More

    ಚಿಕ್ಕವಂಕಲಕುಂಟಾ ಶ್ರೀ ಮಾರುತೇಶ್ವರನ ರಥೋತ್ಸವ ನಾಳೆ: 600 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ

    ಯಲಬುರ್ಗಾ: ತಾಲೂಕಿನ ಸುಕ್ಷೇತ್ರ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರೋತ್ಸವ ಅಂಗವಾಗಿ ಫೆ.12 ರಂದು ವಿಜೃಂಭಣೆಯಿಂದ ರಥೋತ್ಸವ ಜರುಗಲಿದೆ.

    ಜಾತ್ರೆ ನಿಮಿತ್ತ ಫೆ.7 ರಂದು ಅಂಕುರಾರ್ಪಣ (ಕಂಕಣ ಬಂಧನ), ಫೆ.8ರಂದು ಧ್ವಜಸ್ತಂಬಕ್ಕೆ ಧ್ವಜಾರೋಹಣ, ಫೆ.9 ರಂದು ಪುಷ್ಪ ಮಂಟಪಾರೋಹಣ ಉತ್ಸವ, ಫೆ.10 ರಂದು ಸಿಂಹಾರೋಹಣ ಉತ್ಸವ, ಫೆ.11ರಂದು ಶ್ರೀ ಪವಮಾನಹೋಮ, ಕಾರ್ಣಿಕೋತ್ಸವ ನೆರವೇರಿಸಲಾಗಿದೆ. ಫೆ.12ರಂದು ಅದ್ದೂರಿ ರಥೋತ್ಸವ ನಡೆಯಲಿದ್ದು, ಸುಕ್ಷೇತ್ರ ಅಂಕಲಿಮಠದ ಶ್ರೀ ವೀರಭದ್ರ ಸ್ವಾಮೀಜಿ, ಶಿವಪ್ಪ ಅಜ್ಜನವರು ಸಾನ್ನಿಧ್ಯ ವಹಿಸುವರು. ಮಾರುತೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ವಿಠಲ್ ಚೌಗಲಾ, ರಥೋತ್ಸವಕ್ಕೆ ಚಾಲನೆ ನೀಡುವರು. ಕಾರ್ಯದರ್ಶಿ ವಿಜಯಕುಮಾರ ಗುಂಡೂರು, ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಸಂಸದ ಸಂಗಣ್ಣ ಕರಡಿ, ಸಚಿವ ಹಾಲಪ್ಪ ಆಚಾರ್, ಮಾಜಿ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಪಾಲ್ಗೊಳ್ಳುವರು. ರಾಜ್ಯ, ಹೊರರಾಜ್ಯಗಳ ಭಕ್ತರು ಭಾಗವಹಿಸಲಿದ್ದಾರೆ.

    600 ವರ್ಷಗಳ ಇತಿಹಾಸ: ಶ್ರೀ ಮಾರುತೇಶ್ವರ ಮಸಾರಿ ಭಾಗದ ಜನರ ಪಾಲಿನ ದೈವ ಸ್ವರೂಪಿಯಾಗಿದ್ದಾನೆ. ದೇವಸ್ಥಾನಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದ್ದು, ಶ್ರೀ ವ್ಯಾಸರಾಯರಿಂದ ಪ್ರತಿಷ್ಠಾಪಿತಗೊಂಡು, ಅಂದಿನಿಂದಲೂ ಪೂಜೆಗೊಳ್ಳುತ್ತ ಬಂದಿದೆ. ಕಾಲಕಾಲಕ್ಕೆ ಭಕ್ತರ ಸಹಕಾರದಿಂದ ಜೀರ್ಣೋದ್ಧಾರಗೊಳ್ಳುತ್ತ, ಸಾಂಪ್ರದಾಯಿಕ ಹೋಮ ಹವನ, ಉತ್ಸವ, ಕಾರ್ಣಿಕ, ಹರಕಥೆ ಹಾಗೂ ಗಣಪತಿ, ಅಭಿಲೇಷ ಮತ್ತು ನವಗ್ರಹ ಮಂಟಪ ಇದ್ದು, ಪ್ರತಿವರ್ಷ ಮಾಘ ಬಹುಳ ಸಪ್ತಮಿಯಂದು ವಿಜೃಂಭಣೆಯಿಂದ ಮಹಾರಥೋತ್ಸವ ಜರುಗುತ್ತದೆ. 65 ಅಡಿ ಎತ್ತರದ ಮಹಾರಾಜಗೋಪುರ, 51 ಅಡಿ ಎತ್ತರದ ಮಹಾರಥ ಹಾಗೂ ನೂತನ ಶಿಲಾಮಂಟಪ ದೇವಸ್ಥಾನಕ್ಕೆ ಮೆರುಗು ತಂದಿದೆ. ಪುರಾತನ ಇತಿಹಾಸ ಹೊಂದಿರುವ ಸುಕ್ಷೇತ್ರ ಚಿಕ್ಕವಂಕಲಕುಂಟಾದ ಶ್ರೀ ಮಾರುತೇಶ್ವರನಲ್ಲಿಗೆ ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳು, ಬಹುರೋಗ ನಿವಾರಣೆಗಾಗಿ 41 ದಿನ ಪ್ರದಕ್ಷಿಣೆ ಮಾಡುವುದು ಪ್ರತೀತಿ.

    ಗೊಲ್ಲರಿಂದ ಹಾಲೋಕುಳಿ ಆಟ: ಇಂದು (ಫೆ.12) ಬೆಳಗ್ಗೆ 6ಕ್ಕೆ ಹುಲಿಹೈದರದ ತಿರುಪತಿ ಆಚಾರ್ಯ ರಾಜಪುರೋಹಿತರಿಂದ ರಥಾಂಗಹೋಮ ನಡೆಯಲಿದೆ. ರಥೋತ್ಸವಕ್ಕೂ ಮುಂಚೆ ಗೊಲ್ಲ ಸಮುದಾಯದವರು ಹಾಲೋಕುಳಿ ಆಡುವುದು ವಿಶೇಷ. ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ಫೆ.12, 13 ರಂದು ಸಂಜೆ ಮ್ಯಾದನೇರಿಯ ಶ್ರೀಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘದಿಂದ ಜನಪದ ಜಾತ್ರೆ ಸಂಗೀತ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಫೆ.17 ರಂದು ಮಾರುತೇಶ್ವರ ಬೆಳ್ಳಿಕವಚ ಉತ್ತರ ಪೂಜೆ, 18 ರಂದು ಪಂಚಾಮೃತ ಅಭಿಷೇಕ, 21 ರಂದು ರಥ ಕಳಸದ ಉತ್ತರ ಪೂಜೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts