More

    ಯೆಸ್​ ಬ್ಯಾಂಕ್​ನಿಂದ 1,300 ಕೋಟಿ ರೂಪಾಯಿಯನ್ನು ಟಿಟಿಡಿ ಕೆಲವು ತಿಂಗಳ ಹಿಂದೆಯೇ ಹಿಂಪಡೆದುದೇಕೆ?

    ತಿರುಮಲ: ದಿವಾಳಿ ಸ್ಥಿತಿಗೆ ತಲುಪಿದ ಯೆಸ್​ ಬ್ಯಾಂಕ್​ನಲ್ಲಿ ಇರಿಸಿದ್ದ 1,300 ಕೋಟಿ ರೂಪಾಯಿ ಠೇವಣಿಯನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕೆಲವು ತಿಂಗಳ ಹಿಂದೆಯೇ ಹಿಂಪಡೆದಿತ್ತು ಎಂಬ ಅಂಶ ಶುಕ್ರವಾರ ಬೆಳಕಿಗೆ ಬಂದಿದೆ. ಟಿಟಿಡಿಯ ಈ ನಡೆಯ ಬಗ್ಗೆ ಈಗ ವ್ಯಾಪಕ ಚರ್ಚೆ ಶುರುವಾಗಿದ್ದು, ದೇಶದ ಗಮನಸೆಳೆದಿದೆ.

    ಕಳೆದ ವರ್ಷದ ಅಕ್ಟೋಬರ್​ನಲ್ಲಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಟಿಟಿಡಿ ಆಡಳಿತ ಮಂಡಳಿಯ ಸಭೆಯಲ್ಲಿ ಯೆಸ್​ ಬ್ಯಾಂಕ್​ನಲ್ಲಿ ಇಟ್ಟಿದ್ದ 1,300 ಕೋಟಿ ರೂಪಾಯಿ ಹಣವನ್ನು ಹಿಂಪಡೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

    ದೇವಾಲಯದಿಂದ ಸಂಗ್ರಹವಾಗುವ ಹಣವನ್ನು ಟಿಟಿಡಿ ಚಂದ್ರಬಾಬು ನಾಯ್ಡು ಸರ್ಕಾರದ ಅವಧಿಯಲ್ಲಿ ಯೆಸ್​ ಬ್ಯಾಂಕ್​ ಸೇರಿದಂತೆ ಇತರ ನಾಲ್ಕು ಬ್ಯಾಂಕ್​ಗಳಲ್ಲಿ ಹಣವನ್ನು ಠೇವಣಿ ಇಟ್ಟಿತ್ತು. ಠೇವಣಿ ಇಟ್ಟಿರುವ ಬ್ಯಾಂಕುಗಳ ಆರ್ಥಿಕ ವಹಿವಾಟುಗಳ ಬಗ್ಗೆ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅವರು ರಹಸ್ಯವಾಗಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಯೆಸ್ ಬ್ಯಾಂಕ್ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಅವರು ಆಡಳಿತ ಮಂಡಳಿ ಸಭೆ ನಡೆಸಿ ಮುಖ್ಯಮಂತ್ರಿ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಅವರಿಗೆ ಮಾಹಿತಿ ನೀಡಿ ಠೇವಣಿ ಹಣ ಹಿಂದಕ್ಕೆ ಪಡೆದಿದ್ದರು.

    ದೊಡ್ಡಮೊತ್ತದ ಠೇವಣಿ ಹಣವನ್ನು ಹಿಂದಕ್ಕೆ ಪಡೆಯುವ ವೇಳೆ ಯಸ್​ ಬ್ಯಾಂಕ್​ ಆಡಳಿತ ಟಿಟಿಡಿ ಮೇಲೆ ತೀವ್ರ ಒತ್ತಡ ಹಾಕಿತ್ತು. ಒತ್ತಡದ ನಡುವೆಯೂ ಅವರು ಠೇವಣಿ ಹಿಂದಕ್ಕೆ ಪಡೆದು ಹಣ ಉಳಿಸಿದ್ದಾರೆ ಎನ್ನುವ ಪ್ರಶಂಸೆ ವ್ಯಕ್ತವಾಗಿದೆ.

    ಯೆಸ್​ ಬ್ಯಾಂಕ್​ ದಿವಾಳಿಯಾಗುವ ಸಣ್ಣ ಸೂಚನೆ ಸಿಗುತ್ತಲೇ ಟಿಟಿಡಿ ಅಧ್ಯಕ್ಷರು ತಮ್ಮ ದೂರದೃಷ್ಟಿಯಿಂದ ದೇವಾಲಯ ಠೇವಣಿ ಹಣವನ್ನು ಹಿಂದಕ್ಕೆ ಪಡೆದು ಉತ್ತಮ ಕೆಲಸ ಮಾಡಿದ್ದಾರೆ ಎಂದು ಆಂಧ್ರಪ್ರದೇಶ ಸರ್ಕಾರದ ಸಲಹೆಗಾರ ಎಸ್​.ರಾಜೀವ್​ ಕೃಷ್ಣ ಅವರು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts