More

    ಕೈಕೊಟ್ಟ ಮಳೆ, ತೋಟದ ಬೆಳೆಗೆ ಟ್ಯಾಂಕರ್ ನೀರು!

    ಯಳಂದೂರು: ಪ್ರಸಕ್ತ ಸಾಲಿನಲ್ಲಿ ಮಳೆಯಾಗದ ಕಾರಣ ರೈತರು ತಮ್ಮ ಬೆಳೆಗಳಿಗೆ ನೀರುಣಿಸಲಾಗದೆ ಕಂಗಲಾಗಿದ್ದಾರೆ. ಜಿಲ್ಲೆಯಲ್ಲೇ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಯಳಂದೂರು ತಾಲೂಕಿಗೆ ಬರದ ಛಾಯೆ ಇನ್ನೂ ಮರೆಯಾಗಿಲ್ಲ. ಕಳೆದ ವಾರದಿಂದ ಮಳೆಯಾಗುತ್ತಿದ್ದರೂ ಇದು ಬೆಳೆಗಳಿಗೆ ಸಾಕಾಗುತ್ತಿಲ್ಲ. ರೈತರು ತಮ್ಮ ಬೆಳೆಗಳನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಇದರಿಂದ ತೋಟಗಾರಿಕಾ ಬೆಳೆಗಳೂ ಹೊರತಾಗಿಲ್ಲ. ಹಾಗಾಗಿ, ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ.

    ತಾಲೂಕಿನ ಯರಿಯೂರು ಗ್ರಾಮದ ರೈತ ಮಹದೇವಶೆಟ್ಟಿ ಯರಿಯೂರು ಕೆರೆಯ ಬಳಿ ಅರ್ಧ ಎಕರೆ ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಇದರಲ್ಲಿ ತೆಂಗು, ಬಾಳೆ, ಅಡಿಕೆ ಬೆಳೆದಿದ್ದಾರೆ. ಇದರಲ್ಲಿ ತೆಂಗಿನ ಮರಗಳು ಫಸಲು ಕೊಡುತ್ತಿವೆ, ಬಾಳೆ ಗಿಡಗಳು ಗೊನೆಯನ್ನು ಬಿಟ್ಟಿವೆ. ಪಕ್ಕದಲ್ಲಿದ್ದ ಯರಿಯೂರು ಕೆರೆಯ ನೀರು ಇವರಿಗೆ ಆಶ್ರಯವಾಗಿತ್ತು. ಇವರ ಜಮೀನಿನ ಬಳಿಯೇ ಕಾಲುವೆ ಇದ್ದು ನಿರಂತರವಾಗಿ ನೀರು ಹರಿಯುತ್ತಿತ್ತು. ಈ ನೀರನ್ನೇ ಬಳಸಿಕೊಂಡು ಇವರು ತಮ್ಮ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಇದೀಗ ಕೆರೆ ಬತ್ತಿದೆ. 750 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಈ ಕೆರೆಯ ನೀರನ್ನೇ ನೆಚ್ಚಿಕೊಂಡಿದ್ದ ಯರಿಯೂರು, ಕೆಸ್ತೂರು, ಮದ್ದೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ಕಂಗಾಲಾಗಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ಇವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

    ಒಣಗುತ್ತಿವೆ ತೋಟಗಾರಿಕೆ ಬೆಳೆಗಳು:
    ಮಹದೇವಶೆಟ್ಟಿ ಸಣ್ಣ ರೈತರಾಗಿದ್ದಾರೆ. ಈ ಜಮೀನನ್ನೇ ನಂಬಿ ಜೀವನವನ್ನು ಕಟ್ಟಿಕೊಂಡಿದ್ದಾರೆ. ಕಳೆದ ಫೆಬ್ರವರಿಯಿಂದಲೇ ಕೆರೆಯಲ್ಲಿ ನೀರು ಕಡಿಮೆಯಾಗುತ್ತಾ ಬಂದಿದೆ. ತಮ್ಮ ಜಮೀನಿನಲ್ಲಿ ಹಾಕಿದ್ದ ತೆಂಗು, ಬಾಳೆ, ಅಡಿಕೆ ಗಿಡಗಳು ಬಾಡುತ್ತಿದ್ದು, ಇದರ ಗರಿಗಳು, ಎಲೆಗಳು ಒಣಗುತ್ತಿದ್ದವು. ಇದನ್ನು ಕಂಡ ಮಹದೇವಶೆಟ್ಟಿ ತಾವು ಕಷ್ಟಪಟ್ಟು ವರ್ಷಗಳಿಂದ ಕಾಯ್ದುಕೊಂಡಿರುವ ಮರಗಳನ್ನು ಸಂರಕ್ಷಿಸಿಕೊಳ್ಳುವ ಸಲುವಾಗಿ ಫೆಬ್ರವರಿಯಿಂದಲೇ ಟ್ಯಾಂಕರ್ ಮೂಲಕ ನೀರನ್ನು ಉಣಿಸುತ್ತಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ತಮ್ಮ ಇಡೀ ತೋಟಕ್ಕೆ ನೀರುಣಿಸುತ್ತಿದ್ದು ಅಪಾರ ಹಣ ನೀರಿಗಾಗಿ ವ್ಯಯವಾಗುತ್ತಿದೆ. ಆದರೆ, ಮುಂಗಾರಿನ ಹಂಗಾಮಿನಲ್ಲಿ ಉತ್ತಮ ಮಳೆಯಾಗಿ ಕೆರೆ ತುಂಬುತ್ತದೆ. ಇದರಿಂದ ನಮ್ಮ ಗಿಡ, ಮರಗಳಿಗೆ ಮುಂದೆ ಅನುಕೂಲವಾಗಲಿದೆ ಎಂಬ ಅಚಲ ವಿಶ್ವಾಸ ಹೊಂದಿ, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ.
    ತಾಲೂಕಿಗೆ ಮಳೆ ಪ್ರಮಾಣ ಕಡಿಮೆ: ಜಿಲ್ಲೆಯ ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಕೊಳ್ಳೇಗಾಲ ತಾಲೂಕಿನ ಸುತ್ತಮುತ್ತಲ್ಲಿನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಆದರೆ, ಯಳಂದೂರು ತಾಲೂಕಿನಲ್ಲಿ ಮಾತ್ರ ಮಳೆಯ ಇಲ್ಲದೇ, ಬರಗಾಲ ತೀವ್ರವಾಗುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳು ಸರಿಯಾದ ಪ್ರಮಾಣದಲ್ಲಿ ನೀರಿಲ್ಲದೆ ಒಣಗುತ್ತಿವೆ. ಹಾಗಾಗಿ, ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಇದು ಹೀಗೆ ಮುಂದುವರಿದರೆ ರೈತರ ಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ.

    ಕೆರೆಯ ಆಶ್ರಯದಲ್ಲೇ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಆದರೆ ಈ ಬಾರಿ ಮಳೆ ಕೈಕೊಟ್ಟಿದೆ. ಈ ಮಟ್ಟದ ನೀರಿನ ಬರವನ್ನು ನಾನು ನೋಡಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಫೆಬ್ರವರಿಯಿಂದ ಪ್ರತಿ 15 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದೇನೆ. ಒಂದು ಬಾರಿ ಇದಕ್ಕೆ 3 ಸಾವಿರ ರೂ. ನೀರಿಗಾಗಿ ಖರ್ಚು ಮಾಡುತ್ತಿದ್ದೇನೆ. ಇದಕ್ಕೆ ಅಪಾರ ಪ್ರಮಾಣದ ಹಣವನ್ನು ವ್ಯಯಿಸಿದ್ದೇನೆ. ಮಳೆ ಬಾರದಿದ್ದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ.
    ಮಹದೇವಶೆಟ್ಟಿ ರೈತ

    ತಾಲೂಕಿನಲ್ಲಿ ಈ ಬಾರಿ ಅಧಿಕ ಬಿಸಿಲಿದೆ. ಕಾಫಿ, ಕಾಳುಮೆಣಸು, ತೆಂಗು, ಅಡಕೆ, ಬಾಳೆಗೂ ಇದರ ಬಿಸಿ ತಟ್ಟಿದೆ. ಎಲೆಗಳು ಬಿಸಿಲಿಗೆ ಒಣಗಿ ಉದುರುತ್ತಿವೆ. ತೆಂಗಿಗೆ ಮರ ದೊಡ್ಡದಿದ್ದರೆ 15 ದಿನಕ್ಕೊಮ್ಮೆ ನೀರು ಸಾಕು, ಅಡಿಕೆಗೆ ಮೂರು ದಿನಕ್ಕೊಮ್ಮೆ ನೀರು ಕೊಡಬೇಕು, ಕೊಳವೆ ಬಾವಿ ಇರುವ ರೈತರು ಅಲ್ಪಸ್ವಲ್ಪ ನೀರು ನೀಡುತ್ತಿದ್ದಾರೆ. ಆದರೆ ಕೆರೆ, ಮಳೆಯನ್ನೇ ಆಶ್ರಯಿಸಿರುವ ರೈತರಿಗೆ ಕಷ್ಟವಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ ಮಂಗಳವಾರ, ಬುಧವಾರದಿಂದ ಮಳೆಯಾಗುವ ಮುನ್ಸೂಚನೆ ಲಭಿಸಿದೆ. ಮಳೆ ಬಂದರೆ ಈ ಸಮಸ್ಯೆ ಬಗೆಹರಿಯಲಿದೆ.
    ರಾಜು, ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts