More

    ಯೇಸು ಪ್ರತಿಮೆ ನಿರ್ಮಾಣ ನಿರ್ಧಾರ, ಡಿಕೆಶಿ ಭವಿಷ್ಯಕ್ಕೆ ಸಂಚಕಾರ

    ಕನಕಪುರ: ಹಾರೋಬೆಲೆ ಡ್ಯಾಂ ಸಮೀಪದ ಕಪಾಲ ಬೆಟ್ಟದಲ್ಲಿ ಯೇಸುಕ್ರಿಸ್ತನ ಪ್ರತಿಮೆ ನಿರ್ಮಿಸಲು ಅವಕಾಶ ನೀಡಿರುವುದು ಹಿಂದು ಸಂಸ್ಕೃತಿ ನಾಶಕ್ಕೆ ಮುನ್ನುಡಿ ಬರೆದಂತಿದೆ. ಕಪಾಲ ಎನ್ನುವುದು ಶಿವನ ಮತ್ತೊಂದು ಹೆಸರು. ಕಪಾಲೇಶ್ವರನ ಈ ಪ್ರದೇಶದಲ್ಲಿ ಯೇಸು ಪ್ರತಿಮೆ ನಿರ್ಮಾಣ ನಿರ್ಧಾರವನ್ನು ಶಾಸಕ ಡಿ.ಕೆ.ಶಿವಕುಮಾರ್ ಕೈಬಿಡಬೇಕು. ಇಲ್ಲದಿದ್ದರೆ ಡಿಕೆಶಿ ರಾಜಕೀಯವಾಗಿ ಸಂಕಷ್ಟ ಅನುಭವಿಸುವುದು ಖಚಿತ ಎಂದು ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಭವಿಷ್ಯ ನುಡಿದರು.

    ಹಾರೋಬೆಲೆ ವಿವಾದಿತ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿ, ಸನಾತನ ಕಾಲದಿಂದಲೂ ಕಪಾಲೇಶ್ವರ ಬೆಟ್ಟದ ಬುಡದ ಸುತ್ತಮುತ್ತ ಹಿಂದುಗಳು ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇದು ಸರ್ಕಾರಿ ಗೋಮಾಳದ ಜಾಗ. ಜನ-ಜಾನುವಾರುಗಳಿಗೆ ಮೀಸಲಿಟ್ಟ ಜಾಗವನ್ನು ವಿವಾದಾತ್ಮಕ ಪ್ರದೇಶವನ್ನಾಗಿಸಲಾಗಿದೆ. ಗೋಮಾಳವನ್ನು ಕ್ರೈಸ್ತ ಮಿಷನರಿಗೆ ನೀಡಿ ಹಿಂದುಗಳ ಭಾವನೆಗೆ ಧಕ್ಕೆ ತರಲು ಮುಂದಾಗಿರುವುದು ವಿಪರ್ಯಾಸ ಎಂದು ಬೇಸರಿಸಿದರು.

    ಮೈಸೂರು ಎನ್.ಶುಭಶ್ರೀ, ವಕೀಲೆ ತನುಜಾ ಮಹೇಶ್, ಪಿರಿಯಾಪಟ್ಟಣ ನಳಿನಿ, ಕುಮಾರ್, ಮಧುಶಂಕರ್, ರಾಮನಗರದ ರಾಜಶೇಖರ್, ಮೋಹನ್ ಇದ್ದರು.

    ಕಪಾಲ ಬೆಟ್ಟಕ್ಕೆ ಪಾದಯಾತ್ರೆ: ರಾಜ್ಯ ಸರ್ಕಾರ ಹಿಂದು ನೆಲದ ಒಂದಿಂಚೂ ಭೂಮಿಯನ್ನು ವಿದೇಶಿ ಮಿಷನರಿಗೆ ನೀಡಲು ಅವಕಾಶ ನೀಡಕೂಡದು. ಈಗಾಗಲೇ ಕಪಾಲಬೆಟ್ಟ ಪ್ರದೇಶವನ್ನು ಮಂಜೂರು ಮಾಡಿದ್ದಾರೆ. ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಹಿಂದು ಧರ್ಮೀಯರು ಹೋರಾಟ ಮಾಡುವುದು ಅನಿವಾರ್ಯ ಎಂದು ರಿಷಿಕುಮಾರ ಸ್ವಾಮೀಜಿ ಎಚ್ಚರಿಸಿದರು. ಜನವರಿ 9 ರೊಳಗಾಗಿ ಹಿಂದು ವಿರೋಧಿ ಧೋರಣೆಗಳನ್ನು ನಿಲ್ಲಿಸದಿದ್ದರೆ, ಬೆಂಗಳೂರಿನಿಂದ ಕಪಾಲಬೆಟ್ಟಕ್ಕೆ ಪಾದಯಾತ್ರೆ ನಡೆಸಲಾಗುವುದು ಎಂದರು.

    ನಿರ್ಧಾರ ವಾಪಸ್ ಪಡೆಯಲಿ: ದೇಶದಲ್ಲಿ ಶ್ರವಣಬೆಳಗೊಳ ಗೊಮ್ಮಟೇಶ್ವರ ಏಕಶಿಲಾ ವಿಗ್ರಹವು ವಿಶ್ವ ಗಿನ್ನಿಸ್ ದಾಖಲೆಯಲ್ಲಿದೆ. ಆದರೆ, ಈ ಪ್ರದೇಶದಲ್ಲಿ ಅದಕ್ಕೂ ಎತ್ತರದ ಯೇಸು ವಿಗ್ರಹ ಸ್ಥಾಪಿಸಿ ನಮ್ಮ ಗಿನ್ನಿಸ್ ದಾಖಲೆ ಮುರಿಯಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಯೇಸು ವಿಗ್ರಹ ಸ್ಥಾಪನೆಯಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಸುತ್ತಮುತ್ತಲಿನ ಪರಿಸರ ಹಾಗೂ ಹಿಂದೂ ಧರ್ಮದ ಮೇಲೆ ದುಷ್ಪರಿಣಾಮ ಬೀರುವುದು ಖಚಿತ ಎಂದು ರಿಷಿಕುಮಾರ ಸ್ವಾಮೀಜಿ ತಿಳಿಸಿದರು. ಸುತ್ತಮುತ್ತ ಮಲೈ ಮಹದೇಶ್ವರ ಬೆಟ್ಟ, ಶಿವಗಿರಿ ಬೆಟ್ಟ, ಕಬ್ಬಾಳಮ್ಮ ಬೆಟ್ಟ, ಬಸವನ ಬೆಟ್ಟ, ಬಿಳಿಗಿರಿ ರಂಗನಾಥ ಬೆಟ್ಟ, ಹೊಸದುರ್ಗ ರಾಮದೇವರ ಬೆಟ್ಟ ಹೀಗೆ ಹಲವಾರು ದೇವಾಲಯಗಳ ಸಂಗಮವೇ ಇದೆ. ಯೇಸು ವಿಗ್ರಹ ಸ್ಥಾಪನೆಯಿಂದ ಹಿಂದು ಧರ್ಮ ಹಾಗೂ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುವುದು ಖಚಿತ. ಶಾಸಕ ಡಿ.ಕೆ.ಶಿವಕುಮಾರ್ ತಮ್ಮ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts