More

    ಮಹಿಳೆಯರಲ್ಲಿ ವ್ಯಕ್ತಿತ್ವ ರೂಪಿಸುವ ಕೆಲಸವಾಗಲಿ

    ಯಳಂದೂರು: ಮಹಿಳಾ ಸಮುದಾಯದಲ್ಲಿ ಶಿಸ್ತುಬದ್ಧ ವ್ಯಕ್ತಿತ್ವ ರೂಪಿಸುವಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಾದರಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.


    ಚಾಮರಾಜನಗರ ತಾಲೂಕಿನ ಕಾಗಲವಾಡಿಯ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಯೋಜನೆಗೊಂಡಿದ್ದ ಕಾಗಲವಾಡಿ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.


    ಜನ ಸಮುದಾಯದಲ್ಲಿ ಸ್ತ್ರೀಯರನ್ನು ಕೇಂದ್ರೀಕರಿಸಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸರ್ಕಾರವೇ ನಿರ್ವಹಣೆ ಮಾಡಲು ಸಾಧ್ಯವಾಗದ ಅನೇಕ ಸೇವಾ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಘ ಮಾಡುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಸಾಲ ಪಡೆದು ಬದುಕು ಕಟ್ಟಿಕೊಳ್ಳುವಲ್ಲಿ ಉತ್ತಮ ಸೇವೆ ನೀಡುತ್ತಿದೆ, ಸ್ವಯಂ ಸ್ವಚ್ಛತೆಯ ಕುರಿತು, ಕುಡಿತದಿಂದ ಆರೋಗ್ಯ ಹಾಗೂ ಕುಟುಂಬದ ಮೇಲೆ ಬೀರುವ ಪರಿಣಾಮದ ಕುರಿತು ಸ್ವ ಅರಿವು ಮೂಡಿಸುವ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದರು. ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಮಾತನಾಡಿ, ಧರ್ಮಸ್ಥಳ ಸಂಘದ ಮಹಿಳಾ ಸದಸ್ಯರಿಗೆ ಯೋಜನೆಯಿಂದ ಕುಟುಂಬ ನಿರ್ವಹಣೆ ಸುಲಭವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


    ಸಂಘದ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ ಮಾತನಾಡಿ, ಒಕ್ಕೂಟದಿಂದ ನಿರಾಶ್ರಿತರಿಗೆ ಮಾಸಾಶನ ನೀಡುವುದು, ಮದ್ಯಪಾನ ಚಟ ಬಿಡಿಸುವುದು ಇತ್ಯಾದಿ ಚಟುವಟಿ ನಡೆಸುತ್ತಿರುವುದು ಕುಟುಂಬದ ಮೇಲೆ
    ಧನಾತ್ಮಕ ಪರಿಣಾಮ ಬೀರಿದೆ ಎಂದರು. ಯೋಜನಾಧಿಕಾರಿ ಪ್ರವೀಣ್, ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ, ವಲಯ ಮೇಲ್ವಿಚಾರಕಿ ಲಕ್ಷ್ಮೀದೇವಿ, ಮೇಲ್ವಿಚಾರಕರಾದ ಪ್ರವೀಣ್, ಶ್ರೀನಿವಾಸ್, ರಂಜಿತಾ ಮತ್ತು ಸೇವಾ ಪ್ರತಿನಿಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts