಡ್
    ಯೋಗದಲ್ಲಿ ಭಾಗವಹಿಸುವವರ ಗಣತಿಗಾಗಿ ಹೆಸರು ನೋಂದಾಯಿಸಿದ ಎಲ್ಲರಿಗೂ ಕ್ಯುಆರ್ ಕೋಡ್ ಕಳಿಸಲಾಗಿತ್ತು. ಆದರೆ, ಕ್ರೀಡಾಂಗಣ ಪ್ರವೇಶಿಸುವ ಮುನ್ನ ಕ್ಯುಆರ್ ಕೋಡ್ ಸ್ಕಾೃನ್ ಮಾಡಿದಾಗ ಅದು ಕೆಲಸ ಮಾಡದೆ ಆಯೋಜಕರು ಪೇಚಿಗೆ ಸಿಲುಕಿದರು. ಕೊನೆಗೆ ಹಾಗೆಯೇ ಒಳಗೆ ಬಿಡಲಾಯಿತು. ಹೆಣ್ಣು ಮಕ್ಕಳ ಸಂಖ್ಯೆ ಅಧಿಕವಾಗಿತ್ತು. ಆಯುಷ್ ಮತ್ತು ಕ್ರೀಡಾ ಇಲಾಖೆ ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿತ್ತು. ಹೀಗಾಗಿ ಮೆಚ್ಚುಗೆಗೆ ಪಾತ್ರವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts