More

    ಧಾರಾಕಾರ ಮಳೆಗೆ ಮನೆ ಕುಸಿತ, ಬೆಳೆ ಹಾನಿ

    ಯಲಬುರ್ಗಾ: ಸತತ ಸುರಿಯುತ್ತಿರುವ ಮಳೆಯಿಂದ ಪಟ್ಟಣ ಸೇರಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಮನೆ ಕುಸಿತ, ಬೆಳೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ತಾಲೂಕಿನಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಹಳೆಯ ಮಣ್ಣಿನ ಮನೆಗಳು ಅತಿಯಾದ ತೇವಾಂಶದಿಂದ ಕುಸಿಯುತ್ತಿವೆ. ಇದರಿಂದ ಸಂತ್ರಸ್ತರು ಸಮಸ್ಯೆ ಎದುರಿಸುವಂತಾಗಿದೆ. ಸೆ.28 ರಿಂದ ಅ.11ರ ವರೆಗೆ ಒಟ್ಟು 161 ಮನೆಗಳು ಭಾಗಶಃ ಕುಸಿದಿವೆ. ಕಂದಾಯ, ಗ್ರಾಪಂ ಹಾಗೂ ಪಿಆರ್‌ಇಡಿ ಇಲಾಖೆ ಅಧಿಕಾರಿಗಳಿಂದ 90ಕ್ಕೂ ಅಧಿಕ ಮನೆಗಳ ಜಂಟಿ ಸಮೀಕ್ಷೆ ನಡೆಸಲಾಗಿದೆ. ಸಂತ್ರಸ್ತರಿಗೆ ಕಂದಾಯ ಇಲಾಖೆಯಿಂದ ಪರಿಹಾರ ವಿತರಣೆ ಕಾರ್ಯ ಕೈಗೊಳ್ಳಲಾಗಿದೆ.

    ಪರಿಹಾರ ಜಮೆ: ಕಳೆದ ಎರಡು ದಿನಗಳ ಹಿಂದೆ ವಜ್ರಬಂಡಿ ಮತ್ತು ವಣಗೇರಿ ಗ್ರಾಮದಲ್ಲಿ ತಲಾ ಒಂದು ಜಾನುವಾರು ಪ್ರಾಣ ಹಾನಿಯಾಗಿದ್ದು, ಎಸ್‌ಡಿಆರ್‌ಎಫ್-ಎನ್‌ಡಿಆರ್‌ಎಫ್ ಮಾರ್ಗಸೂಚಿಯಡಿ ತಾಲೂಕು ಆಡಳಿತದಿಂದ ರೈತರ ಖಾತೆಗೆ ಪರಿಹಾರ ಜಮೆ ಮಾಡಲಾಗಿದೆ.

    ತೋಟಗಾರಿಕೆ, ಕೃಷಿ ಬೆಳೆ ಹಾನಿ: ತಾಲೂಕಿನಲ್ಲಿ ಸತತ ಸುರಿಯುತ್ತಿರುವ ಮಳೆಗೆ 4.30 ಹೆಕ್ಟೇರ್ ತೋಟಗಾರಿಕೆ ಬೆಳೆ, 25 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿರುವ ವರದಿಯಾಗಿದೆ. ಸ್ಥಳಕ್ಕೆ ಕೃಷಿ ಹಾಗೂ ತೋಟಗಾರಿಕೆ ಸಹಾಯಕ ನಿರ್ದೇಶಕರು, ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬೆಳೆಹಾನಿ ಸಮೀಕ್ಷೆ ನಡೆಸಿ, ತಾಲೂಕು ಆಡಳಿತಕ್ಕೆ ಮಾಹಿತಿ ಸಲ್ಲಿಸಿದ್ದು, ಬೆಳೆನಷ್ಟ ಪರಿಹಾರ ತಂತ್ರಾಂಶದಲ್ಲಿ ಹಾನಿಯಾದ ಬೆಳೆಯ ಕುರಿತು ಡಾಟಾ ಎಂಟ್ರಿ ಮಾಡಲಾಗಿದೆ ಎಂದು ತಹಸೀಲ್ ಕಚೇರಿ ಮಾಹಿತಿ ನೀಡಿದೆ.

    ಸಜ್ಜೆ, ಮೆಕ್ಕೆಜೋಳ ಹಾನಿ: ತಾಲೂಕಿನ ಕೆಲ ಕಡೆ ರೈತರು ರಸ್ತೆ ಮೇಲೆ ಮೆಕ್ಕೆಜೋಳ, ಸಜ್ಜೆ ಒಕ್ಕಣೆ ನಡೆಸುತ್ತಿದ್ದು, ಮಳೆಗೆ ದವಸ, ಧಾನ್ಯ ಹಾಳಾಗಿದೆ. ಇದರಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ಸುರಿಯುತ್ತಿರುವ ಮಳೆಯಿಂದಾಗಿ ಭೂಮಿ ಅತಿಯಾದ ತೇವಾಂಶ ಇರುವುದರಿಂದ ರೈತರಿಗೆ ಯರೆ ಭಾಗದಲ್ಲಿ ಹಿಂಗಾರು ಬಿತ್ತನೆಗೆ ಹಿನ್ನೆಡೆಯಾಗುವ ಆತಂಕ ಎದುರಾಗಿದೆ.

    ತಹಸೀಲ್ದಾರ್ ಮನವಿ: ನಿತ್ಯ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ನಾನಾ ಭಾಗಗಳಲ್ಲಿ ಹಳ್ಳ ತುಂಬಿ ಹರಿಯುತ್ತಿವೆ. ರೈತರು, ಸಾರ್ವಜನಿಕರು ದಾಟುವ ಪ್ರಯತ್ನ ಮಾಡಬಾರದು ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ಮನವಿ ಮಾಡಿದ್ದಾರೆ.

    ಸತತ ಸುರಿಯುತ್ತಿರುವ ಮಳೆಯಿಂದ ಹಳೆಯ ಮಣ್ಣಿನ ಮನೆಗಳ ಕುಸಿತ, ತೋಟಗಾರಿಕೆ, ಕೃಷಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆದಿದ್ದು, ಶೇ.80 ರಷ್ಟು ತಾಲೂಕು ಆಡಳಿತಕ್ಕೆ ವರದಿ ಸಲ್ಲಿಕೆಯಾಗಿವೆ. ಎಸ್‌ಡಿಆರ್‌ಎಫ್ ಮಾರ್ಗಸೂಚಿಯಡಿ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯ ನಡೆದಿದೆ. ತೋಟಗಾರಿಕೆ, ಕೃಷಿ ಬೆಳೆ ಹಾನಿ ಕುರಿತು ಬೆಳೆ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗಿದೆ.
    | ಶ್ರೀಶೈಲ ತಳವಾರ, ತಹಸೀಲ್ದಾರ್, ಯಲಬುರ್ಗಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts