More

    ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ

    ಯಳಂದೂರು : ಈ ಬಾರಿ ಲೋಕಸಭಾ ಕ್ಷೇತ್ರದ ಚುನಾವಣೆಯು ಸಂವಿಧಾನ ರಕ್ಷಣೆ ಹಾಗೂ ವಿರೋಧಿಸುವವರ ನಡುವಿನ ಹೋರಾಟವಾಗಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಮತದಾರರು ಸಂವಿಧಾನ ಪರವಾಗಿರುವ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಕೈ ಹಿಡಿಯಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಕರೆ ನೀಡಿದರು

    ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಬುಧವಾರ ಮಾಲಾರ್ಪಣೆ ಮಾಡಿ, ನಂತರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸಿ ಮಾತನಾಡಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳು ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಆಡಳಿತರೂಢ ಪಕ್ಷದವರು ಅನೇಕ ಬಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ರಾಷ್ಟ್ರದ ಐಕ್ಯತೆಯಲ್ಲಿ ಸಂವಿಧಾನದ ಪಾತ್ರ ಪ್ರಮುಖವಾಗಿದೆ. ಎಲ್ಲ ಧರ್ಮ, ಜಾತಿಯ ಜನರು ಸಹಬಾಳ್ವೆ ನಡೆಸಲು ನಮ್ಮ ಸಂವಿಧಾನ ನೀಡಿರುವ ಸವಲತ್ತುಗಳೇ ನೇರ ಕಾರಣವಾಗಿದೆ. ಇದನ್ನು ಒಂದು ವರ್ಗದವರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಇಂದು ಜಾತಿ, ಧರ್ಮಗಳ ನಡುವೆ ಬಿರುಕು ಮೂಡಿಸಿ ಇದನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ವಿಶ್ವದ ಶ್ರೇಷ್ಠ ಸಂವಿಧಾನ ಬದಲಿಸುವ ಕೆಲಸ ಮಾಡಲು ಹೊರಟಿರುವ ದೊಡ್ಡ ತಪ್ಪನ್ನು ತಪ್ಪಿಸುವ ಸಲುವಾಗಿ ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಹೇಳಿದರು.

    ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ, ದುಡಿಯುವ ಕಾರ್ಮಿಕ ವರ್ಗದವರ, ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದೆ. ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದವರು ಬಾಯಿ ಮುಚ್ಚಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದರ ಬಗ್ಗೆ ನಾವು ಜಾಗೃತಿ ಮೂಡಿಸಬೇಕು. ಈ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಸುನೀಲ್ ಬೋಸ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಕ್ಷೇತ್ರದ ಜನರು ಕೈ ಹಿಡಿಯುವ ಭರವಸೆ ನನಗಿದೆ. ಈ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿರುವ ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರು ನಮ್ಮ ಕೈ ಜೋಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಭೆ ಮುಗಿಸಿ ಹೊರ ನಡೆಯುತ್ತಿದ್ದಂತೆಯೇ ಚಾಮರಾಜನಗರ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸುನೀಲ್ ಬೋಸ್ ಭೇಟಿ ನೀಡಿ ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಕೇತಮ್ಮ, ವಡಗೆರೆ ದಾಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹದೇವನಾಯಕ, ಬಿ.ರವಿ, ಮಂಜು, ಜೆ.ಶ್ರೀನಿವಾಸ್, ಕಿನಕಹಳ್ಳಿ ಪ್ರಭುಪ್ರಸಾದ್, ಲಿಂಗರಾಜಮೂರ್ತಿ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts