More

    ಇಲಾಖೆಗಳ ಕ್ರಿಯಾಯೋಜನೆ ಶೀಘ್ರ ಸಲ್ಲಿಸಿ: ಜಿಪಂ ಉಪಕಾರ್ಯದರ್ಶಿ ಶರಣಬಸವರಾಜ ತಾಕೀತು

    ಯಲಬುರ್ಗಾ: ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಶೀಘ್ರವೇ ಕ್ರಿಯಾಯೋಜನೆ ವರದಿ ಸಲ್ಲಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪಕಾರ್ಯದರ್ಶಿ ಶರಣಬಸವರಾಜ ತಾಕೀತು ಮಾಡಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ಮಾತನಾಡಿದರು. ಸರ್ಕಾರಕ್ಕೆ ಕಳಿಸಬೇಕಿದ್ದರಿಂದ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಎಲ್ಲ ಇಲಾಖೆಗಳ ಕ್ರಿಯಾಯೋಜನೆ ವರದಿ ಕಡ್ಡಾಯವಾಗಿ ತಾಪಂಗೆ ಸಲ್ಲಿಸಬೇಕು. ವಿಳಂಬವಾದರೆ ಕ್ರಮ ಕೈಗೊಳ್ಳಲಾಗುವುದು. ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ವೇಳೆಗೆ ಪೂರ್ಣಗೊಳಿಸಬೇಕೆಂದು ಎಚ್ಚರಿದರು.

    ಮಳೆಗಾಲ ಆರಂಭವಾಗಿದ್ದು, ಕುಡಿವ ನೀರು ಸೇರಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ನರೇಗಾ ಯೋಜನೆಯಡಿ ಅಂಗನವಾಡಿಗಳಿಗೆ ಕಾಂಪೌಂಡ್ ನಿರ್ಮಾಣ ಮತ್ತು ಮೂಲಸೌಕರ್ಯ ಕಲ್ಪಿಸಲು ಅವಕಾಶವಿದ್ದು ಗ್ರಾಪಂ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಸಂತೋಷ್ ಬಿರಾದಾರ್‌ಗೆ ಸೂಚಿಸಿದರು.

    ಮಳಿಗೆಗಳ ಮರು ಟೆಂಡರ್‌ಗೆ ಸೂಚನೆ: ಪಟ್ಟಣದ ತಾಪಂ ಕಚೇರಿ ಮುಂದಿರುವ ವಾಣಿಜ್ಯ ಮಳಿಗೆಗಳನ್ನು ದುರಸ್ತಿಗೊಳಿಸಿ ಮರು ಟೆಂಡರ್ ಕರೆಯುವಂತೆ ಇಒಗೆ ಶರಣಬಸವರಾಜ ಸೂಚಿಸಿದರು. ತಾಪಂ ಇಒ ಸಂತೋಷ್ ಬಿರಾದಾರ ಮಾತನಾಡಿ, ತಾಲೂಕಿನ ವಿವಿಧೆಡೆ ಜೆಜೆಎಂ ಕಾಮಗಾರಿಗಳು ಅಪೂರ್ಣಗೊಂಡ ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮಳೆಗಾಲದಲ್ಲಿ ಸಮಸ್ಯೆ ಉಂಟಾಗಲಿದ್ದು, ಕೂಡಲೇ ಪರಿಹರಿಸುವಂತೆ ಆರ್‌ಡಬ್ಲುೃಎಸ್ ಇಲಾಖೆ ಎಇಇ ಸತೀಶ್ ಪಾಟೀಲ್‌ಗೆ ಸೂಚಿಸಿದರು. ಇದಕ್ಕೆ ಸತೀಶ್ ಪಾಟೀಲ್ ಪ್ರತಿಕ್ರಿಯಿಸಿ, ಸಮಸ್ಯೆ ಇರುವ ಕಡೆ ಭೇಟಿ ನೀಡಿ ನಲ್ಲಿಗಳ ಸೋರಿಕೆ ತಡೆಗಟ್ಟುವಂತೆ ಗುತ್ತಿಗೆದಾರರಿಗೆ ತಿಳಿಸಲಾಗುವುದು. ತ್ವರಿಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಕುಕುನೂರು ತಾಪಂ ಪ್ರಭಾರ ಇಒ ರಾಮಣ್ಣ ದೊಡ್ಡಮನಿ, ಅಧಿಕಾರಿಗಳಾದ ಪ್ರಾಣೇಶ ಹಾದಿಮನಿ, ಎಫ್.ಎಂ.ಕಳ್ಳಿ, ಅಶೋಕ ಛಲವಾದಿ, ಪ್ರಕಾಶ ಚೂರಿ, ಗೌತಮ್ ಜಾಧವ್, ವಿ.ಕೆ.ಬಡಿಗೇರ್, ಮಂಜುನಾಥ ಲಿಂಗಣ್ಣನವರ್, ಅನಿಲ್ ಪಾಟೀಲ್, ಮಂಜುನಾಥ ಪಾಟೀಲ್, ಮಹಾಂತೇಶ ಹಿರೇಮಠ, ಶರೀಫ್ ಕೊತ್ವಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts